-->
LIFESTYLE: ಪತ್ತನಾಜೆಯೆಂಬ ತುಳುನಾಡ ಜೀವನ ಪದ್ಧತಿ

LIFESTYLE: ಪತ್ತನಾಜೆಯೆಂಬ ತುಳುನಾಡ ಜೀವನ ಪದ್ಧತಿ



 

  • ಬಿ.ತಮ್ಮಯ್ಯ (ಲೇಖಕರು)

ಬೇಸ ತಿಂಗಳ ಹತ್ತನೇ ದಿನವನ್ನು ಪತ್ತನಾಜೆ ಎಂದು ತುಳುವರು ಆಚರಣೆ ಮಾಡುತ್ತಾರೆ. ಇದು ಸಾಮಾನ್ಯವಾಗಿ ಮೇ ತಿಂಗಳ 24ರಂದು ಬರುತ್ತದೆ.

ಬೇಶ ತಿಂಗಳ 10ನೇ ದಿನವೇ ಪತ್ತನಾಜೆ. ಈ ದಿನ ಮಳೆಗಾಲದ ಪ್ರಾರಂಭ ಎಂಬ ನಂಬಿಕೆ ತುಳುವರದ್ದು. ಹಿಂದಿನ ಕಾಲದಲ್ಲಿ ಪಗ್ಗು ತಿಂಗಳಲ್ಲಿ ಎಲ್ಲ ರೈತರು ಮಳೆಗಾಲದ ಸ್ವಾಗತಕ್ಕೆ ತಮ್ಮ ಮಳೆಗಾಲದ ತಯಾರಿ ಕೆಲಸಗಳನ್ನು ಮಾಡುವ ಕ್ರಮವಿತ್ತು. ದನದ ಹಟ್ಟಿಗೆ ಬೇಕಾದ ತರಗೆಲೆ ರಾಶಿಯನ್ನು ಮಾಡುವುದು, ಮಳೆಗಾಲಕ್ಕೆ ಬೇಕಾದ ಕಟ್ಟಿಗೆಯನ್ನು ಶೇಖರಿಸಿ ಇಡುವುದನ್ನು ಮಾಡಲಾಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಕಾಂಕ್ರೀಟ್ ಹಟ್ಟಿಗೆ ನೀರು ಹಾಕಿ ತೊಳೆಯುವುದು, ಕಟ್ಟಿಗೆ ಬದಲಿಗೆ ಗ್ಯಾಸ್ ಬಂದಿದೆ. ಆದ್ದರಿಂದ ಪತ್ತನಾಜೆ ತಯಾರಿ ಕೆಲಸ ಈಗಿಲ್ಲ.

ಎಲ್ಲ ಕಡೆ ಚಳಿಗಾಲ, ಮಳೆಗಾಲ ಮತ್ತು ಬೇಸಗೆ ಕಾಲ ಎಂಬ ಮಾತಿದ್ದರೆ ತುಳುನಾಡಿನಲ್ಲಿ ಬೇಸಗೆ ಕಾಲ ಮತ್ತು ಮಳೆಗಾಲ ಇರುತ್ತದೆ. ಈಗಂತೂ ಚಳಿಗಾಲವೇ ಮಾಯವಾಗಿದೆ. 1965ರಲ್ಲಿ ಜನವರಿಗೆ ಮಳೆ ಬರುವುದಿತ್ತು. ಶಾಲಾ ವಾರ್ಷಿಕೋತ್ಸವ ಫೆಬ್ರವರಿ ಮೊದಲು ಮುಗಿಸಬೇಕು. ಇಲ್ಲವಾದರೆ ಮಳೆ ಅಡಚಣೆ.

ಮಳೆಗಾಲದಲ್ಲಿ ಇಲ್ಲಿ ಯಾವ ಕಾರ್ಯಕ್ರಮವನ್ನೂ ಮಾಡುತ್ತಿರಲಿಲ್ಲ. ಅಷ್ಟು ದೊಡ್ಡ ರೀತಿಯಲ್ಲಿ ಮಳೆ ಬರುತ್ತಿತ್ತು. ಎಲ್ಲ ಯಕ್ಷಗಾನದ ಮೇಳಗಳು ಪತ್ತನಾಜೆ ಸೇವೆ ಮುಗಿಸಿ, ಮೇಳವನ್ನು ಬಂದ್ ಮಾಡುತ್ತವೆ. ಎಲ್ಲ ಕುಟುಂಬ ದೈವಗಳ ನೇಮ ಅಗೇಲು ಪರ್ವವನ್ನು ಪತ್ತನಾಜೆ ಮೊದಲು ಮುಗಿಸಿ ದೈವಸ್ಥಾನಗಳಿಗೆ ಬಾಗಿಲು ಹಾಕಲಾಗುತ್ತದೆ.

ದೇವಸ್ಥಾನಗಳಲ್ಲಿನ ಜಾತ್ರೆ, ನಡಾವಳಿ, ಬಲಿ ಎಲ್ಲ ಮುಗಿಸಿ, ಪತ್ತನಾಜೆ ವಿಶೇಷ ಸೇವೆ ಸಲ್ಲಿಸಿ ಮೂರು ಹೊತ್ತು ಪೂಜೆ ಮಾತ್ರ ನಡೆಸಲಾಗುತ್ತದೆ. ಊರಿನ ದೈವಗಳಿಗೆ ಪತ್ತನಾಜೆ ನಂತರ ಜಾತ್ರೆ, ನೇಮ, ಅಗೇಲು, ತಂಬಿಲ, ಆಟ, ನಾಟಕ ಯಾವುದು ಇಲ್ಲ. ಪತ್ತನಾಜೆ ಪೂಜೆ ಸಲ್ಲಿಸಿ, ಬಾಗಿಲು ಹಾಕುತ್ತಾರೆ. ಮದುವೆ, ಮುಂಜಿ ಯಾವುದೇ ಕಾರ್ಯಕ್ರಮ ನಡೆಯುವುದಿಲ್ಲ. ಪತ್ತನಾಜೆಗೆ ಬೇಟೆಯಾಡಿ ಪ್ರಾಣಿಗಳನ್ನು ಕೃಷಿ ಕ್ಷೇತ್ರದಿಂದ ದೂರ ಮಾಡಿಸುವ ಕ್ರಮವಿತ್ತು. ಮಾಂಸಾಹಾರಿಗಳು ಪತ್ತನಾಜೆಗೆ ಮಾಂಸದ ಊಟ ಮಾಡಿ ಏಣೆಲು ಬೇಸಾಯ ತಯಾರಿಗೆ ತೊಡಗುತ್ತಾರೆ. ಎಲ್ಲ ತುಳುವರ ಗಮನ ಕೃಷಿಯ ಕಡೆಗೆ ಹೋಗುತ್ತದೆ. ಪತ್ತನಾಜೆಗೆ ಹತ್ತು ಹನಿ ಮಳೆ ಬೀಳಲೇಬೇಕು ಎಂಬ ನಂಬಿಕೆ ತುಳುವರಲ್ಲಿದೆ. ಪತ್ತಾಜೆಯಂದು ತುಳುವರೆಲ್ಲರೂ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಮಳೆಗಾಲದ ಪ್ರಾರಂಭದ ದಿನವಾಗಿ ತುಳುವರ ಮನದಲ್ಲಿ ಸ್ಥಿರವಾಗಿದೆ.

 

Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ