
NEWS: ಪಿಲಿಕುಳದಲ್ಲಿ ರಥಬೀದಿ ಸರಕಾರಿ ಕಾಲೇಜಿನ ರೇಂಜರ್ಸ್, ರೋವರ್ಸ್ ವಾರ್ಷಿಕ ವಿಶೇಷ ಶಿಬಿರ
ಮಂಗಳೂರು ರಥಬೀದಿಯಲ್ಲಿರುವ ಡಾ. ಪಿ. ದಯಾನಂದ ಪೈ-ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಭರವಸಾ ಕೋಶ ಮತ್ತು ರೋವರ್ಸ್ ರೇಂಜರ್ಸ್ ಘಟಕದ ವತಿಯಿಂದ ವಾರ್ಷಿಕ ವಿಶೇಷ ಶಿಬಿರ ಪಿಲಿಕುಳದ ಭಾರತ್ ಸ್ಕೌಟ್ ಮತ್ತು ಗೈಡ್ ಜಿಲ್ಲಾ ತರಬೇತಿ ಕೇಂದ್ರದಲ್ಲಿ ನಡೆಯಿತು.
ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ರಾಜ್ಯ ಸಂಘಟನಾ ಆಯುಕ್ತ ಭರತ್ ರಾಜ್
ಅವರು ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಕಾಲೇಜಿನ ವಾರ್ಷಿಕ ಶಿಬಿರಗಳಲ್ಲಿ ಭಾಗವಹಿಸುವುದರಿಂದ ತಮ್ಮ ಕೌಶಲ್ಯಗಳನ್ನು ಬೆಳೆಸಿಕೊಳ್ಳಬಹುದು ಎಂದರು.
ಇನ್ನೋರ್ವ ಅತಿಥಿ ಜಿಲ್ಲಾ ಕಾರ್ಯಾಧ್ಯಕ್ಷ ಪ್ರತಿಮಾ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಶಿಬಿರಗಳಲ್ಲಿ ಭಾಗವಹಿಸುವುದರಿಂದ ಸಾಮಾಜಿಕವಾಗಿ ವ್ಯಕ್ತಿತ್ವದ ಬೆಳವಣಿಗೆ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಿನ್ಸಿಪಾಲ್ ಪ್ರೊ. ಜಯಕರ ಭಂಡಾರಿ ಎಂ ಮಾತನಾಡಿ, ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಸಾಮಾಜಿಕವಾಗಿ ಬೆರೆಯಬಹುದು ಎಂದರು.
ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ವಿನೋದ್ ಚೇವಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಐ.ಕ್ಯೂ.ಎ.ಸಿಯ ಸಂಚಾಲಕರಾದ ದೇವಿ ಪ್ರಸಾದ್, ಐ.ಕ್ಯೂ.ಎ.ಸಿಯ ಸಹ ಸಂಚಾಲಕರಾದ ಡಾ. ಜ್ಯೋತಿಪ್ರಿಯ, ಹಿರಿಯ ರೇಂಜರ್ಸ್ ವಿದ್ಯಾರ್ಥಿಗಳಾದ ಪ್ರೀತಿಕಾ, ನಿವೇದಿತಾ ಉಪಸ್ಥಿತರಿದ್ದರು. ರೇಂಜರ್ಸ್ ಘಟಕದ ಸಂಚಾಲಕರಾದ ಡಾ. ಅಪರ್ಣ ಆಳ್ವ ಸ್ವಾಗತಿಸಿದರು.ರೋವರ್ಸ್ ಘಟಕದ
ಸಂಚಾಲಕರಾದ ಡಾ. ಪುರುಷೋತ್ತಮ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.. ಪ್ರೇಕ್ಷಿತಾ ಪ್ರಾರ್ಥಿಸಿದರು. ಜಯಶ್ರೀ ವಂದಿಸಿದರು. ಸುಮಾರು ೩೬ ರೋವರ್ಸ್, ರೇಂಜರ್ಸ್ ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು. ಎರಡು ದಿನಗಳ ಈ ಶಿಬಿರದಲ್ಲಿ ಪ್ರಥಮ ಚಿಕಿತ್ಸೆ, ಸರ್ವಧರ್ಮ ಪ್ರಾರ್ಥನೆ, ವ್ಯಾಯಾಮಗಳ, ಹಗ್ಗಗಳಿಂದ ಮಾಡುವ ವಿವಿಧ ರೀತಿಯ ಗಂಟುಗಳ ತಯಾರಿಯ ಬಗ್ಗೆ ತರಬೇತಿ ನೀಡಲಾಯಿತು.