![CRIME: ಅನ್ನಬಾಗ್ಯದ ಅಕ್ಕಿ ಕಳ್ಳಸಾಗಾಟ - ವಾಹನ ಸಹಿತ ಆರೋಪಿ ಬಂಧನ CRIME: ಅನ್ನಬಾಗ್ಯದ ಅಕ್ಕಿ ಕಳ್ಳಸಾಗಾಟ - ವಾಹನ ಸಹಿತ ಆರೋಪಿ ಬಂಧನ](https://blogger.googleusercontent.com/img/b/R29vZ2xl/AVvXsEhX0FXuucRw0TfHoe2vCCClqhsEXn01vIQfXT9kaCOol3n15Rc6-1FRK34KoK_Brwq1DYgWACS3BeAMC1lQqoQiJr0TO_FtGdqgK_5ZlXWPU7x2WXGoEO_PVA_j_nNKRIe1NWL3vfMKhiUaS3LDa8yybhFl1RIMuvpki09hMoR2vLWh9mDdJHeIWO9K/s320/WhatsApp%20Image%202022-05-19%20at%2010.20.43%20AM.jpeg)
CRIME: ಅನ್ನಬಾಗ್ಯದ ಅಕ್ಕಿ ಕಳ್ಳಸಾಗಾಟ - ವಾಹನ ಸಹಿತ ಆರೋಪಿ ಬಂಧನ
ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಿಂದ ಮೂಡಿಗೆರೆ ಕಡೆಗೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಚಾರ್ಮಾಡಿಯ ಚೆಕ್ ಪೋಸ್ಟಿನಲ್ಲಿ ಧರ್ಮಸ್ಥಳ ಪೋಲೀಸರು ವಶಪಡಿಸಿಕೊಂಡಿದ್ದಾರೆ.
ವಾಹನ ಚಾಲಕ ಮೂಡಿಗೆರೆ ನಿವಾಸಿ ವಜನಯ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ದೇ ಪೊಲೀಸರು ಪಿಕಪ್ ನಲ್ಲಿದ್ದ 50 ಕೆಜಿ ತೂಕದ 59 ಪ್ಲಾಸ್ಟಿಕ್ ಚೀಲ ಅಕ್ಕಿ ಹಾಗೂ 25 ಕೆಜಿ ತೂಕದ 14 ಚೀಲ ಅಕ್ಕಿ ಹೀಗೆ ಒಟ್ಟು 33 ಕ್ವಿಂಟಾಲ್ ಅಕ್ಕಿಯನ್ನು ಹಾಗೂ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದಿರುವ ಅಕ್ಕಿಯ ಮೌಲ್ಯ 49500 ರೂಪಾಯಿ ಎಂದು ಅಂದಾಜಿಸಲಾಗಿದೆ.
ಚಾರ್ಮಾಡಿ ಗೇಟಿನಲ್ಲಿ ಪೊಲೀಸರು ಪಿಕಪ್ ವಾಹನವನ್ನು ತಡೆದು ನಿಲ್ಲಿಸಿ ಪರಿಶೀಲನೆ ನಡೆಸಿದಾಗ ವಾಹನ ದಲ್ಲಿರುವ ಅಕ್ಕಿ ಅನ್ನಭಾಗ್ಯ ಯೋಜನೆಯ ಅಕ್ಕಿಯಂತೆ ಕಂಡು ಬಂದಿದ್ದು ಅನುಮಾನಗೊಂಡು ಚಾಲಕನನ್ನು ವಿಚಾರಣ ನಡೆಸಿದಾಗ ಚಾಲಕ ಇದನ್ನು ಒಪ್ಪಿಕೊಂಡಿದ್ದಾನೆ. ಬಳಿಕ ಸ್ಥಳಕ್ಕೆ ಆಹಾರ ಇಲಾಖೆಯ ಅಧಿಕಾರಿಗಳನ್ನು ಕರೆಸಲಾಗಿದ್ದು ಅವರು ಪರಿಶೀಲನೆ ನಡೆಸಿದಾಗ ಇದು ಮೇ ತಿಂಗಳ ಅನ್ನಭಾಗ್ಯದ ಅಕ್ಕಿಯನ್ನು ಹೋಲುತ್ತಿದೆ ಎಂದು ಖಚಿತಪಡಿಸಿದ್ದಾರೆ. ಬಳಿಕ ಚಾಲಕ ಹಾಗೂ ಅಕ್ಕಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.