
Polali Yakshotsava: ಯಕ್ಷಕಲಾ ಪೊಳಲಿ ತ್ರಿಂಶತ್ ಸಂಭ್ರಮ: 27ರಂದು ಪೊಳಲಿ ಯಕ್ಷೋತ್ಸವ
ಬಂಟ್ವಾಳ:
ಯಕ್ಷಕಲಾ ಪೊಳಲಿಯ ತ್ರಿಂಶತ್ ಸಂಭ್ರಮ ಅಂಗವಾಗಿ ಪೊಳಲಿ ಯಕ್ಷೋತ್ಸವ 2025 ಕಾರ್ಯಕ್ರಮ ಸೆ.27ರಂದು
ಬೆಳಗ್ಗೆ 8ರಿಂದ ರಾತ್ರಿ 10.30ರವರೆಗೆ ಪ್ರಶಸ್ತಿ ಪ್ರದಾನ, ಗೌರವಾರ್ಪಣೆ, ಸನ್ಮಾನ, ಸಂಸ್ಮರಣೆ
ಹಾಗು ಬಯಲಾಟದೊಂದಿಗೆ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ರಾಜಾಂಗಣದಲ್ಲಿ ನಡೆಯಲಿದೆ ಎಂದು
ಯಕ್ಷಕಲಾ ಪೊಳಲಿ ಸಂಚಾಲಕ ವೆಂಕಟೇಶ ನಾವಡ ಪೊಳಲಿ ತಿಳಿಸಿದ್ದಾರೆ.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಶನಿವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಸಂಪೂರ್ಣ ಸಹಕಾರದೊಂದಿಗೆ ಕಾರ್ಯಕ್ರಮಗಳು ನಡೆಯಲಿವೆ ಎಂದವರು ತಿಳಿಸಿದರು.1996ರಲ್ಲಿ ಆರಂಭಗೊಂಡ ಈ ಸಂಸ್ಥೆ ಇಂದಿನವರೆಗೆ ಯಕ್ಷಗಾನ ಬಯಲಾಟ, ತಾಳಮದ್ದಳೆ, ಗಾನವೈಭವ, ಮಹಿಳಾ ಯಕ್ಷಗಾನ, ಕೀರ್ತಿಶೇಷ ಕಲಾವಿದರ ಸಂಸ್ಮರಣೆ, 150ಕ್ಕೂ ಮಿಕ್ಕಿ ಯಕ್ಷಗಾನ ಕಲಾವಿದರ ಸನ್ಮಾನ, ಕಲಾಪೋಷಕರ ಗೌರವಾರ್ಪಣೆ, ಯಕ್ಷಗಾನ ಸಂಘಗಳಿಗೆ ಯಕ್ಷಕಲಾ ಗೌರವ ನೀಡುತ್ತಾ ಬಂದಿದ್ದು, ಈ ವರ್ಷ ಸಂಸ್ಥೆಯ 30ನೇ ವರ್ಷವಾಗಿದ್ದು, ಕಾರ್ಯಕ್ರಮಗಳು ಬೆಳಗ್ಗೆ 8.30ರಿಂದ ನಡೆಯಲಿದೆ. ಬೆಳಗ್ಗೆಯಿಂದ ಸಂಜೆ 5.30ರವರೆಗೆ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರಿಂದ ಜ್ವಾಲಾ ಪ್ರತಾಪ, ಬಬ್ರುವಾಹನ ಕಾಳಗ, ದಮಯಂತಿ ಪುನಃ ಸ್ವಯಂವರ ಯಕ್ಷಗಾನ ಬಯಲಾಟ ನಡೆಯಲಿದ್ದು, ಬಳಿಕ ಸಭಾ ಕಾರ್ಯಕ್ರಮ, ಸಂಜೆ 7ರಿಂದ ಯಕ್ಷರಾಘವ ಜನ್ಸಾಲೆ ಪ್ರತಿಷ್ಠಾನದಿಂದ ಮಧುರಾ ಮಹೀಂದ್ರ ತೆಂಕುತಿಟ್ಟಿನ ಯಕ್ಷಗಾನ ಬಯಲಾಟ ಸಂಪನ್ನಗೊಳ್ಳಲಿದೆ ಎಂದರು.
ಪ್ರಶಸ್ತಿ, ಸನ್ಮಾನ:
ಸಂಜೆ 5.30ಕ್ಕೆ ನಡೆಯುವ ಸಬಾ ಕಾರ್ಯಕ್ರಮದಲ್ಲಿ ಮಂಗಳೂರು ಕೆಎಂಸಿ ಹೃದ್ರೋಗ ತಜ್ಞ ಡಾ. ಪದ್ಮನಾಭ ಕಾಮತ್ ಅವರಿಗೆ ಪೊಳಲಿ ಯಕ್ಷೋತ್ಸವ ಪ್ರಶಸ್ತಿ ಪ್ರದಾನ, ಶ್ರೀ ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘ ಮಂಗಳೂರು ಹಾಗೂ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂಡಳಿ ಕೈರಂಗಳ ಇವರಿಗೆ ಪೊಳಲಿ ಯಕ್ಷಕಲಾ ಗೌರವ, ಭಾಸ್ಕರ ರೈ ಕುಕ್ಕುವಳ್ಳಿ, ಮಾಂಬಾಡಿ ಸುಬ್ರಹ್ಮಣ್ಯ ಭಟ್, ಅಡೂರು ಲಕ್ಷ್ಮೀನಾರಾಯಣ ರಾವ್, ಕೊಳ್ತಿಗೆ ನಾರಾಯಣ ಗೌಡ, ಉಬರಡ್ಕ ಉಮೇಶ್ ಶೆಟ್ಟಿ, ಜಬ್ಬಾರ್ ಸಮೋ ಸಂಪಾಜೆ, ಡಾ. ವಸಂತ ಕುಮಾರ್ ಪೆರ್ಲ, ಶಿವರಾಮ ಪಣಂಬೂರು, ಗಿರೀಶ್ ಹೆಗ್ಡೆ ಪುತ್ತೂರು, ಜಗದಾಭಿರಾಮ ಸ್ವಾಮಿ ಪಣಂಬೂರು, ನಾ.ಕಾರಂತ ಪೆರಾಜೆ, ನಗ್ರಿ ಮಹಾಬಲ ರೈ ಹಾಗು ಮಹಾಬಲೇಶ್ವರ ಭಟ್ ಭಾಗಮಂಡಲ ಅವರಿಗೆ ಸನ್ಮಾನ ನಡೆಯಲಿದೆ. ಇದೇ ವೇಳೆ ಪಾತಾಳ ವೆಂಕಟರಮಣ ಭಟ್, ಕೋಡಿ ಕೃಷ್ಣ ಗಾಣಿಗ, ಬಂಟ್ವಾಳ ಜಯರಾಮ ಆಚಾರ್ಯ, ಮುಖ್ಯಪ್ರಾಣ ಕಿನ್ನಿಗೋಳಿ, ಸಿದ್ಧಕಟ್ಟೆ ಪದ್ಮನಾಭ ಶೆಟ್ಟಿಗಾರ್, ಮುಂಡಾಜೆ ಸದಾಶಿವ ಶೆಟ್ಟಿ, ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್, ಪಿ.ವಿ.ಪರಮೇಶ್ ಕದ್ರಿ ಅವರ ಸಂಸ್ಮರಣೆಯನ್ನು ಹಿರಿಯ ಕಲಾವಿದ ಉಜಿರೆ ಅಶೋಕ್ ಭಟ್ ಮಾಡಲಿದ್ದಾರೆ. ಪೊಳಲಿ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ ಆಶೀರ್ವಚನ ಮಾಡಲಿದ್ದು, ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅಧ್ಯಕ್ಷತೆ ವಹಿಸುವರು. ಜ್ಯೋತಿಷಿ ಕೋಡಿಮಜಲು ಅನಂತಪದ್ಮನಾಭ ಉಪಾಧ್ಯಾಯ, ಪೊಳಲಿ ಪ್ರಧಾನ ಅರ್ಚಕ ಮಾಧವ ಭಟ್ ಪೊಳಲಿ, ಆಡಳಿತ ಮೊಕ್ತೇಸರ ಡಾ. ಎ.ಮಂಜಯ್ಯ ಶೆಟ್ಟಿ ಉಪಸ್ಥಿತಿಯಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ಸುವರ್ಣ ಪ್ರತಿಷ್ಠಾನದ ಅಧ್ಯಕ್ಷ ಪ್ರಭಾಕರ ಸುವರ್ಣ ಕರ್ನಿರೆ, ಬಿಲ್ಲವಾಸ್ ದುಬೈ ಅಧ್ಯಕ್ಷ ಸತೀಶ್ ಪೂಜಾರಿ ಬೆಳಪು, ಕಲಾಪೋಷಕ ರಾಜೇಂದ್ರ ಕಕ್ಯಪದವು ಉಪಸ್ಥಿತರಿರುವರು. ಕದ್ರಿ ನವನೀತ ಶೆಟ್ಟಿ ಅಭಿನಂದನಾ ಭಾಷಣ ಮಾಡುವರು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಯೋಜಕ ಜನಾರ್ದನ ಅಮ್ಮುಂಜೆ, ಆಯೋಜಕರಾದ ಲೋಕೇಶ್ ಭರಣಿ, ಮೋಹನ್ ಬಿಲ್ವಪತ್ರ ಉಪಸ್ಥಿತರಿದ್ದರು.