
MEETING: ಸಂಚಾರಿ ನಿಯಮ ಪಾಲಿಸಿ, ಮಾದರಿಯಾಗಲು ಜಿಲ್ಲಾಧಿಕಾರಿ ಕರೆ
ಮಂಗಳೂರು: ಜಿಲ್ಲೆಯ ಆಟೋ ಹಾಗೂ ಟ್ರಕ್ ಚಾಲಕರು ಸಂಚಾರಿ ನಿಯಮಗಳನ್ನು ಪಾಲಿಸುವ ಮೂಲಕ ಇತರರಿಗೆ ಮಾದರಿಯಾಗಬೇಕು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು ಕರೆ ನೀಡಿದರು.
ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಆಟೋ ರಿಕ್ಷಾ ಹಾಗೂ ಟ್ರಕ್ ಚಾಲಕ-ಮಾಲಕರ ಕುಂದುಕೊರತೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಬೈಕಂಪಾಡಿಯ ಕೈಗಾರಿಕಾ ಪ್ರದೇಶದಲ್ಲಿ ಹಾಗೂ ಜೋಕಟ್ಟೆಯಲ್ಲಿ ಸ್ಥಳ ನಿಗದಿಯಾಗಿದ್ದು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು, ಟ್ರಕ್ ಚಾಲಕ ಮಾಲಕರಿಗೆ ಕಿರುಕುಳ ನೀಡುತ್ತಿದ್ದರೆ ಅಂತಹವರ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ವರ್ಣೇಕರ್, ಆಟೋ ಚಾಲಕ-ಮಾಲಕ ಸಂಘದ ಗೌರವಾಧ್ಯಕ್ಷ ಅಶೋಕ್ ಶೆಟ್ಟಿ, ಟ್ರಕ್ ಅಸೋಸಿಯೇಶನ್ ಅಧ್ಯಕ್ಷ ಸುನಿಲ್ ಡಿ'ಸೋಜ, ಗೌರವ ಸಲಹೆಗಾರ ಬಿ.ಎಸ್. ಚಂದ್ರು, ಪ್ರಧಾನ ಕಾರ್ಯದರ್ಶಿ ಸುಶಾಂತ್ ಶೆಟ್ಟಿ ಹಾಗೂ ಇತೆರೆ ಅಧಿಕಾರಿಗಳು ಮತ್ತು ಟ್ರಕ್, ಆಟೋ ಚಾಲಕ-ಮಾಲಕರು ಉಪಸ್ಥಿತರಿದ್ದರು.