Collection: ಹಳೆ ಪತ್ರಿಕೆಗಳ ತಿಜೋರಿ ಮುತ್ತಪ್ಪ ಪೂಜಾರಿ

Collection: ಹಳೆ ಪತ್ರಿಕೆಗಳ ತಿಜೋರಿ ಮುತ್ತಪ್ಪ ಪೂಜಾರಿ


 

ಹಳೆ ಪತ್ರಿಕೆಗಳ ತಿಜೋರಿ ಮುತ್ತಪ್ಪ ಪೂಜಾರಿ

 

ಬರಹ: ಡಾ.ರಶ್ಮಿ ಅಮ್ಮೆಂಬಳ , ಸಹಾಯಕ ಪ್ರಾಧ್ಯಾಪಕರು ಮತ್ತು ಸಂಶೋಧಕರು

ನಮ್ಮ ನಿಮ್ಮಲ್ಲಿ ಹಳೇ ಪತ್ರಿಕೆ ರಾಶಿ ಇದ್ದರೆ ಏನು ಮಾಡುತ್ತೇವೆ? ಚೌಕಾಸಿ ಮಾಡಿಯಾದರೂ ಯಾರಾದರೂ ಹಳೇ ಪೇಪರ್, ಕಬ್ಬಿಣ ಎಂದು ಕೇಳಿಕೊಂಡು ಬರುವವರಿಗೆ ಮಾರಿಬಿಡುತ್ತೇವೆ. ಆದರೆ ಬಂಟ್ವಾಳ ತಾಲೂಕಿನಲ್ಲಿ ಸುಮಾರು 50 ವರ್ಷಗಳಿಂದೀಚೆಗಿನ ಹಳೇ ಪೇಪರುಗಳನ್ನು ಒಟ್ಟುಗೂಡಿಸಿ, ಅವುಗಳನ್ನು ಆಗಾಗ ತಡವುತ್ತಾ, ಗತಕಾಲದ ಸ್ಮರಣೆಯನ್ನು ಮಾಡುವ ಸಂಗ್ರಾಹಕರೊಬ್ಬರು ಇದ್ದಾರೆ. ಇವರು ಮುತ್ತಪ್ಪ ಪೂಜಾರಿ. ವಾಸಿಸುವ ಜಾಗ ಬಂಟ್ವಾಳದ ಚಂಡ್ತಿಮಾರ್. ಈ ಕುರಿತು ಡಾ. ರಶ್ಮಿ ಅಮ್ಮೆಂಬಳ ಬರೆದ ಲೇಖನ ಇಲ್ಲಿದೆ.

  

ಸಾಮಾನ್ಯವಾಗಿ ಹೆಚ್ಚಿನ ಮನೆಗಳಲ್ಲಿ ಹಳೇ ಪತ್ರಿಕೆ ರಾಶಿ ಇದ್ದೇ ಇರುವುದು. ಅದನ್ನೊಂದು ಸಲ ಮನೆ ಬಾಗಿಲಿಂದಾಚೆ ಕಳಿಸಿದರೆ ಸಾಕು ಎಂದುಕೊಂಡು ಚೌಕಾಸಿ ಮಾಡಿಯಾದರೂ ಅನೇಕರು ಹಳೆಯ ಪತ್ರಿಕೆಗಳನ್ನು ಒಂದಷ್ಟು ದುಡ್ಡಿಗೆ ಮಾರಿಬಿಡುವುದಿದೆ

ಆದರೆ ಇದಕ್ಕೆಲ್ಲಾ ಅವಕಾಶ ನೀಡದೆ ಬಂಟ್ವಾಳ ತಾಲೂಕಿನಲ್ಲಿ ಯಾರ ಗಮನಕ್ಕೂ ಬಾರದ ಹಳೆಯ ಪತ್ರಿಕೆ ಸಂಗ್ರಹಗಾರರೊಬ್ಬರಿದ್ದಾರೆಂದರೆ ಆಶ್ಚರ್ಯವಾಗಬಹುದು. ಯಾಕೆಂದರೆ ಇವರಿಗೆ ಸುಮಾರು 86ವರ್ಷ. ಇಳಿವಯಸ್ಸಿನಲ್ಲಿಯೂ ಪತ್ರಿಕೆ ಸಂಗ್ರಹ ಮಾಡಿ ಏನ್ಮಾಡ್ತಾರೋ? ಎಂದು ಕೆಲವರು ಯೋಚಿಸಬಹುದು

 

ಹಿರಿಯರಾದ ಅವರಿಗಿರುವುದು ಜ್ಞಾನದಾಹವೆಂದರೆ ತಪ್ಪಾಗಲಾರದು. ಯಾಕೆಂದರೆ ಅವರಲ್ಲಿ ಹೆಸರಾಂತ ಪತ್ರಿಕೆಗಳಾದ ಉದಯವಾಣಿ’, ಕನ್ನಡಪ್ರಭ’ದ ಸಂಗ್ರಹವೇ ಇದೆ. ನಮ್ಮ ಊರಿನ ಯಾವುದೇ ಲೈಬ್ರರಿಯಲ್ಲಿ ಇರದ ಹಲವು ವರ್ಷಗಳಷ್ಟು ಅಂದರೆ ಸುಮಾರು ಐವತ್ತು ವರ್ಷಗಳಷ್ಟು  ಹಿಂದಿನ  ಹಳೆಯ ಪತ್ರಿಕೆಗಳು ಇವರಲ್ಲಿವೆ.

 ಸುಮಾರು 50 ವರ್ಷಗಳಿಗಿಂತಲೂ ಹಿಂದಿನ ಹಳೆಯ ಪತ್ರಿಕೆಗಳನ್ನು ಯಾವುದೇ ಕಾರಣಕ್ಕೂ  ಮಾರಾಟ ಮಾಡದೆ ತಮ್ಮಲ್ಲಿಯೇ ಇಟ್ಟುಕೊಂಡಿರುವ ಅಪರೂಪದ ಹಿರಿಯ ಜೀವ ಇರುವುದು ಬಂಟ್ವಾಳ ತಾಲೂಕಿನ ಚಂಡ್ತಿಮಾರ್ ಎನ್ನುವ ಊರಿನಲ್ಲಿ! ಅವರೇ! ಜೀವನೋತ್ಸಾಹದ ಚಿಲುಮೆಯೇ ಆಗಿರುವ ಸಿ.ಮುತ್ತಪ್ಪ ಪೂಜಾರಿ. ಸಮಾಜವಾದಿ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವ ಮುತ್ತಪ್ಪ ಪೂಜಾರಿಯವರು ಓರ್ವ ಕೃಷಿಕರಾಗಿದ್ದವರು.


ಮಾತ್ರವಲ್ಲದೆ ಬೀಡಿ ಉದ್ಯಮವನ್ನೇ ನೆಚ್ಚಿಕೊಂಡವರು. ವಯೋಮಾನದಲ್ಲಿಯೂ ಬೀಡಿ ಬ್ರಾಂಚ್ ನಡೆಸುತ್ತಿದ್ದಾರೆ. ಇವರ ತಂದೆ ಕೃಷ್ಣ ಪೂಜಾರಿ, ತಾಯಿ ತುಂಗಮ್ಮ. ಮೂರ್ತೇಗಾರಿಕೆ ವೃತ್ತಿಯನ್ನು ಕುಟುಂಬದ ಕಸುಬನ್ನಾಗಿಸಿದ್ದ ಇವರ ತಂದೆತಾಯಿಗೆ ಆಗಿನ ಪರಿಸ್ಥಿತಿಯಲ್ಲಿ ಹಿರಿಯ ಮಗ ಮುತ್ತಪ್ಪರನ್ನು ಶಾಲೆಗೆ ಕಳುಹಿಸುವ ಆಸಕ್ತಿ ಮತ್ತು ಸಾಮರ್ಥ್ಯ ಎರಡೂ ಇರಲಿಲ್ಲವೆಂದರೆ ತಪ್ಪಾಗಲಾರದು.


 ಮುತ್ತಪ್ಪರೇ ಹೇಳುವಂತೆ ಶಾಲೆಗೆ ಹೋಗಿ ವಿದ್ಯೆ ಕಲಿಯಲು ಅಪಾರ ಆಸಕ್ತಿಯಿದ್ದರೂ ಮನೆಯಲ್ಲಿ ಬಡತನದಿಂದಾಗಿ ತಂದೆ-ತಾಯಿ ಪ್ರೋತ್ಸಾಹ ನೀಡಿರಲಿಲ್ಲ. ಬಾಲ್ಯದಲ್ಲೇ ಹಿರಿಯರೊಂದಿಗೆ ಹೆಚ್ಚು ಬೆರೆಯುತ್ತಿದ್ದ ಮುತ್ತಪ್ಪರು ಅವರಿವರ ಸಹಾಯ ಪಡೆದು ಮೂರನೇ ತರಗತಿ ಕಲಿಯುತ್ತಿದ್ದಾಗ ಅವರ ಕಾಲಿನ ಪಾದಕ್ಕೆ ಚುಚ್ಚಿದ ಅದೊಂದು ಮರದ ತುಂಡು  ಮುಂದೆ ಶಾಲೆಗೆ ತೆರಳಲು ಅಡ್ಡಿಯನ್ನುಂಟು ಮಾಡಿತ್ತು.  ಅಲ್ಲದೆ  ಎಳೆಯ ತಮ್ಮಂದಿರನ್ನು ಲಾಲಿಸಲು ತಾಯಿಗೆ ಸಹಾಯ ಮಾಡುವುದಕ್ಕಾಗಿ ವಿದ್ಯಾಭ್ಯಾಸ ಅಲ್ಲಿಗೇ ಮೊಟಕುಗೊಂಡಿತು. ಅದರೆ ಎಳವೆಯಿಂದಲೇ ಅಪಾರ ಜ್ಞಾನದಾಹಿಯಾಗಿರುವ ಮುತ್ತಪ್ಪರು ಹೇಗಾದರೂ ಮಾಡಿ ಶಿಕ್ಷಣ ಮುಂದುವರಿಸಲು ತೀರ್ಮಾನಿಸಿದ್ದರು. ಸಂದರ್ಭದಲ್ಲಿ ನೆರೆಕರೆಯವರಾದ ದೇವು ಪೂಜಾರಿ, ಕಮಲಾಕ್ಷ ಪೈ, ಮೊದಲಾದವರಿಂದ ೫೦  ಪೈಸೆ,   ರೂಪಾಯಿ ಸಂಗ್ರಹಿಸಿ ಮತ್ತೆ ಶಾಲೆಗೆ ತೆರಳಿದ ಇವರು ಸ್ಕೌಟ್ಗೂ ಸೇರಿಕೊಂಡಿದ್ದರು. ಆಗೆಲ್ಲಾ ಮನೆಯಲ್ಲಿ ಬೀಡಿಕಟ್ಟಿ, ಮೂರ್ತೇಗಾರಿಕೆಗೆ ಸಹಾಯಮಾಡಿ ಶಾಲೆಗೆ ತೆರಳುತ್ತಿದ್ದ ಮುತ್ತಪ್ಪರನ್ನು ಕಂಡು ತರಗತಿಯ ಒಡನಾಡಿಗಳು ಕಲಿದೆಪ್ಪುನಾಯೆ (ಕಳ್ಳು ತೆಗೆಯುವವ) ಎಂದು ತಮಾಷೆ ಮಾಡುತ್ತಿದ್ದರಂತೆ. ಅವರಿಗೆಲಾ ಇರುವ ಪರಿಸ್ಥಿತಿಯನ್ನು ನೇರವಾಗಿ ಹೇಳಿ ಬಾಯಿ ಮುಚ್ಚಿಸುತ್ತಿದ್ದರಂತೆ ಸ್ವಾಭಿಮಾನಿ ಮುತ್ತಪ್ಪ.  ಮಾತ್ರವಲ್ಲದೆ ಅವರುತನ್ನ ಶಾಲಾ ಒಡನಾಡಿಗಳಾದ ಮುಹಮ್ಮದ್, ಅಬ್ದುಲ್ಹಮೀದ್, ಗೋಪಿನಾಥ್ ರೈ, ಮಹಾಬಲ, ರಾಜಾರಾಮ ಶೆಟ್ಟಿಯವರನ್ನು ಈಗಲೂ ನೆನಪಿಸಿಕೊಳ್ಳುತ್ತಾರೆ. ಏಳನೆಯ ತರಗತಿ ಹಿಂದಿ ಭಾಷಾ ಪರೀಕ್ಷೆಯಲ್ಲಿ ೮೦ ಅಂಕಗಳಿಸಿದ್ದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಮುತ್ತಪ್ಪ.

ಪ್ರೌಢಶಾಲೆಗೂ ತೆರಳಿದ ಇವರು ೮ನೇ ತರಗತಿವರೆಗೆ ಕಲಿತು ಸ್ವಂತ ನಿರ್ಧಾರದೊಂದಿಗೆ ವಿದ್ಯಾಭ್ಯಾಸಕ್ಕೆ ತಿಲಾಂಜಲಿಯಿಟ್ಟು ತಮ್ಮಂದಿರಿಗೆ ಓದಿಸುವ ಪಣತೊಟ್ಟಿದ್ದರು. ಅಗಿನ ಸಂದರ್ಭದಲ್ಲಿ ಎಂಟನೆಯ ತರಗತಿ ತೇರ್ಗಡೆಯಾದ ಮುತ್ತಪ್ಪರಿಗೆ ಶಿಕ್ಷಕರಾಗುವಂತೆ ಅವರಿವರು ಒತ್ತಾಯಿಸಿದರೂ ಸ್ವತಂತ್ರವಾಗಿ ತಾನು ದುಡಿಯಬೇಕೆಂದು ಬಯಸಿದ ಮುತ್ತಪ್ಪರು ಸುಮಾರು ಇಪ್ಪತ್ತರ ವಯಸ್ಸಿನಲ್ಲಿ ಬೀಡಿ ಕಂಟ್ರಾಕ್ಟರ್ ಆಗಿ ದುಡಿಯಲಾರಂಭಿಸಿದ್ದರು. ಅದಕ್ಕೆ ಹಣಕಟ್ಟಲು ತನ್ನ ಕುರಿಫಂಡ್ ತೆಗೆದುಕೊಟ್ಟು ನೆರವಾದ ಅಲಿಯಮ್ಮ ಅವರನ್ನುಇನ್ನೂ ಮರೆತಿಲ್ಲ ಎನ್ನುತ್ತಾರೆ.

ಸಮಾಜವಾದಿ ನೇತಾರರಾದ ಸ್ವಾತಂತ್ರ್ಯ ಹೋರಾಟಗಾರ ಡಾ.ಅಮ್ಮೆಂಬಳ ಬಾಳಪ್ಪರೊಡನೆ ನೇರ ಸಂಪರ್ಕ ಇಟ್ಟುಕೊಂಡಿದ್ದ ಮುತ್ತಪ್ಪರು ಟೌನ್ ಪಂಚಾಯತ್ ಇಲೆಕ್ಷನ್ಗೂ ಸ್ಪರ್ಧಿಸಿದವರು. ಮಾತ್ರವಲ್ಲದೆ  ಶಿಸ್ತು, ಸಂಯಮ, ಸತ್ಯ, ಪ್ರಾಮಾಣಿಕತೆಯನ್ನು ನಿತ್ಯ ಜೀವನದಲ್ಲಿ ಪಾಲಿಸಿಕೊಂಡು ಬಂದಿದ್ದಾರೆ.

ಬಾನುಲಿಪ್ರಿಯರೂ ಹೌದು ! ಮುತ್ತಪ್ಪ ಪೂಜಾರಿ!

ಸ್ವತಂತ್ರವಾಗಿ ದುಡಿಯಲಾರಂಭಿಸಿದ ಮೇಲೆ ರೇಡಿಯೊ ಕೇಳುವ ಆಸಕ್ತಿಯನ್ನು ಬೆಳೆಸಿಕೊಂಡರು ಮುತ್ತಪ್ಪ ಪೂಜಾರಿ. ನಂಬಲರ್ಹವಾದ ಸಂಗತಿಗಳನ್ನು ಮಾತ್ರ ಪ್ರಸಾರ ಮಾಡುವುದೆನ್ನುವ ಕಾರಣಕ್ಕೆ ರೇಡಿಯೊದ ಅಭಿಮಾನಿಯಾಗಿರುವ ಇವರು ಮನೆಯಲ್ಲಿ ಟಿ.ವಿ ಇದ್ದರೂ ಬೆಳಗ್ಗೆ ಎದ್ದತಕ್ಷಣ ರೇಡಿಯೋ ಕೇಳಲಾರಂಭಿಸಿದರೆ ರಾತ್ರಿ ಮಲಗುವವರೆಗೂ ರೇಡಿಯೊ ಕೇಳುವ ಹವ್ಯಾಸವನ್ನು ಇಟ್ಟುಕೊಂಡಿದ್ದಾರೆ. ಹತ್ತಿಪ್ಪತ್ತು ವರ್ಷಳಷ್ಟು ಹಿಂದೆ ಕಬ್ಬು, ಜೋಳ, ರೇ?, ಭತ್ತ ಇತ್ಯಾದಿ ಬಹುಬೆಳೆಯನ್ನು ಬೆಳೆಯುತ್ತಿದ್ದ ಮುತ್ತಪ್ಪ ಪೂಜಾರಿಯವರು ಮಂಗಳೂರು ಆಕಾಶವಾಣಿಯ ಕೃಷಿರಂಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದನ್ನು ಸಂತಸದಿಂದ ನೆನಪಿಸಿಕೊಳ್ಳುತ್ತಾರೆ.

ಹಳೆ ಪತ್ರಿಕೆ ಮಾರಿದ್ದು ಜೀವನದಲ್ಲಿ ಒಂದೇ ಸಲ!

ಜಗತ್ತಿನ ರಾಜಕೀಯ ವಿಷಯಗಳಲ್ಲಿ ಅಪಾರ ಆಸಕ್ತಿಯನ್ನು ಮಾತ್ರವಲ್ಲದೆ ಜ್ಞಾನವನ್ನೂ ಬೆಳೆಸಿಕೊಂಡಿರುವ ಮುತ್ತಪ್ಪ ಪೂಜಾರಿಯವರಲ್ಲಿ ಯಾಕಾಗಿ ಹಳೆಯ ಪತ್ರಿಕೆಗಳನ್ನು ಇಟ್ಟುಕೊಂಡಿರುವಿರಿ? ಎಂದು ಕೇಳಿದರೆ  ಪತ್ರಿಕೆಗಳಲ್ಲಿನ ಸುದ್ದಿಯನ್ನು ಮುಖ್ಯವಾಗಿ  ರಾಜಕೀಯ ವಿಷಯಗಳನ್ನು ವಿಶ್ಲೇ?ಣೆ ಮಾಡುವುದು ನನ್ನ ಹವ್ಯಾಸ ಮತ್ತು ಆಸಕ್ತಿ. ಜೀವಮಾನದಲ್ಲಿ ಒಂದೇ ಒಂದು ಸಲ ಹಳೆಯ ಪತ್ರಿಕೆಯನ್ನು ಗುಜರಿಯವರಿಗೆ ಮಾರಾಟ ಮಾಡಿದ್ದೇನೆ. ನಂತರ ಯಾವತ್ತೂ ಮಾರಾಟ ಮಾಡಿಲ್ಲ ಎನ್ನುತ್ತಾ ತನ್ನ ಮನೆಯ ಕೋಣೆಯತ್ತ ತೆರಳಿ ಗೋಣಿ ಚೀಲಗಳಲ್ಲಿ ಸಂಗ್ರಹಿಸಿಟ್ಟಿರುವ ಪತ್ರಿಕೆ ಮೂಟೆಗಳತ್ತ ಹೆಮ್ಮೆಯಿಂದ ನೋಡುತ್ತಾರೆ. ಬಗ್ಗೆ ತಮ್ಮನ್ನು ಆಸಕ್ತರು ಸಂಪರ್ಕಿಸಲಿಲ್ಲವೆಎಂದು ಕೇಳಿದರೆ ನಾನು ಪ್ರಚಾರಪ್ರಿಯನಲ್ಲ. ಹಳೆಯ ಪತ್ರಿಕೆಗಳನ್ನು ನನ್ನ ಸಂತೋ?ಕ್ಕಾಗಿ ಸಂಗ್ರಹಿಸಿದ್ದೇನೆ ಎನ್ನುತ್ತಾ ಪತ್ರಿಕೆ ಮೂಟೆಯನ್ನು ನಮ್ಮ ಮುಂದೆತೆರೆದಿಡುತ್ತಾರೆ ಇಳಿವಯಸ್ಸಿನ ಮುತ್ತಪ್ಪ ಪೂಜಾರಿ.

ಶಿಸ್ತಿನ ಜೀವನವನ್ನು ನಡೆಸುತ್ತಿರುವ ಇವರಿಗೆ ಮನೆಮಂದಿಯೂ ಸಹಕರಿಸುತ್ತಿದ್ದಾರೆ. ಅವರು ದೇಶದ ಪ್ರಧಾನಿಗಳ ಚಿತ್ರವನ್ನು ಫೊಟೋ ಫ್ರೇಮ್ ಹಾಕಿಸಿ ಮನೆಗೋಡೆಗೆ ನೇತು ಹಾಕಿಸಿದ್ದು, ಮನೆಗೆ ಬಂದಕಿರಿಯರಿಗೂಅವರ ಪರಿಚಯ ಮಾಡಿಕೊಡುತ್ತಾರೆ ಅಪರೂಪದ ಹಳೆಯ ಪತ್ರಿಕೆಗಳ ಸಂಗ್ರಹನ್ನು ಮಾಡಿರುವ ಮುತ್ತಪ್ಪ ಪೂಜಾರಿ! ಇವರ ಜೀವನ ಪ್ರೀತಿ ಎಲ್ಲರಿಗೂ ಸ್ಫೂರ್ತಿ ನೀಡುವಂತಿದೆ. ನಮ್ಮಲ್ಲಿನ ವಾಚನಾಲಯಗಳು, ಮಾಧ್ಯಮ ಕೇಂದ್ರಗಳು ಹೆಚ್ಚಿನ ಮುತುವರ್ಜಿ  ತೋರಿಸಿ ಅಪರೂಪದ ಹಳೆಯ ಪತ್ರಿಕೆಗಳನ್ನು ಸಂರಕ್ಷಿಸಿ  ವಿದ್ಯಾರ್ಥಿಗಳಿಗೆ, ಆಸಕ್ತರಿಗೆ ದಾರಿ ದೀಪವಾಗಬಹುದು.

Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ