KERALA NEWS: ಕೇರಳದ ಜಾನುವಾರುಗಳಲ್ಲಿ ಕಾಲುಬಾಯಿ ಜ್ವರ
ಕೇರಳದ
ಕಾಸರಗೋಡು ಜಿಲ್ಲೆ ಸಹಿತ ಹಲವೆಡೆ ಗೊರಸು ರೋಗ ಎಂದೆನ್ನುವ ಕಾಲುಬಾಯಿ ಜ್ವರ ಉಲ್ಬಣಗೊಂಡಿದೆ. ಕೇರಳದ
ಪಶು ಸಂಗೋಪನಾ ಇಲಾಖೆ ಕಟ್ಟೆಚ್ಚರ ವಹಿಸಿದ್ದರೂ ಹೆಚ್ಚಳ ಆಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಕೇರಳ
ಗಡಿ ಚೆಕ್ ಪೋಸ್ಟ್ ಗಳ ನಿಗಾ ಇರಿಸಲಾಗಿದೆ. ಕೇರಳದ ಕಾಸರಗೋಡು, ಕಣ್ಣೂರು, ಮಲಪ್ಪುರ, ತ್ರಿಶೂರ್,
ಆಲಪ್ಪುಯ, ಪತ್ತನಂತಿಟ್ಟ ಮತ್ತು ತಿರುವನಂತಪುರ ಜಿಲ್ಲೆಗಳ 51 ಕೇಂದ್ರಗಳಲ್ಲಿ ರೋಗ ಪತ್ತೆಯಾಗಿದೆ.
ಪ್ರಧಾನವಾಗಿ ಕೇರಳದಲ್ಲಿ ಹೊರರಾಜ್ಯಗಳಿಂದ ಆಮದು ಮಾಡಿಕೊಳ್ಳುವ ಜಾನುವಾರುಗಳಲ್ಲಿ ಪತ್ತೆಯಾಗಿರುವ ಕಾಲುಬಾಯಿ ಜ್ವರದಿಂದಾಗಿ ಜುಲೈ ತಿಂಗಳಲ್ಲೇ 61 ಹಸುಗಳು ಬಾಧಿತವಾಗಿವೆ. ಒಟ್ಟು 840 ಹಸುಗಳು ಈಗ ಕೇರಳ ರಾಜ್ಯದಲ್ಲಿ ಬಾಧಿತವಾಗಿವೆ. ಅವುಗಳಲ್ಲಿ 41 ಕರುಗಳು. ಈ ನಿಟ್ಟಿನಲ್ಲಿ ಪಶುಸಂಗೋಪನಾ ಇಲಾಖೆ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಏಷ್ಯಾ 1 ಮತ್ತು ಎ ಸೆರೋಟೈಪ್ ಗಳಿಗೆ ಸೇರಿದ ವೈರಸ್ ಗಳು ಈ ಬಾರಿ ಕೇರಳದಲ್ಲಿ ರೋಗಕ್ಕೆ ಕಾರಣ. ಕರುಗಳಲ್ಲಿ ತೀವ್ರತರದ ಲಕ್ಷಣಗಳು ಕಂಡುಬರುತ್ತಿವೆ. ಭುವನೇಶ್ವರದಲ್ಲಿರುವ ಕಾಲು ಮತ್ತು ಬಾಯಿ ರೋಗ ನಿರ್ಣಯಕ್ಕಾಗಿ ಮಾದರಿಗಳನ್ನು ಕೇಂದ್ರೀಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ರೋಗ ನಿಯಂತ್ರಣದ ಅಂಗವಾಗಿ ಮುಖ್ಯ ಪಶುವೈದ್ಯಾಧಿಕಾರಿಗಳ ನೇತೃತ್ವದಲ್ಲಿ ಎಲ್ಲ ಜಿಲ್ಲೆಗಳಲ್ಲಿ ಅಗತ್ಯ ಲಸಿಕಾದಳ ಮತ್ತು ಚಿಕಿತ್ಸಾದಳಗಳನ್ನು ರಚಿಸಲಾಗಿದೆ. ಜಿಲ್ಲೆಗಳಲ್ಲಿ ಪೀಡಿತ ಪ್ರದೇಶದ ಒಂದು ಕಿ.ಮೀ. ವ್ಯಾಪ್ತಿಯಲ್ಲಿರುವ ಸಂಪೂರ್ಣ ಜಾನುವಾರುಗಳಿಗೆ ಲಸಿಕೆ ಹಾಕಲಾಯಿತು. ರಿಂಗ್ ಲಸಿಕೆಯನ್ನು ಸುಮಾರು 4 ಸಾವಿರಕ್ಕೂ ಅಧಿಕ ಕರುಗಳಿಗೆ ಹಾಕಲಾಗಿದೆ. ಪಶು ಚಿಕಿತ್ಸಾಲಯಗಳ ಮೂಲಕ ಸೋಂಕಿತ ಪ್ರಾಣಿಗಳಿಗೆ ಉಚಿತ ಪಶು ಚಿಕಿತ್ಸೆ ನೀಡಲಾಗುತ್ತದೆ. ಪಶುವೈದ್ಯಕೀಯ ಆಸ್ಪತ್ರೆಗಳಲ್ಲಿ ರೋಗದ ಚಿಕಿತ್ಸೆಗೆ ಅಗತ್ಯವಿರುವ ಔಷಧಗಳೂ ಲಭ್ಯ. ಎಲ್ಲ ಜಿಲ್ಲೆಗಳಲ್ಲಿ ಗೊರಸುರೋಗಕ್ಕೆ ಸಂಬಂಧಿಸಿದ ಪರಿಶೀಲನೆಯನ್ನು ಮಾಡಲಾಗುತ್ತಿದೆ.