TRIBUTE: ಹಾಸ್ಯ ಪಾತ್ರಗಳಿಗೆ ಘನತೆ ನೀಡಿದವರು ಪೆರುವಡಿ ನಾರಾಯಣ ಭಟ್ಟರು

TRIBUTE: ಹಾಸ್ಯ ಪಾತ್ರಗಳಿಗೆ ಘನತೆ ನೀಡಿದವರು ಪೆರುವಡಿ ನಾರಾಯಣ ಭಟ್ಟರು

 


by Harish Mambady

ಪೆರುವಡಿ ನಾರಾಯಣ ಭಟ್ಟರ ನಿಧನದೊಂದಿಗೆ ಯಕ್ಷಗಾನದಲ್ಲಿ ‘ಹಾಸ್ಯರಸ’ದ ಘನತೆಯ ಅಭಿವ್ಯಕ್ತಿಯ ಮಾದರಿಯೊಂದು ಮರೆಗೆ ಸರಿದಂತಾಗಿದೆ

ಕರಾವಳಿಯ ಹೆಮ್ಮೆಯ ಯಕ್ಷಗಾನದಲ್ಲಿ ಪ್ರಸ್ತುತವಾಗುವ ಹಾಸ್ಯ ಪಾತ್ರಗಳ ಕುರಿತು ನಾನಾ ವಿಮರ್ಶೆಗಳು ಬರುತ್ತಿವೆ. ಆದರೆ ಹಾಸ್ಯಪಾತ್ರಗಳು ಹೇಗಿರಬೇಕು, ಹಾಸ್ಯವೆಂದರೇನು ಎಂಬುದನ್ನು ಇದಮಿತ್ಥಂ ಎಂಬಂತೆ ನಿರೂಪಿಸಿದ ಹಿರಿಯ ಕಲಾವಿದರು ಪೆರುವಡಿ ಹಾಸ್ಯಗಾರರು. ಮಂಗಳವಾರ ಅವರು ದಕ ಜಿಲ್ಲೆಯ ಪುತ್ತೂರಿನಲ್ಲಿ ನಿಧನ ಹೊಂದಿದ್ದಾರೆ. ಆದರೆ ಅವರು ಹಾಕಿಕೊಟ್ಟ ಮಾರ್ಗ ಇಂದಿನ ಕಲಾವಿದರಿಗೆ ದಾರಿದೀಪವಾಗಿದೆ.

ತೆಂಕುತಿಟ್ಟು ಯಕ್ಷಗಾನದಲ್ಲಿ ಹಾಸ್ಯ ಪಾತ್ರಕ್ಕೆ ತನ್ನದೇ ಆದ ಘನತೆಯನ್ನು ತಂದುಕೊಟ್ಟ ಅಗ್ರಮಾನ್ಯ ಕಲಾವಿದ ಪೆರುವಡಿ ನಾರಾಯಣ ಭಟ್ಟ (96) ಪುತ್ತೂರಿನಲ್ಲಿ ಮಂಗಳವಾರ ನಿಧನ ಹೊಂದಿದರು. ಮೂಲತಃ ಪದ್ಯಾಣದವರಾದ ಅವರು ಪದ್ಯಾಣ ಭೀಮ ಭಟ್ಟ ದಂಪತಿಯ ಎರಡನೇ ಮಗನಾಗಿ 1927ರಲ್ಲಿ ಜನಿಸಿದ ಅವರು, ಬಳಿಕ ತನ್ನ ಅಜ್ಜನ ಮನೆ ಪೆರುವಡಿಯಲ್ಲಿ ಆಶ್ರಯ ಪಡೆದ ಹಿನ್ನೆಲೆಯಲ್ಲಿ ಅವರು ಪೆರುವಡಿ ನಾರಾಯಣ ಭಟ್ ಎಂದೇ ಪ್ರಸಿದ್ಧರಾದರು. ಕುಂಡಾವು ಮೇಳದಲ್ಲಿ ಕುರಿಯ ವಿಠಲ ಶಾಸ್ತ್ರಿ ಅವರ `ಕೃಷ್ಣ' ವೇಷಕ್ಕೆ ಮಾರುಹೋಗಿ, ಅದೇ ಮೇಳದಿಂದ ತಿರುಗಾಟ ಆರಂಭಿಸಿದ್ದರು.ಮುಂದೆ ಶ್ರೀ ಧರ್ಮಸ್ಥಳ ಮೇಳದಲ್ಲಿ ತಿರುಗಾಟ. ಮೂಲ್ಕಿಮೇಳ, ಕೂಡ್ಲು ಮೇಳ, ಸುರತ್ಕಲ್ ಮೇಳ, ಬಡಗಿನ ಅಮೃತೇಶ್ವರೀ ಮೇಳ, ನಂದಾವರ ಮೇಳ, ಕದ್ರಿ ಮೇಳ, ಕುಂಬಳೆ ಮೇಳ, ಬಪ್ಪನಾಡು .ಹೀಗೆ ವಿವಿಧ ಮೇಳಗಳಲ್ಲಿ 47 ವರುಷ ತಿರುಗಾಟ ನಡೆಸಿದ್ದಾರೆ ,ಸುಮಾರು 60ರ ದಶಕದಲ್ಲಿ ಮುಲ್ಕಿ ಮೇಳದಲ್ಲಿ ಪಾದೆಕಲ್ಲು ಛತ್ರದ ವೆಂಕಟರಮಣ ಭಟ್ಟರು ರಚಿಸಿದ್ದ ಪಾಪಣ್ಣ ವಿಜಯ ಪ್ರಸಂಗದಲ್ಲಿ ಪಾಪಣ್ಣ ಪಾತ್ರ ನಿರ್ವಹಿಸಿದ್ದು ಸೂಪರ್ ಹಿಟ್ ಆಯಿತು. ಅನಂತರ ಅವರು ಪಾಪಣ್ಣ ಭಟ್ಟರು ಎಂದೇ ಖ್ಯಾತರಾದರು. ಬಾಹುಕ, ಪಾಪಣ್ಣ ಸಹಿತ ಹಾಸ್ಯದ ಜೊತೆ ಗಂಭೀರ ಪಾತ್ರಗಳೂ ಜನಪ್ರಿಯವಾದವು. ಪಾರಿಜಾತದ ಮಕರಂದ, ಅತಿಕಾಯ ಮೋಕ್ಷದ ಸಾರಥಿ, ಕೋಟಿಚೆನ್ನಯದ ಪಯ್ಯಬೈದ್ಯ, ದಳವಾಯಿ ದುಗ್ಗಣದ ನರ್ಸಣ್ಣ, ನಳಚರಿತ್ರೆಯ ಬಾಹುಕ, ಶ್ರೀಕೃಷ್ಣ ಲೀಲೆಯ ವಿಜಯನ ಪಾತ್ರಗಳಲ್ಲಿ ಅವರು ತನ್ನ ಮೊನಚು ಮಾತುಗಾರಿಕೆ ಹಾಗೂ ನೈಜ ಹಾಸ್ಯದಿಂದ ಗಮನ ಸೆಳೆದಿದ್ದರು. ದಕ್ಷಾಧ್ವರ ಪ್ರಂಗದ `ಬ್ರಾಹಣ', ನಳದಮಯಂತಿ ಪ್ರಸಂಗದ `ಬಾಹುಕ', ಪಾರಿಜಾತದ `ಮಕರಂದ', ಕೃಷ್ಣಲೀಲೆ-ಕಂಸವಧೆ ಪ್ರಸಂಗದ `ಪಂಡಿತ ಮತ್ತು ಅಗಸ',ಕೊಕ್ಕೆಚಿಕ್ಕನ ಹಾಸ್ಯ, ಗುಹ, ಸಾರಥಿ, ದೇವಲೋಕದ ದೂತ, ಬೇಟೆಗಾರರು, ಹನುಮನಾಯಕ, ಪರಾಕು ಹಾಸ್ಯ, ಬೈರಾಗಿ, ಪಾಪಣ್ಣ ಯಕ್ಷಲೋಕದ ಎಲ್ಲಾ ಪಾತ್ರಗಳು ಪೆರುವೋಡಿಯವರಲ್ಲಿ ಮರುಹುಟ್ಟು ಪಡೆದಿದೆ.

ರಂಗದಲ್ಲಿ ಅವರ ಅಭಿನಯ, ನಡೆನುಡಿಗಳಲ್ಲಿ ಹಾಸ್ಯ ಉನ್ನತ ಮಟ್ಟದಲ್ಲಿರುತ್ತಿತ್ತು. ಹಾಸ್ಯಕ್ಕಾಗಿ ಕೆಳಮಟ್ಟದಲ್ಲಿ ವರ್ತಿಸುವ ಹಾಸ್ಯವಲ್ಲ ಅಭಿನಯದಲ್ಲಿ ಸಹಜತೆ, ಅರ್ಥಗಾರಿಕೆಯಲ್ಲಿ ಪಾತ್ರದ ಚಿತ್ರಣಗಳನ್ನು ಸದಾ ಕಾಪಾಡಿಕೊಂಡು ಬಂದ,  ಒಬ್ಬ ಅಭಿಜಾತ ಹಾಸ್ಯಗಾರ. ಡಾ.ಶಿವರಾಮ ಕಾರಂತರು ಚಿತ್ರೀಕರಿಸಿದ `ಯಕ್ಷಗಾನ ಸಿನಿಮಾ' ಒಂದರಲ್ಲಿ ಕಲಾವಿದನಾಗಿ ಭಾಗವಹಿಸಿದ್ದರು. ಇತ್ತೀಚೆಗೆ ಅವರ ಮೊಮ್ಮಗ ನಿರ್ದೇಶಿಸಿದ ದಾಮಾಯಣದಲ್ಲೂ ಪುಟ್ಟ ಪಾತ್ರ ಮಾಡಿದ್ದರು.

ಪ್ರಶಸ್ತಿ-ಪುರಸ್ಕಾರಗಳು:

ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಗೌರವ ಪ್ರಶಸ್ತಿ, ತೆಂಕು ತಿಟ್ಟು ಯಕ್ಷಗಾನ ಅಕಾಡೆಮಿ ಪ್ರಶಸ್ತಿಯಲ್ಲದೆ, ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕುರಿಯ ಪ್ರಶಸ್ತಿ, ಅಗರಿ ಪ್ರಶಸ್ತಿ, ಉಡುಪಿ ಕಲಾರಂಗ ಪ್ರಶಸ್ತಿ, ಅಬ್ದುಲ್ ಕಲಾಂ ಪ್ರಶಸ್ತಿ, ವನಜ ರಂಗಮನೆ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ದೋಗ್ರ ಪೂಜಾರಿ ಪ್ರಶಸ್ತಿ, ದೇರಾಜೆ ಪ್ರಶಸ್ತಿ ಸಹಿತ ನೂರಾರು ಪ್ರಶಸ್ತಿ, ಸನ್ಮಾನಗಳು ಅವರಿಗೆ ಸಂದಿವೆ. ನಾರಾಯಣ ಭಟ್ಟರ ಜೀವನಗಾಥೆ `ಹಾಸ್ಯಗಾರನ ಅಂತರಂಗ' ಕೃತಿ ಪ್ರಕಟವಾಗಿದೆ.

ಶತಮಾನದ ಯಕ್ಷಗಾನ ಚರಿತ್ರೆಯ ಸಾಕ್ಷಿಯಂತೆ ಬದುಕಿದವರು:

ಶತಮಾನದ ಯಕ್ಷಗಾನ ಚರಿತ್ರೆಯ ಸಾಕ್ಷಿಯಂತೆ ಬದುಕಿದವರು ನಾರಾಯಣ ಭಟ್ಟರು. ಧರ್ಮಸ್ಥಳ ಮೇಳದಲ್ಲಿ ಕುರಿಯ ವಿಠಲ ಶಾಸ್ತ್ರಿಗಳು, ಅಗರಿ ಶ್ರೀನಿವಾಸ ಭಾಗವತರು ಮೊದಲಾದ ದಿಗ್ಗಜಗಳೊಂದಿಗೆ ಒಡನಾಟ ಲಭ್ಯವಾಯಿತು. ದೇರಾಜೆ ಸೀತಾರಾಮಯ್ಯರಿಂದ ಪ್ರಭಾವಿತರಾದರು. ಪೆರುವಡಿ ನಾರಾಯಣ ಭಟ್ಟರ ಯಕ್ಷಗಾನದ ಮಾತು ಕೇವಲ ಅರ್ಥವಾಗದೆ ‘ವಾಗರ್ಥ’ ವೆನಿಸಿಕೊಳ್ಳುತ್ತಿತ್ತು. ಹಾಸ್ಯಪಾತ್ರದಲ್ಲಿ ಅವರಂತೆ ಭಾಷೆಯನ್ನು ಸೊಗಸಾಗಿ ಬಳಸಿದವರಿಲ್ಲ. ಹಾಸ್ಯಗಾರರೆಂದು ಪ್ರಸಿದ್ಧರಾದರೂ ಗಂಭೀರ ಪೋಷಕ ಪಾತ್ರಗಳ ಪ್ರಸ್ತುತಿಗೆ ಹೆಸರಾಗಿದ್ದರು. ಅವರು ಯಜಮಾನ ನಾರಾಯಣ ಭಟ್ಟರೂ ಹೌದು! ತಮ್ಮ ಸೋದರ ಬಂಧುಗಳೊಂದಿಗೆ ಒಂದು ದಶಕಕ್ಕಿಂತಲೂ ಅಧಿಕ ಕಾಲ ಮುಲ್ಕಿ ಮೇಳವನ್ನು ನಡೆಸಿದ್ದರು. ಕಾರವಾರದವರೆಗೆ ತೆಂಕುತಿಟ್ಟಿನ ದಿಗ್ವಿಜಯ ನಡೆಸಿದ್ದರು. ಪುತ್ತಿಗೆ ರಾಮಕೃಷ್ಣ ಜೋಯಿಸರನ್ನು, ಕಿರಿಯ ಬಲಿಪ ನಾರಾಯಣ ಭಾಗವತರನ್ನು ಮುಲ್ಕಿ ಮೇಳಕ್ಕೆ ಸೇರಿಸಿದ್ದರು. ಕಡತೋಕಾ ಮಂಜುನಾಥ ಭಾಗವತರನ್ನು ಮೊದಲ ಬಾರಿಗೆ ತೆಂಕುತಿಟ್ಟಿಗೆ ಪರಿಚಯಿಸಿದ ಕೀರ್ತಿ ಅವರದಾಗಿತ್ತು. ಪುತ್ತೂರು ನಾರಾಯಣ ಹೆಗಡೆ, ಎಂಪೆಕಟ್ಟೆ ರಾಮಯ್ಯ ರೈಯಂಥವರು ಮುಲ್ಕಿ ಮೇಳದಿಂದ ತಮ್ಮ ಯಶಸ್ವಿ ವೃತ್ತಿಬದುಕನ್ನು ಆರಂಭಿಸಿದ್ದರು. ಧರ್ಮಸ್ಥಳ ಮಂಜಯ್ಯ ಹೆಗ್ಗಡೆಯವರ ಕಾಲದಲ್ಲಿ ಜರಗಿದ, ಹಾರಾಡಿ ರಾಮ ಗಾಣಿಗ, ಕೊಕ್ಕರ್ಣೆ ನರಸಿಂಹ ಕಮ್ತಿ, ಕುರಿಯ ವಿಠಲ ಶಾಸ್ತ್ರಿ, ಅಳಿಕೆ ರಾಮಯ ರೆ, ಕಡಂದೇಲು ಪುರುಷೋತ್ತಮ ಭಟ್ಟ, ಕೋಳ್ಯೂರು ರಾಮಚಂದ್ರ ರಾವ್‌ ಮೊದಲಾದವರ ಕೂಡುವಿಕೆಯಲ್ಲಿ ಜರಗಿದ ತೆಂಕು-ಬಡಗಿನ ಪ್ರತ್ಯೇಕ ಸ್ಪರ್ಧಾತ್ಮಕ ಪ್ರದರ್ಶನಗಳಲ್ಲಿ ಪೆರುವಡಿಯವರ ನಾರದನ ಪಾತ್ರ ಮೆಚ್ಚುಗೆಗೆ ಪಾತ್ರವಾಗಿತ್ತು. ಬಡಗಿನ ಸಾಲಿಗ್ರಾಮ ಮೇಳದಲ್ಲಿ ಗುಂಡ್ಮಿ ಕಾಳಿಂಗ ನಾವಡ, ಚಿಟ್ಟಾಣಿ ರಾಮಚಂದ್ರ ಹೆಗಡೆ ಮೊದಲಾದವರೊಂದಿಗೆ ತಿರುಗಾಟ ನಡೆಸಿದ್ದರು. ಸುರತ್ಕಲ್‌ ಮೇಳದ  ‘ಪಾಪಣ್ಣ ವಿಜಯ’ದ ಪಾಪಣ್ಣನ ಪಾತ್ರದಲ್ಲಿ ಇವರನ್ನು ಮೀರಿಸಿದವರು ಇವತ್ತಿನವರೆಗೂ ಇಲ್ಲ. ಬಾಹುಕನ ಪಾತ್ರಕ್ಕೆ ಹೊಸ ಭಾವನಾತ್ಮಕ ಆಯಾಮವನ್ನು ಕೊಟ್ಟಿದ್ದರು. ಸದಾ ಅಧ್ಯಯನಶೀಲರಾಗಿ ಇತ್ತೀಚೆಗಿನವರೆಗೂ ‘ನಳದಮಯಂತಿ’ ಕಥನದ ಬೇರೆ ಬೇರೆ ಪಾಠಾಂತರಗಳನ್ನು ಓದುತ್ತ ಪಾತ್ರವನ್ನು ಬಾಹುಕನನ್ನು ಹೇಗೆ ಹೊಸರೀತಿಯಲ್ಲಿ ಮಾಡಬಹುದೆಂದು ಯೋಚನೆ ಮಾಡುತ್ತಿದ್ದರು. ಕದ್ರಿ ಮೇಳದಲ್ಲಿ ‘ಗೆಜ್ಜೆದ ಪೂಜೆ’ ಪ್ರಸಂಗದ ಬೇಚನ ಪಾತ್ರಚಿತ್ರಣ ಇವತ್ತಿಗೂ ಸ್ಮರಣೀಯ. ಬಪ್ಪನಾಡು ಮೇಳದಲ್ಲಿ ರಾಮದಾಸ ಸಾಮಗರ ಕೈಲಾಸ ಶಾಸ್ತ್ರಿ ಪಾತ್ರಕ್ಕೆ ಮಾಣಿಯಾಗಿ ಜನಪ್ರಿಯರಾಗಿದ್ದರು. ಪೆರುವಡಿ ನಾರಾಯಣ ಭಟ್ಟರ ಆತ್ಮಕಥನವನ್ನು ನಾ. ಕಾರಂತ ಪೆರಾಜೆಯವರು ನಿರೂಪಿಸಿದ್ದು ಅದು ಪ್ರಕಟವಾಗಿದೆ.  


Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ