AWARD: ಯಕ್ಷಗಾನದ ಮೊದಲ ವೃತ್ತಿಪರ ಮಹಿಳಾ ಭಾಗವತರಿಗೆ ರಾಜ್ಯೋತ್ಸವ ಪ್ರಶಸ್ತಿ: ಅಮ್ಮ ನಡೆದುಬಂದ ದಾರಿ ಕುರಿತು ಪುತ್ರ ಹೇಳುವುದು ಹೀಗೆ..
Tuesday, October 31, 2023
ಕೊನೆಗೂ ಅಮ್ಮನಿಗೆ ರಾಜ್ಯೋತ್ಸವ ಪ್ರಶಸ್ತಿ: ಯಕ್ಷಗಾನಕ್ಕೆ ಸಂದ ಗೌರವ, ಮಹಿಳಾ ಕಲಾವಿದರಿಗೆ ಪ್ರೇರಣೆ... ಹೀಗೆಂದು ಅವರ ಪುತ್ರ ಹಿರಿಯ ಪತ್ರಕರ್ತ ಅವಿನಾಶ್ ಬೈಪಡಿತ್ತಾಯ ಫೇಸ್ ಬುಕ್ ನಲ್ಲಿ ಬರೆದಿದ್ದಾರೆ. 77 ವರ್ಷದ ಹಿರಿಯ ಭಾಗವತರಾದ ಶ್ರೀಮತಿ ಲೀಲಾವತಿ ಬೈಪಡಿತ್ತಾಯ ಅವರಿಗೆ ತಡವಾಗಿಯಾದರೂ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದ್ದು, ಇಂದು ಬೆಂಗಳೂರಿನಲ್ಲಿ ಅದನ್ನು ಪಡೆದುಕೊಳ್ಳಲಿದ್ದಾರೆ. ಈ ಕುರಿತು ಅವಿನಾಶ್ ಫೇಸ್ ಬುಕ್ ನಲ್ಲಿ ಬರೆದ ಲೇಖನದ ಪೂರ್ಣಪಾಠ ಹೀಗಿದೆ.
ಯಕ್ಷಗಾನಪ್ರಿಯೆ ಕಟೀಲು ದುರ್ಗೆ ಕೊನೆಗೂ ಆಶೀರ್ವದಿಸಿದ್ದಾಳೆ. ಯಕ್ಷಗಾನ ಕ್ಷೇತ್ರದಲ್ಲಿ ಇದುವರೆಗೆ ಯಾರೂ ಮಾಡಿರದ, ಇನ್ನು ಮಾಡುವ ಸಾಧ್ಯತೆಯೂ ಇಲ್ಲದಿರುವ ಸಾಧನೆ ಮಾಡಿರುವ (ಟೆಂಟ್ ಮೇಳಗಳಲ್ಲಿ, ಇಡೀ ರಾತ್ರಿಯ ತಿರುಗಾಟ) ನನ್ನ ಅಮ್ಮ ಲೀಲಾವತಿ ಬೈಪಾಡಿತ್ತಾಯರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿರುವುದು ನಿಜವಾದ ಯಕ್ಷಗಾನಕ್ಕೆ ಸಂದಿರುವ ನಿಜದ ಗೌರವ. ಅಮ್ಮ ಅನುಭವಿಸಿದ ನೋವು, ಸಮಾಜದ ತುಚ್ಛ ಕಣ್ಣುಗಳಿಂದ ಅಪ್ಪನ ನೆರವಿನಿಂದ ಎಲ್ಲವನ್ನೂ ಮೆಟ್ಟಿನಿಂತು ಮಹಿಳಾ ಭಾಗವತರಾಗಿ ಮೇಳಗಳ ಇಡೀ ರಾತ್ರಿಯ ಯಕ್ಷಗಾನ ಆಡಿಸಿದ, ಪ್ರಸಿದ್ಧ ಕಲಾವಿದರನ್ನು ರಂಗದಲ್ಲಿ ಕುಣಿಸಿದ, ಅದರ ನಡುವೆಯೂ ಯಕ್ಷಗಾನದ ಪರಂಪರೆಗೆ ಚ್ಯುತಿ ಬಾರದಂತೆ ಯಕ್ಷಗಾನದಲ್ಲಿ ಬೆಳಗಿದ್ದಕ್ಕೆ ಸಾಕ್ಷಿಯಾದವನು ನಾನು. ಯಾಕೆಂದರೆ ನಾವು ಮಕ್ಕಳು ನಾವು ಸಣ್ಣವರಿದ್ದಾಗ ಅಪ್ಪನ ಜತೆಯಾಗಿ ಅಮ್ಮ ಹೋಗುತ್ತಿದ್ದ ಆಟಗಳಿಗೆ ಹೋಗುತ್ತಿದ್ದೆವು. ಟೆಂಟ್ ಒಳಗೆ ಆ ದಿನಕ್ಕಾಗಿ ಹಾಕಿದ್ದ ರಂಗಸ್ಥಳದ ಮೇಲೆ ಅಮ್ಮ ಹಾಡುತ್ತಿದ್ದರೆ, ಅದರಡಿಯಲ್ಲಿ ಮಲಗಿ ನಿದ್ರಿಸುತ್ತಿದ್ದವರು ನಾವು ಮಕ್ಕಳು. ಕಲಾವಿದರು ದಿಗಿಣ ಹಾರಿದಾಗ ಏಳುವ ಧಡಬಡ ಸದ್ದು ನಮಗೆ ಭಯ ಆಗುತ್ತಿರಲಿಲ್ಲ ಮತ್ತು ಈ ಸದ್ದೇ ಜೋಗುಳ ನಮಗೆ. ಹೇಗೂ ಮೇಲೆ ಅಪ್ಪ ಅಮ್ಮ ಇದ್ದಾರೆಂಬ ರಕ್ಷಣೆಯ, ಬೆಚ್ಚನೆಯ ಭಾವ ನಮ್ಮದಾಗಿತ್ತು.
ಚಿತ್ರ: 1984ರಲ್ಲಿ ಕಟೀಲಿನಲ್ಲಿ ನಡೆದಿದ್ದ ಯಕ್ಷಗಾನ ರಾಗ ತಾಳ ಕಮ್ಮಟದಲ್ಲಿ ಯಕ್ಷಗಾನದ ದಿಗ್ಗಜರೊಂದಿಗೆ ಏಕೈಕ ಮಹಿಳೆ ನನ್ನಮ್ಮ ಲೀಲಾವತಿ ಬೈಪಾಡಿತ್ತಾಯ |
ಹೌದು, ಇದು ನೈಟ್ ಶಿಫ್ಟ್ ಕೆಲಸ ಅಂತಲೂ ಹೇಳಬಹುದು. ಆ ಕಾಲದಲ್ಲಿಯೇ ಅಮ್ಮ ವಾರಕ್ಕೆ ಕನಿಷ್ಠ 70 ಗಂಟೆ ದುಡಿದಿದ್ದಾರೆ. ಯಾಕೆಂದರೆ ಮನೆಯಲ್ಲೂ ಅನ್ನ ಬೇಯಬೇಕಿತ್ತು, ರಂಗಸ್ಥಳದಲ್ಲಿಯೂ ಪ್ರದರ್ಶನ ರೈಸಬೇಕಿತ್ತು.
ಆ ದಿನಗಳಲ್ಲಿ ಅಮ್ಮನಂತೂ ಅಪ್ಪನೊಂದಿಗೆ ಸೈಕಲ್ ಏರಿ, ಬಳಿಕ ಲ್ಯಾಂಬ್ರೆಟಾ ಸ್ಕೂಟರ್, ಆನಂತರ ಜಾವಾ, ಬುಲೆಟ್ ಬೈಕೇರಿ ಆ ಕಾಲದಲ್ಲಿ ಯಕ್ಷಗಾನಕ್ಕೆ ಹಗಲು ನಿದ್ದೆ ಮಾಡಿ, ನಡುವೆ ನಮಗೆ, ತಮಗೆ ಅಡುಗೆ ಮಾಡಿಟ್ಟು, ರಾತ್ರಿ ನಿದ್ದೆಗೆಡುವ ಕಾಯಕಕ್ಕೆ ಮುಂದಾಗಿದ್ದುದು ಕುಟುಂಬದ ಹೊಟ್ಟೆ ಹೊರೆಯುವುದಕ್ಕಾಗಿತ್ತು. ಅಲ್ಲಿ ಖ್ಯಾತಿಯ ಅಪೇಕ್ಷೆಯಾಗಲೀ, ಏನೋ ಸಾಧನೆ ಮಾಡುತ್ತಿದ್ದೇನೆಂಬ ಬಿಮ್ಮು ಹಮ್ಮು ಇರಲಿಲ್ಲವಾಗಿತ್ತು. ನಾಳಿನ ಊಟಕ್ಕೇನು ಮಾಡುವುದು, ಮಕ್ಕಳ ವಿದ್ಯಾಭ್ಯಾಸಕ್ಕೆ ಫೀಸು ಹೊಂದಿಸುವುದು ಹೇಗೆಂಬುದಷ್ಟೇ ಯೋಚನೆಯಾಗಿತ್ತು. ಕೆಲವೊಮ್ಮೆಯಂತೂ ಬೇರೆ ಭಾಗವತರು ಕೈಕೊಟ್ಟ ದಿನಗಳಲ್ಲಿ, ರಾತ್ರಿ 8.30ಕ್ಕೆ ಚೌಕಿ ಪೂಜೆಗೆ ಜಾಗಟೆ ಕೈಗೆತ್ತಿಕೊಂಡರೆ, ಮರುದಿನ ಬೆಳಿಗ್ಗೆ 6 ಗಂಟೆಗೆ ಆಟ ಮುಗಿದು ಮಂಗಳ ಹಾಡಿದ ಬಳಿಕವೇ ಕೆಳಗಿಡುತ್ತಿದ್ದ ದಿನಗಳನ್ನು ನಾನೂ ನೋಡಿದವನೇ.
ಇದೆಲ್ಲ ಹಿನ್ನೋಟ ಹರಿಸಿದರೆ ನಾನು ಯಕ್ಷಗಾನದಿಂದಲೇ ಹುಟ್ಟಿದ್ದು, ಯಕ್ಷಗಾನದಿಂದಲೇ ವಿದ್ಯಾಭ್ಯಾಸ ಪಡೆದಿದ್ದು, ಜೀವನಾದರ್ಶಗಳನ್ನು, ಪ್ರಾಮಾಣಿಕತೆಯನ್ನು, ಶಿಸ್ತನ್ನು ಪಾಲಿಸಲು ಸಾಧ್ಯವಾಗಿದ್ದು ಹುಟ್ಟಿದಂದಿನಿಂದ ನನ್ನ ಜತೆಗಿದ್ದ ಯಕ್ಷಗಾನದಿಂದಲೇ. ನಾನು ಯಕ್ಷಗಾನದ್ದೇ ಕೂಸು ಅಂತ ಹೇಳುವಲ್ಲಿ ನನಗೆ ಹೆಮ್ಮೆಯಿದೆ. ಯಾಕೆಂದರೆ ಅಪ್ಪ-ಅಮ್ಮ ಇಬ್ಬರೂ ಯಕ್ಷಗಾನದಿಂದ ಒಂದಾದವರು, ಯಕ್ಷಗಾನದಿಂದಲೇ ಬದುಕು ಕಟ್ಟಿಕೊಂಡವರು.
ಹೇಳಲೇಬೇಕಾದ ಮೂರು ವಿಚಾರಗಳು:
ಅಂದಿನ ಪುರುಷ ಪ್ರಧಾನ ವ್ಯವಸ್ಥೆ, ಪುರುಷ ಪ್ರಧಾನ ಕಲೆ ಹಾಗೂ ಪುರುಷಪ್ರಧಾನವೂ, ಜಾತಿ/ಓಟು ಸಮೀಕರಣವೂ ಮುಖ್ಯವಾಗಿರುವ ರಾಜಕೀಯ ರಂಗ - ಈ ಮೂರೂ ಕತ್ತಲ ಕಲ್ಲುಗಳ ನಡುವೆ ಅಮ್ಮನ ಪ್ರತಿಭೆಯೊಂದು ಹೊಂಬೆಳಕಿನ ಹೂವಾಗಿ ಅರಳಿಬಿಟ್ಟ ಕಥೆಯೇ ರೋಚಕ.
ಮದುವೆಯಾದ ಬಳಿಕವಷ್ಟೇ ಯಕ್ಷಗಾನ ಕಲಿತು, ಮಕ್ಕಳಾದ ಬಳಿಕ ಯಕ್ಷಗಾನ ರಂಗಕ್ಕೆ ಪ್ರವೇಶಿಸಿ, ಪುರುಷ ಪ್ರಧಾನ ಕಲೆಯನ್ನು ರಂಗದಲ್ಲಿ ನಿಯಂತ್ರಿಸಿದವರು ನನ್ನಮ್ಮ. ಅಪ್ಪನೋ, ತಮ್ಮ ಅನುಭವವನ್ನೆಲ್ಲ ಅಮ್ಮನಿಗೆ ಧಾರೆಯೆರೆಯುತ್ತಾ, ಅಮ್ಮನನ್ನೇ ಮುಂದೆ ತಳ್ಳಿ, ತಾವು ಹಿಂದೆ ಗಟ್ಟಿಯಾಗಿ ನಿಂತರು. ಅದೆಷ್ಟೋ ಶಿಷ್ಯರನ್ನು ಯಕ್ಷಗಾನ ರಂಗಕ್ಕೆ ಕೊಟ್ಟಿರುವ, ಪರಂಪರೆಯ ಪ್ರತೀಕವೇ ಆಗಿರುವ ಅಪ್ಪನಿಗೂ ರಾಜ್ಯ ಪ್ರಶಸ್ತಿಯ ಅರ್ಹತೆ ಇದ್ದರೂ, ಪ್ರಶಸ್ತಿ-ಗಿಶಸ್ತಿ ಎಲ್ಲ ನನಗೆ ಬೇಡ ಎಂದು ದೂರವೇ ನಿಂತರು.
ಅದಿರಲಿ, ಈ ಪುರುಷ ಪ್ರಧಾನ ಕಲೆಯಲ್ಲಿ (ಗಂಡು ಮೆಟ್ಟಿನ ಕಲೆ ಯಕ್ಷಗಾನ) ಹಲವಾರು ಕಲಾವಿದರ ಕೆಟ್ಟ ನೋಟಕ್ಕೆ, 'ಇವರ ಪದಕ್ಕೆ ನಾನು ಹೇಗೆ ವೇಷ ಮಾಡುವುದು' ಅಂತ ರೇಜಿಗೆ ತೋರಿದವರಿಗೆಲ್ಲ ಉತ್ತರ ಸಿಕ್ಕಿದ್ದು ಅಶಿಕ್ಷಿತ (ಶಾಲಾಶಿಕ್ಷಣ ಪಡೆಯದ) ಅಮ್ಮನ ಪ್ರತಿಭೆಯಿಂದಲೇ. ಕೊಂಕು ಆಡಿದ ಕೆಲವರ ನಡುವೆ ಅಮ್ಮಾ, ಅಕ್ಕಾ ಎಂದು ಒಪ್ಪಿಕೊಂಡ ಹಲವರ ಸಂಖ್ಯೆ ಹೆಚ್ಚಿದ್ದುದೇ ಅಮ್ಮನ ಬೆಳವಣಿಗೆಗೊಂದು ಗಟ್ಟಿ ಬಲವಾಯಿತು.
ಸರಕಾರದ ಪ್ರಶಸ್ತಿಗಳ ಲಾಬಿ ಯಾವ ಮಟ್ಟಿಗಿದೆ ಎಂಬುದನ್ನೆಲ್ಲ ಕಣ್ಣಾರೆ ಅನುಭವಿಸಿದವ ನಾನು. ಅರ್ಜಿ ಹಾಕಿ ಪ್ರಶಸ್ತಿ ತೆಗೆದುಕೊಳ್ಳುವ ವ್ಯವಸ್ಥೆಯಲ್ಲಿ ನಾವೂ ಹಲವರ ಒತ್ತಾಸೆ ಮೇರೆಗೆ ಅರ್ಜಿ ಗುಜರಾಯಿಸಿದ್ದು, ಮಂತ್ರಿ, ಶಾಸಕ, ಸಂಸದ ಅಷ್ಟೇಕೆ ಮುಖ್ಯಮಂತ್ರಿ ಜೊತೆಗೂ ಮಾತನಾಡಿ, ಅಮ್ಮನದು ಯಾರೂ ಮಾಡಿರದ ನಿಜದ ಸಾಧನೆ ಅಂತ ಮನವರಿಕೆ ಮಾಡಿಸಿದರೂ, ಕೊನೆಯ ಕ್ಷಣದಲ್ಲಿ ಇದೇ ರಾಜ್ಯೋತ್ಸವ ಪ್ರಶಸ್ತಿ ಕೈತಪ್ಪಿದ ಕನಿಷ್ಠ ನಾಲ್ಕು ಸಂದರ್ಭಗಳ ಬಳಿಕ, ಇನ್ನು ಯಾವತ್ತೂ ಅರ್ಜಿ ಹಾಕುವುದಿಲ್ಲ,ಪ್ರಯತ್ನಿಸುವುದೂ ಇಲ್ಲ ಎಂದು ಗಟ್ಟಿ ಮನಸ್ಸು ಮಾಡಿದ್ದೆವು ನಾವು. ಈಗ ಐದನೇ ಬಾರಿ ಫೈನಲ್‌ನಲ್ಲಿ ಗೆದ್ದಿದ್ದಾರೆ ಅಮ್ಮ
ಕಾರಣ ಕೇಳಲೇಬೇಕು. ಅದೊಮ್ಮೆ, ಅಮ್ಮನಿಗೆ ರಾಜ್ಯೋತ್ಸವ ಪ್ರಶಸ್ತಿ ಪಕ್ಕಾ ಆಗಿಬಿಟ್ಟಿದೆ, ಅವರ ಆಧಾರ್ ಕಾರ್ಡ್ ಕಳುಹಿಸಿ ಅಂತ ನನಗೆ ಇಲಾಖೆಯ ಪರವಾಗಿ ಸೂಚನೆ ಬಂತು. ನಾನು ಕಳುಹಿಸಿದೆ. (ಇದು ರಾಜ್ಯೋತ್ಸವ ಪ್ರಶಸ್ತಿ ಕನ್ಫರ್ಮ್ ಆದ ಬಳಿಕದ ಪ್ರಕ್ರಿಯೆ). ಅದೇ ದಿನ ಸಂಜೆ ಅಮ್ಮನಿಗೆ, ಅದೇ ಪ್ರಶಸ್ತಿಯ ಆಕಾಂಕ್ಷಿಯಾಗಿದ್ದ ಹಿರಿಯ ಕಲಾವಿದರೊಬ್ಬರ ಫೋನ್. "ಇರೆಗೇ ಆಂಡ್, ದೀವೊನ್ಲೇ" (ನಿಮಗೇ ಅಯ್ತು, ಇಟ್ಕೊಳ್ಳಿ ಅದನ್ನು) ಅಂತ ತೀರಾ ಅವಮಾನಕಾರಿಯಾಗಿ ಗಡುಸು ಧ್ವನಿಯಲ್ಲೇ ಗುಡುಗಿ ಅವರು ಫೋನ್ ಇಟ್ಟುಬಿಟ್ಟರು. ಅಮ್ಮನಿಗೆ ಏನೂ ತಿಳಿಯದೆ ಗೊಂದಲ, ಅರೆ ಇವರು ನನಗೆ ಫೋನ್ ಮಾಡಿ ಬೈದರಲ್ಲಾ, ಯಾಕೆ? ಆಘಾತದಿಂದ ಅಮ್ಮ ಚೇತರಿಸಿಕೊಳ್ಳಲೇ ಇಲ್ಲ. ಅತ್ತೇ ಬಿಟ್ಟಿದ್ದರು ಅಂದು! ಮರು ದಿನ ನೋಡಿದರೆ, ಅದೇನು ಲಾಬಿಯೋ, ರಾಜಕೀಯವೋ - ಅಮ್ಮನ ಹೆಸರಿರಬೇಕಾಗಿದ್ದಲ್ಲಿ ಅದೇ ಯಕ್ಷಗಾನ ಕಲಾವಿದರ ಹೆಸರಿತ್ತು ಪ್ರಶಸ್ತಿ ಪಟ್ಟಿಯಲ್ಲಿ! ಹೇಗಾಗಿರಬೇಡ!
ಅನಂತರ, ಅಪ್ಪ-ಅಮ್ಮನಿಗೆ 75 ತುಂಬಿದಾಗ (ಇಬ್ಬರಿಗೂ ವಯಸ್ಸು ಆರು ತಿಂಗಳ ಅಂತರ), ಅಮೃತೋತ್ಸವ ನಡೆದ 2021ರಲ್ಲಿ ಶಿಷ್ಯರೆಲ್ಲರ ಸಹಯೋಗ, ಔದಾರ್ಯ, ಪ್ರಯತ್ನ ಮತ್ತು ಗುರುಭಕ್ತಿಯ ಫಲವಾಗಿ ಏರ್ಪಡಿಸಿದ್ದ "ಶ್ರೀಹರಿಲೀಲಾ ಯಕ್ಷಾಭಿನಂದನಂ" ಕಾರ್ಯಕ್ರಮದಲ್ಲಿ, ಶಿಷ್ಯಾಭಿವಂದನೆಗೆ ಅಪ್ಪ-ಅಮ್ಮನ ಪರವಾಗಿ ಉತ್ತರಿಸಿದ್ದ ನಾನು ಹೇಳಿದ್ದಿಷ್ಟೆ - ಯಕ್ಷಗಾನದ ಬಗ್ಗೆ ಏನೂ ಗೊತ್ತಿಲ್ಲದವರು, ಗೊತ್ತಿಲ್ಲದವರ ಎದುರಿನಲ್ಲಿ ನೀಡುವ ರಾಜ್ಯ ಪ್ರಶಸ್ತಿಗಿಂತ, ಯಕ್ಷಗಾನವೇನೆಂದು ಪರಿಪೂರ್ಣವಾಗಿ ತಿಳಿದಿರುವ ಸಜ್ಜನ ಕಲಾಭಿಮಾನಿ ಪ್ರೇಕ್ಷಕರೆದುರು ಸಲ್ಲುವ ಇಂಥ ಗೌರವಗಳೇ ರಾಜ್ಯ ಪ್ರಶಸ್ತಿಗೆ ಮಿಗಿಲಾದುದು. ಅದು ರಾಜಕೀಯ ಪ್ರಶಸ್ತಿಯಾದರೆ, ಇದು ರಾಜ ಪ್ರಶಸ್ತಿ ಅಂತ. ನಿಜವೂ ಹೌದು ಎನ್ನೋಣ. ಈ ರಾಜ ಪ್ರಶಸ್ತಿಗೂ ರಾಜ್ಯಪ್ರಶಸ್ತಿಗೂ ಇರುವುದು ನೃತ್ತ ಮತ್ತು ನೃತ್ಯಕ್ಕಿರುವ ಅಂತರದಷ್ಟೇ!
ಒಟ್ಟಿನಲ್ಲಿ ಅಮ್ಮನ ಪ್ರತಿಭೆ ಕತ್ತಲಲ್ಲೂ ಹೊಳೆಯಿತು, ಕೊನೆಗೂ ಸರಕಾರವೇ ಈ ಪ್ರತಿಭೆಯನ್ನು ಹುಡುಕಿಕೊಂಡು ಬಂದು ಗೌರವ ನೀಡುವಂತಾಗಿದ್ದು ಹೆಮ್ಮೆ. ಅದೂ ಅರ್ಜಿ ಗುಜರಾಯಿಸದೆಯೇ ದಕ್ಕಿದ ರಾಜ್ಯ ಪ್ರಶಸ್ತಿಯಿದು. ಸಾಧನೆ ಮಾಡಿದ ಅಮ್ಮನನ್ನು, ಆ ಮೂಲಕ ಯಕ್ಷಗಾನವನ್ನು ಗುರುತಿಸಿದ, ಈ ಪ್ರಕ್ರಿಯೆಯ ಹಿಂದಿದ್ದ ಕಂಡ ಮತ್ತು ಕಾಣದ ಕೈಗಳಿಗೆ ಅಮ್ಮನ ಪರವಾಗಿ ಅನಂತ ಧನ್ಯವಾದಗಳು. ನೀವು ಯಕ್ಷಗಾನಕ್ಕೆ ದೊಡ್ಡ ಕೊಡುಗೆ ನೀಡಿದ್ದೀರಿ ಅನ್ನುವ ಖುಷಿ ನನಗೆ. ಹಿಂದೆಯೂ ಆಯ್ಕೆ ಸಮಿತಿಯಲ್ಲಿದ್ದ ಅನೇಕರು ಅಮ್ಮನ ಹೆಸರನ್ನು ಅಂತಿಮಗೊಳಿಸಿದ್ದುದು ಕೂಡ ನನಗೆ ಚೆನ್ನಾಗಿ ನೆನಪಿದೆ. ಯಕ್ಷಗಾನದ ಮಟ್ಟಿಗೆ ಅಮ್ಮನಷ್ಟು ಅರ್ಹತೆಯಿರುವವರು ಬೇರೆ ಯಾರೂ ಇಲ್ಲ ಎಂಬುದು ಯಕ್ಷಗಾನ ಬಗೆಗೆ ಗೊತ್ತಿರುವ ಆಯ್ಕೆ ಸಮಿತಿ ಸದಸ್ಯರ ಅಭಿಪ್ರಾಯವೂ ಆಗಿತ್ತು. ಆದರೆ, ಆಗೆಲ್ಲ ಕೊನೆ ಕ್ಷಣದ ರಾಜಕೀಯ, ಏನೋ ಆಯಿತು. ಈಗ ಆಗಬೇಕಾದುದು ಆಗಿದೆ, ತಡವಾಗಿಯಾದರೂ.
ಆದರೆ ಈಗ 77ರ ಹರೆಯದ ನನ್ನಮ್ಮ ಈ ಪ್ರಶಸ್ತಿಯನ್ನು ಸಂಭ್ರಮಿಸುವ ಮನಃಸ್ಥಿತಿ ಹೊಂದಿಲ್ಲ ಎಂಬ ಕೊರಗಿದೆ. ಯಾವುದೇ ಕಲಾವಿದರಿಗೆ 60ರೊಳಗೆ ಇಂಥ ಗೌರವ ಸಲ್ಲುವಂತಾಗಬೇಕು ಎಂಬುದು ನನ್ನ ಆಗ್ರಹ. ಅಮ್ಮನಿಗೆ, ಪುರುಷ ಪ್ರಧಾನ ಕಲೆಯಲ್ಲಿ ಮಹಿಳೆಯನ್ನು ಮುಂದೆ ಕೂರಿಸಿ, ಅಮ್ಮನಿಗೆ ಭಾಗವತಿಕೆ ಕಲಿಸಿ, ಯಕ್ಷಗಾನದಲ್ಲಿ ಮಹಿಳೆಯರು ಸಕ್ಸಸ್ ಆಗಬಲ್ಲರು ಎಂದು ಮಹಿಳಾ ಭಾಗವತೀಯನ್ನು ರೂಪಿಸಿದ ಅಪ್ಪನಿಗೆ ಅಭಿನಂದನೆಗಳು. ಯಕ್ಷಗಾನಾಧಿದೇವತೆಯ ಕಿರೀಟಕ್ಕೆ ಇದೊಂದು ಪ್ರತ್ಯೇಕವಾಗಿ ಹೊಳೆಯುವ ವಜ್ರ.
-ಅವಿನಾಶ್ ಬೈಪಾಡಿತ್ತಾಯ