CRIME: ನಕಲಿ ಜ್ಯೋತಿಷ್ಯ ಜಾಹೀರಾತು ಸಂಪರ್ಕಿಸಿ 2 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡ ಮಹಿಳೆ
ಯಾವುದೇ
ಸಮಸ್ಯೆ ಇದ್ದರೆ ಪರಿಹಾರ ನೀಡುತ್ತೇವೆ ಎಂಬ ನಕಲಿ ಜ್ಯೋತಿಷ್ಯ ಜಾಹೀರಾತು ನಂಬಿ 2 ಲಕ್ಷ
ರೂಪಾಯಿಗೂ ಅಧಿಕ ಹಣವನ್ನು ಮಹಿಳೆಯೊಬ್ಬರು ಕಳೆದುಕೊಂಡಿದ್ದು, ಮಂಗಳೂರಿನ ಸೆನ್ ಠಾಣೆಗೆ ನೀಡಿದ
ದೂರಿನಂತೆ ಪ್ರಕರಣ ದಾಖಲಾಗಿದೆ.
ಮಹಿಳೆ ಫೆ.3ರಂದು ಇನ್ಸ್ಸ್ಟಾಗ್ರಾಂ ನಲ್ಲಿ ರೀಲ್ಸ್ ನೋಡುತ್ತಿದ್ದ ಸಮಯ ಅದರಲ್ಲಿ ಯಾವುದೇ ಸಮಸ್ಯೆಯಿದ್ದಲ್ಲಿ ಪರಿಹಾರ ನೀಡುತ್ತೇವೆ ಎಂದು ಜಾಹೀರಾತನ್ನು ನೀಡಿ ಒಂದು ಲಿಂಕನ್ನು ನೀಡಿದ್ದು, ಕ್ಲಿಕ್ ಮಾಡಿದಾಗ ವಾಟ್ಸಪ್ ಪೇಜ್ ತೆರೆದಿದ್ದು, ಅದರಲ್ಲಿ ಕರೆ ಮಾಡಿ ಎಂದು ಮೆಸೇಜ್ ಮಾಡಿದ್ದಕ್ಕೆ ಮಹಿಳೆ
ಕರೆ ಮಾಡಿದ್ದಾರೆ. ನಿಮಗೆ ಏನು ಸಮಸ್ಯೆ ಇದೆ ಎಂದು ಕೇಳಿದ್ದಕ್ಕೆ ಮಹಿಳೆ
ತನ್ನ ತಾಯಿಗೆ ಕಾಲು ನೋವು ಹುಷಾರಿಲ್ಲ ಸರಿಮಾಡಬಹುದಾ ಎಂದು ಕೇಳಿದ್ದಕ್ಕೆ ಸರಿ ಮಾಡುತ್ತೇವೆ ಜ್ಯೋತಿಷ್ಯ ನೋಡಲು ನೀವು ರೂ.301 ಹಣ ಕಳುಹಿಸಿ
ಎಂದದ್ದಕ್ಕೆ ಹಣ ಕಳಿಸಿದ್ದಾರೆ. ನಂತರ ನಿಮ್ಮ ತಾಯಿ ಹುಷಾರಾಗಲು ನಾವು ಕೇರಳದ ಭಗವತಿ ಹಾಗೂ ಮಹಾಕಾಳಿ ದೇವಸ್ಥಾನದಲ್ಲಿ ಪೂಜೆಯನ್ನು ಮಾಡುತ್ತೇವೆ ಆ ಸಮಯ ದೇವರ ಎದುರು ಹಣ ಇಡಬೇಕು ಅದಕ್ಕಾಗಿ ನೀವು ಹಣ ಕಳುಹಿಸಬೇಕು ಪೂಜೆ ಮುಗಿದ ಕೂಡಲೇ ನೀವು ಕಳುಹಿಸಿದ ಎಲ್ಲಾ ಹಣವನ್ನು ವಾಪಾಸು ನೀಡುವುದಾಗಿ ತಿಳಿಸಿದ್ದಕ್ಕೆ ಮಹಿಳೆ ಒಪ್ಪಿಕೊಂಡು ಅಪರಿಚಿತ ವ್ಯಕ್ತಿ ನೀಡಿದ ಬ್ಯಾಂಕ್ ಖಾತೆಗಳಿಗೆ ತನ್ನ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಒಟ್ಟು ರೂ.2,88,957 ಹಣವನ್ನು ವರ್ಗಾಯಿಸಿದ್ದಾರೆ. ಅಪರಿಚಿತ ವ್ಯಕ್ತಿಯು ಹಣವನ್ನು ವಾಪಸು ನೀಡದೆ ಇದ್ದುದರಿಂದ, ನೀಡಿದ ಮೊಬೈಲ್ ನಂಬ್ರಕ್ಕೆ ಕರೆ ಮಾಡಿದಾಗ ಪೂಜೆ ಸಂಪೂರ್ಣ ಆದ ಕೂಡಲೇ ನೀಡುವುದಾಗಿ ತಿಳಿಸಿದಾಗ ಮಹಿಳೆ ನನಗೆ ಪೂಜೆ ಬೇಡ ನಾನು ನೀಡಿದ ಹಣವನ್ನು ವಾಪಾಸು ಕೊಡಿ ಎಂದು ಹೇಳಿದ್ದಾರೆ. ಇಲ್ಲ ಅದು ಪೂಜೆ ಮಾಡಲೇಬೇಕು ಎಂದು ಹೇಳಿ ರೂ.35,000 ಹಣವನ್ನು ಹಾಕಲು ತಿಳಿಸಿದ್ದಕ್ಕೆ ನನ್ನ ಬಳಿ ಹಣವಿಲ್ಲ ಎಂದು
ಮಹಿಳೆ ಹೇಳಿದ್ದಾರೆ. ಆಗ ಆರೋಪಿ ನೀವು ನೀಡಿದ ಎಲ್ಲಾ ಹಣವನ್ನು ವಾಪಸು ನೀಡುವುದಾಗಿ ತಿಳಿಸಿದ್ದು, ಈವರೆಗೂ ಯಾವುದೇ ಹಣವನ್ನು ನೀಡಿರುವುದಿಲ್ಲ
ಎಂಬ ದೂರಿನಂತೆ ಪ್ರಕರಣ ದಾಖಲಾಗಿರುತ್ತದೆ.