Dakshina Kannada Crime News: ಮಾದಕ ವಸ್ತು ಸಾಗಾಟ ಪತ್ತೆ: 1 ಕೋಟಿ ರೂ ಮೌಲ್ಯದ ಎಂಡಿಎಂಎ, ಕೊಕೈನ್ ವಶ, ಆರೋಪಿ ಬಂಧನ
ಬಂಟ್ವಾಳ: ಹಾಸನ ಮಂಗಳೂರು ಮಾರ್ಗವಾಗಿ ಅಕ್ರಮವಾಗಿ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಜಾಲವನ್ನು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಎಸ್.ಐ. ಮಂಜುನಾಥ್ ನೇತೃತ್ವದ ತಂಡ ಭೇದಿಸಿದ್ದು, ಓರ್ವನನ್ನು ಬಂಧಿಸಿ, 1.05 ಕೋಟಿ ರೂ ಮೌಲ್ಯದ ಮಾದಕವಸ್ತು ಮತ್ತಿತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಟ್ವಾಳ ಉಪವಿಭಾಗ ಎಎಎಸ್ಪಿ ಯಶ ಕುಮಾರ್ ಶರ್ಮಾ ಮಾರ್ಗದರ್ಶನದಲ್ಲಿ ಬಂಟ್ವಾಳ ಪೊಲೀಸ್ ಇನ್ಸ್ ಪೆಕ್ಟರ್ ಅನಂತಪದ್ಮನಾಭ ನೇತೃತ್ವದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ ಎಸ್.ಐ. ಮಂಜುನಾಥ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಬಂಟ್ವಾಳ ತಾಲೂಕು ಕಡೇಶಿವಾಲಯ ಗ್ರಾಮದ ಅಮೈ ಎಂಬಲ್ಲಿ ಕಾರ್ಯಾಚರಣೆ ನಡೆದಿದೆ.ಬೆಂಗಳೂರು ಕೆಂಗೇರಿ ನಿವಾಸಿ ಮಹಮ್ಮದ್ ಅಮೀರ್ ಜರ್ತಾಬ್ (35) ಎಂಬಾತ ಬಂಧಿತ ಆರೋಪಿ.ಖಚಿತ ಮಾಹಿತಿ ಮೇರೆಗೆ ರಾತ್ರಿ ಹೊತ್ತು ಹಾಸನ ಕಡೆಯಿಂದ ಮಂಗಳೂರು ಕಡೆಗೆ
ಕಾರಿನಲ್ಲಿ ಮಾದಕವಸ್ತು ಸಾಗಿಸಲಾಗುತ್ತದೆ ಎಂಬ ವಿಷಯ ಆಧರಿಸಿ ಪೊಲೀಸರು
ಕಾರ್ಯಪ್ರವೃತ್ತರಾಗಿದ್ದರು.
ಕಾರು ತಪಾಸಣೆ ನಡೆಸಿದ ವೇಳೆ ಎಂಡಿಎಂಎ, ಕೊಕೈನ್ ಪತ್ತೆಯಾಗಿದ್ದು, ಖಾಲಿ
ಪ್ಲಾಸ್ಟಿಕ್ ಡಬ್ಬ, ಡಿಜಿಟಲ್ ತೂಕದ ಯಂತ್ರಗಳೂ ಸಿಕ್ಕಿವೆ. ಒಟ್ಟು 538.63 ಗ್ರಾಂ ಎಂಡಿಎಂಎ ಮತ್ತು
99.12 ಗ್ರಾಂ ಕೊಕೈನ್ ಹಾಗೂ ಖಾಲಿ ಪ್ಲಾಸ್ಟಿಕ್ ಡಬ್ಬಿಗಳು, ಡಿಜಿಟಲ್ ತೂಕದ ಯಂತ್ರ, ಸೇರಿದಂತೆಇತರೆ
ಸೊತ್ತುಗಳು ಪತ್ತೆಯಾಗಿರುತ್ತದೆ. ಅವುಗಳನ್ನು ವಶಕ್ಕೆ ಪಡೆಯಲಾಗಿದ್ದು, ಮಾದಕ ವಸ್ತುಗಳ ಅಂದಾಜು ಮೌಲ್ಯವು
ಎಂಡಿಎಂಎ 53,86,300 ಹಾಗೂ ಕೊಕೈನ್ 49,56,000 ರೂ ಆಗಿದ್ದು, ಇತರೆ ವಶಪಡಿಸಿಕೊಂಡ ಸ್ವತ್ತುಗಳ ಮೌಲ್ಯ
ಸೇರಿದಂತೆ ಒಟ್ಟು ಅಂದಾಜು ಮೌಲ್ಯ 1,05,59,450 ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಇದೀಗ
ಆರೋಪಿಗೆ ಇರುವ ಸಂಪರ್ಕಗಳ ಕುರಿತು ತನಿಖೆ ನಡೆಯುತ್ತಿದೆ.
ಡ್ರಗ್ಸ್ ಜಾಲದ ವಿರುದ್ಧ ಮತ್ತಷ್ಟು ಕಠಿಣ ಕ್ರಮ ಅಗತ್ಯ
ಬಂಟ್ವಾಳ ಗ್ರಾಮಾಂತರ ಪೊಲೀಸರು ನಡೆಸಿದ ದಿಟ್ಟ ಕಾರ್ಯಾಚರಣೆಯಲ್ಲಿ ಭಾರೀ ಪ್ರಮಾಣದ
ಮಾದಕವಸ್ತು ವಶಪಡಿಸಿಕೊಂಡಿರುವುದು ಶ್ಲಾಘನೀಯ. ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಪೊಲೀಸ್ ಅಧಿಕಾರಿಗಳು
ಹಾಗೂ ಸಿಬ್ಬಂದಿಗೆ ಅಭಿನಂದನೆಗಳು. ಯುವಜನತೆಯ ಭವಿಷ್ಯವನ್ನು ಹಾಳುಮಾಡುವ ಡ್ರಗ್ಸ್ ಜಾಲದ ವಿರುದ್ಧ
ಯಾವುದೇ ರಾಜಿ ಇರಬಾರದು. ಈ ಪ್ರಕರಣದ ಕುರಿತು ಇನ್ನಷ್ಟು ಆಳವಾದ ತನಿಖೆ ನಡೆಸಿ, ಇದರ ಹಿಂದೆ ಇರುವ
ಸಂಪೂರ್ಣ ಜಾಲವನ್ನು ಪತ್ತೆಹಚ್ಚಿ, ಕಾನೂನುಬದ್ಧವಾಗಿ ಸಂಬಂಧಪಟ್ಟ ಪ್ರತಿಯೊಬ್ಬರ ವಿರುದ್ಧವೂ ಕಠಿಣ
ಕ್ರಮ ಕೈಗೊಳ್ಳಬೇಕು.
ಮಾದಕವಸ್ತುಗಳ ಮೂಲ, ಪೂರೈಕೆದಾರರು ಹಾಗೂ ಜಾಲದೊಂದಿಗೆ ಸಂಪರ್ಕ ಹೊಂದಿರುವ ಎಲ್ಲರನ್ನು ತನಿಖೆಯ ವ್ಯಾಪ್ತಿಗೆ ತಂದು, ಡ್ರಗ್ಸ್ ಮುಕ್ತ ಸಮಾಜದ ನಿರ್ಮಾಣಕ್ಕೆ ಪೊಲೀಸ್ ಇಲಾಖೆ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿ ಎಂದು ಆಶಿಸುತ್ತೇನೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


