
MURUGESH NIRANI: ಭೂಮಿ ಪಡೆದು ಕೈಗಾರಿಕೆ ಸ್ಥಾಪನೆ ಮಾಡದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ.- ಸಚಿವ ಮುರುಗೇಶ್ ನಿರಾಣಿ ಎಚ್ಚರಿಕೆ
ಮಂಗಳೂರು: ಕರ್ನಾಟಕ ಪ್ರದೇಶ ಕೈಗಾರಿಕಾ ಅಭಿವೃದ್ಧಿ ಮಂಡಳಿ ( ಕೆಐಎಡಿಬಿ) ವತಿಯಿಂದ ಜಮೀನು ಪಡೆದು ಕೈಗಾರಿಕೆಗಳನ್ನು ಪ್ರಾರಂಭ ಮಾಡದವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅವರು ಎಚ್ಚರಿಸಿದ್ದಾರೆ.
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ವತಿಯಿಂದ ಗುರುವಾರ ನಡೆದ ಉದ್ಯಮಿಯಾಗು- ಉದ್ಯೋಗು ನೀಡು ಹಾಗೂ ಕೈಗಾರಿಕಾ ಆದಾಲತ್ ಉದ್ಘಾಟಿಸಿ ಅವರು ಮಾತನಾಡಿದರು.
ಭೂಮಿ ಹಂಚಿಕೆಯಾಗಿ 5 ರಿಂದ 20 ವರ್ಷ ಕಳೆದರೂ ಕೈಗಾರಿಕೆ ಪ್ರಾರಂಭ ಮಾಡದ ಭೂಮಿಯನ್ನು ವಾಪಸ್ ಪಡೆಯಲಾಗುವುದು. ಈಗಾಗಲೇ ಅಂಥವುಗಳನ್ನು ಗುರುತಿಸಲಾಗಿದೆ.10 ವರ್ಷಗಳ ಅವಧಿಗೆ ಕೈಗಾರಿಕಾ ಉದ್ದೇಶಗಳಿಗೆ ನೀಡಲಾದ ಜಮೀನನ್ನು ಲೀಸ್ ಕಂ ಸೇಲ್ಗೆ ನೀಡಲು ಸಮ್ಮತಿಸಲಾಗಿದೆ ಎಂದರು. ವರ್ಷಗಳು ಕಳೆದರೂ ಕೈಗಾರಿಕೆ ಪ್ರಾರಂಭ ಮಾಡದಿರುವವರ ಕೈಗಾರಿಕೆಗಳ ಜಮೀನನ್ನು ವಾಪಸ್ ಪಡೆಯಲಾಗುವುದು.ಇದಕ್ಕಾಗಿ ಜಾಗತಿಕ ಟೆಂಡ ಕರೆಯಲಾಗಿದ್ದು, ತಿಂಗಳೊಳಗೆ ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದರು. ಕಾರ್ಖಾನೆ ಪೂರ್ಣವಾಗಿ ಪ್ರಾರಂಭಿಸದಿದ್ದರೆ ಸೇಲ್ ಡೀಡ್ ಮಾಡಿಕೊಡುವುದಿಲ್ಲ. ಸೇಲ್ ಡೀಡ್ ಆಗದೆ ಅವರು ಕೈಗಾರಿಕಾ ಭೂಮಿಯನ್ನು ರಿಯಲ್ ಎಸ್ಟೇಟ್ಗೆ ಬಳಸಿಕೊಳ್ಳಲು ಅವಕಾಶವಿಲ್ಲ. ಕೈಗಾರಿಕೆಗೆ ಹಂಚಿಕೆಯಾದ ಜಮೀನಿನಲ್ಲಿ ಶೇ.15ರಷ್ಟು ವಸತಿಗೆ ಮೀಸಲಿಡಬೇಕು ಎಂದು ಹೇಳಿದರು.
ಕೆಐಎಡಿಬಿಯಿಂದ 99 ವರ್ಷಗಳ ಲೀಸ್ ಆಧಾರದ ಮೇಲೆ ಮಾತ್ರ 2 ಎಕರೆಗಿಂತ ಹೆಚ್ಚಿನ ಭೂಮಿಯನ್ನು ಮಂಜೂರು ಮಾಡುತ್ತಿದ್ದುದರಿಂದ ಹಲವಾರು ಪ್ರಮುಖ ಖಾಸಗಿ ಕಂಪನಿಗಳು ಕೈಗಾರಿಕೆಗಳನ್ನು ಸ್ಥಾಪಿಸಲು ಹಿಂಜರಿಯುತ್ತಿದ್ದವು. ಮಂಜೂರು ಮಾಡಿದ ಭೂಮಿಯನ್ನು ಮಾರಾಟ ಮಾಡಲು ಎಂದಿಗೂ ಅವಕಾಶವಿರಲಿಲ್ಲ ಎಂದು ಸಚಿವ ನಿರಾಣಿ ಅವರು ಸ್ಪಷ್ಟಪಡಿಸಿದರು. ಕೈಗಾರಿಕೆಗಳಿಂದ ಮಾಲಿನ್ಯ ಆಗದಂತೆ ತಡೆಗಟ್ಟಲು ಕ್ರಮ ವಹಿಸಲಾಗಿದೆ. ಎಲ್ಲವೂ ಆನ್ಲೈನ್ ವ್ಯವಸ್ಥೆಯಲ್ಲಿ ನಿಗಾ ವಹಿಸಲಾಗುವುದು.ಕೈಗಾರಿಕೆಗಳಿಗೆ ಪೂರಕವಾಗಿ ಪಠ್ಯಕ್ರಮ ಬದಲಿಸುವ ಬಗ್ಗೆ ಚಿಂತನೆ ನಡೆಸಲಾಗುವುದು
ಎಂದರು. ಹೂಡಿಕೆ ಆಕರ್ಷಿಸಲು 30,000 ಎಕರೆ ಕೈಗಾರಿಕಾ ಭೂಮಿ ಸ್ವಾಧೀನಕ್ಕೆ ಕ್ರಮತೆಗೆದುಕೊಳ್ಳಲಾಗಿದೆ. ಉದ್ಯಮಿಗಳಿಗೆ ಕಾಲಮಿತಿಯೊಳಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಲಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.