NEWS: ಜೀವ ಬೆದರಿಕೆ ಇದೆ ಎಂದು ಭದ್ರತೆ ಕೋರಿದ ನೂಪುರ್ ಶರ್ಮಾ
ಒಂದು ಕಾಲದಲ್ಲಿ ಅರವಿಂದ ಕೇಜ್ರಿವಾಲ್ ಎದುರು ಸ್ಪರ್ಧಿಸಿ ಸುದ್ದಿ ಮಾಡಿದ್ದ ಮಾಜಿ ಎಬಿವಿಪಿ ನಾಯಕಿ ಹಾಗೂ ಬಿಜೆಪಿಯಲ್ಲಿ ಹಂತಹಂತವಾಗಿ ಮೇಲೇರುತ್ತಾ ಹೋಗಿದ್ದ ನೂಪುರ್ ಶರ್ಮಾ ಈಗ ಟಿ.ವಿ.ಚರ್ಚೆಯೊಂದರಲ್ಲಿ ಆಡಿದ ಮಾತು COSTLY ಆಗಿದೆ. ಭಾರತವಷ್ಟೇ ಅಲ್ಲ, ಜಾಗತಿಕ ಮಟ್ಟದಲ್ಲೇ ಶರ್ಮಾ ವಿರುದ್ಧ ಭಾರಿ ಟೀಕೆಗಳು ಬಂದದ್ದಲ್ಲದೆ, ತಾನು ಪ್ರತಿನಿಧಿಸುವ ಪಕ್ಷದಿಂದಲೂ ಅವರ ಉಚ್ಛಾಟನೆಯಾಗಿದೆ. ಬಿಜೆಪಿಯಲ್ಲೇ ಉಚ್ಛಾಟನೆ ಕುರಿತ ಪರ, ವಿರೋಧ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿದ್ದರೆ, ನೂಪುರ್ ತಾನು ನೀಡಿದ ಹೇಳಿಕೆಗೆ ಕ್ಷಮೆ ಯಾಚಿಸಿದ್ದೇನೆ, ಆದರೂ ತನಗೆ ಜೀವ ಬೆದರಿಕೆ ಇದೆ, ಭದ್ರತೆ ನೀಡಿ ಎಂದು ದೂರು ನೀಡಿದ್ದಾರೆ. ಆದರೆ ಕ್ಷಮೆ ಕೇಳಿದ ಮಾತ್ರಕ್ಕೆ ವಿವಾದ ತಣ್ಣಗಾಗಿಲ್ಲ, ಹೇಳಿಕೆ ಖಂಡಿಸಿ ನೂಪುರ್ ವಿರುದ್ಧವೂ ದೂರು ದಾಖಲಾಗಿದೆ. ಹೇಳಿಕೆಯ ಬಳಿಕ ಏನೇನಾಯಿತು?
ವಿವಾದವಾಗುತ್ತಿದ್ದಂತೆ ನೂಪುರ್ ಶರ್ಮಾ ಕ್ಷಮೆ ಕೇಳಿದ್ದಾರೆ. ನಾನು ನನ್ನ ಹೇಳಿಕೆ ಬಗ್ಗೆ ಈಗಾಗಲೇ ಸ್ಪಷ್ಟೀಕರಣ ನೀಡಿದ್ದೇನೆ. ಆದರೆ ನನಗೆ ನಿರಂತರವಾಗಿ ಜೀವ ಬೆದರಿಕೆ ಕರೆಗಳು ಬರುತ್ತಿದ್ದು, ಸೂಕ್ತ ಭದ್ರತೆ ಒದಗಿಸಿ ಅಂತ ಮನವಿ ಮಾಡಿದ್ದಾರೆ. ಬಳಿಕ ಜೀವ ಬೆದರಿಕೆ ದೂರು ದಾಖಲಿಸಿದ್ದಾರೆ. ದೆಹಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ನೂಪುರ್ ಶರ್ಮಾ, ನನಗೆ ನಿರಂತರವಾಗಿ ಜೀವ ಬೆದರಿಕೆ ಕರೆಗಳು ಬರುತ್ತಿವೆ. ಹೀಗಾಗಿ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಸೂಕ್ತ ಭದ್ರತೆ ಕಲ್ಪಿಸುವಂತೆ ದೆಹಲಿ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
ನೂಪುರ್ ಶರ್ಮಾ ಅವರ ವಿರುದ್ಧ ಮಹಾರಾಷ್ಟ್ರದ ಮುಂಬ್ರಾ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ. ಶರ್ಮಾ ವಿರುದ್ಧ ಎಫ್ಐಆರ್ ದಾಖಲಿಸಿದ ನಂತರ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮುಂಬ್ರಾ ಪೊಲೀಸರು ಶರ್ಮಾ ಅವರಿಗೆ ಸಮನ್ಸ್ ಜಾರಿ ಮಾಡಿದ್ದಾರೆ. ಈ ತಿಂಗಳ 22 ರಂದು ತಮ್ಮ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ ಶರ್ಮಾ ಹೇಳಿಕೆ ವಿರುದ್ಧ ಮುಸ್ಲಿಂ ರಾಷ್ಟ್ರಗಳು ತಿರುಗಿ ಬಿದ್ದಿವೆ. ಸೌದಿ ಅರೇಬಿಯಾ, ಬಹರೈನ್, ಅರಬ್ ಸಂಯುಕ್ತ ಸಂಸ್ಥಾನ (ಯುಎಇ), ಇಂಡೊನೇಷ್ಯಾ, ಜೋರ್ಡನ್ ಮತ್ತು ಅಫ್ಗಾನಿಸ್ತಾನ ಸೇರಿದಂತೆ ಹಲವು ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿದ್ದವು.