TEXT BOOK: ಮಕ್ಕಳು ಓದುವ ಪಠ್ಯ; ರಾಜಕಾರಣಿಗಳ ವಾಕ್ಸಮರ
NAMMOOR: ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ನಡೆಸಿದ ಬದಲಾವಣೆಗಳ ವಿಚಾರವೀಗ ಸಾಮಾಜಿಕ ಜಾಲತಾಣ ಚರ್ಚೆಗಳಿಂದ, ಟಿವಿ ಪ್ಯಾನಲ್ ಚರ್ಚೆಗಳ ಬಳಿಕ ಸುದ್ದಿಗೋಷ್ಠಿ ಹಾಗೂ ಬೀದಿ ಹೋರಾಟದವರೆಗೆ ಬಂದು ನಿಂತಿದೆ. ಭಾನುವಾರವೂ ಈ ವಿವಾದಕ್ಕೆ ರಜೆ ಇರಲಿಲ್ಲ.
ಸಿಎಂ ಬೊಮ್ಮಾಯಿ ಈ ಕುರಿತು ನೀಡಿದ ಹೇಳಿಕೆಯಿಂದ ಗೊಂದಲ ಬಗೆಹರಿದಿಲ್ಲ ಎಂದಿರುವ ಕಾಂಗ್ರೆಸ್, ಕುವೆಂಪು ಹುಟ್ಟೂರು ಕುಪ್ಪಳ್ಳಿಯಿಂದಲೇ ಹೋರಾಟ ನಡೆಸಲು ತೀರ್ಮಾನಿಸಿದೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಮತ್ತು ಮುಖಂಡ ಪ್ರಿಯಾಂಕ್ ಖರ್ಗೆ, ಶೀಘ್ರ ಹೋರಾಟದ ದಿನಾಂಕ ಪ್ರಕಟಿಸುತ್ತೇವೆ ಎಂದಿದ್ದಾರೆ.
ಪಠ್ಯದಲ್ಲಿ ಲೋಪವಿದ್ದರೆ ಮರುಪರಿಷ್ಕರಣೆಗೆ ಸರಕಾರ ಮುಕ್ತ ಮನಸ್ಸು ಹೊಂದಿದೆ ಎಂದು ಸಿಎಂ ಹೇಳಿಕೆ ನೀಡಿದ್ದಾರೆ. ಆದರೆ, ಈಗಾಗಲೇ ಪಠ್ಯಪುಸ್ತಕಗಳು ಮುದ್ರಣವಾಗಿವೆ. ಮರು ಪರಿಷ್ಕರಣೆ ಮಾಡುವವರು ಯಾರು ಎಂದು ಪ್ರಶ್ನಿಸಿದ್ದಾರೆ.
ಮುದ್ರಣ ನಿಲ್ಲಿಸುವುದಿಲ್ಲ ಎಂದರು ಶಿಕ್ಷಣ ಸಚಿವ ನಾಗೇಶ್:
ಪರಿಷ್ಕೃತ ಪಠ್ಯಪುಸ್ತಕಗಳ ಮುದ್ರಣವನ್ನು ನಿಲ್ಲಿಸುವುದಿಲ್ಲ, ಪಠ್ಯಪುಸ್ತಕಗಳ ಮರುಮುದ್ರಣ ಮಾಡುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಠ್ಯಪುಸ್ತಕಗಳ ವಿತರಣೆಯಲ್ಲಿ ಯಾವುದೇ ವಿಳಂಬವಾಗುವುದಿಲ್ಲ ಮತ್ತು ಮರು ಪರಿಷ್ಕರಣೆಯಿಂದಾಗಿ ಶಾಲಾ ಶಿಕ್ಷಣದ ಮೇಲೆ ಪರಿಣಾಮ ಬೀರುವುದಿಲ್ಲ. ಪಠ್ಯಪುಸ್ತಕಗಳ ಮರುಮುದ್ರಣ ಮಾಡುವುದಿಲ್ಲ ಎಂದು ಹೇಳಿದ್ದಾರೆ
ಸಿದ್ಧರಾಮಯ್ಯ ಟ್ವೀಟ್ ವಾರ್:
ಹಿಂದೂ ಭಾವನೆಗೆ ಧಕ್ಕೆಯಾಗಿದ್ದಕ್ಕೆ ಪಠ್ಯ ಪರಿಷ್ಕರಣೆ ಮಾಡಲಾಗಿದೆ ಎಂದು ಸಚಿವ ಬಿ. ಸಿ. ನಾಗೇಶ್ ಬಹಿರಂಗಪಡಿಸಿದ್ದಾರೆ. ಈ ಹಿಂದೂಗಳು ಯಾರು ಎನ್ನುವುದನ್ನು ಸಚಿವರು ಬಹಿರಂಗಪಡಿಸಿ, ಯಾವುದರಿಂದ ಯಾರ ಭಾವನೆಗೆ ಧಕ್ಕೆಯಾಗಿದೆ ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಚಕ್ರತೀರ್ಥ ಅರ್ಹತೆ ಪ್ರಶ್ನಿಸಿದ ಖರ್ಗೆ:
ರೋಹಿತ್ ಚಕ್ರತೀರ್ಥ ಯಾರು? ಇವರ ಅರ್ಹತೆ ಏನು? ಬರಗೂರು ರಾಮಚಂದ್ರಪ್ಪ ಅವರ ಅರ್ಹತೆ ಹಾಗೂ ಇವರ ಅರ್ಹತೆಯನ್ನು ತುಲನೆ ಮಾಡಿ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.