POLITICS: ಬಿಜೆಪಿಯಿಂದ ನೂಪುರ್ ಶರ್ಮಾ, ನವೀನ್ ಜಿಂದಾಲ್ ಔಟ್, ಈಗ ಅವರು ಹೇಳುವುದೇನು?
ನವದೆಹಲಿ: ಬಿಜೆಪಿ ವಕ್ತಾರೆ ನೂಪುರ್ ಶರ್ಮಾರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಲಾಗಿದೆ. ಟಿವಿ ಚರ್ಚೆಯೊಂದರಲ್ಲಿ ಪ್ರವಾದಿ ಕುರಿತು ನೀಡಿದ ಹೇಳಿಕೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಅದೇ ರೀತಿಯಲ್ಲಿ ದೆಹಲಿ ಮಾಧ್ಯಮ ಪ್ರಮುಖ್ ಕುಮಾರ್ ಜಿಂದಾಲ್ ಅವರನ್ನೂ ಪಾರ್ಟಿಯಿಂದ ಹೊರಹಾಕಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಕೋಮುಸಾಮರಸ್ಯ ಕದಡುವ ಹೇಳಿಕೆ ನೀಡಿರುವ ಆರೋಪಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಇದರ ಬೆನ್ನಲ್ಲೇ ನೂಪುರ್ ಶರ್ಮಾ, ತನ್ನ ಹೇಳಿಕೆಯನ್ನು ವಾಪಸ್ ತೆಗೆದುಕೊಂಡಿದ್ದಾರೆ. ಶಿವಲಿಂಗ ಕುರಿತ ಅವಹೇಳನಕಾರಿಯಾಗಿ ಹೇಳುತ್ತಿರುವುದು ಪದೇ ಪದೇ ನಡೆಯುತ್ತಿದ್ದ ಸಂದರ್ಭ ತಾನು ಟಿವಿ ಚರ್ಚೆಯೊಂದರಲ್ಲಿ ಆಡಿದ ಮಾತಿನಿಂದಾಗಿ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದರೆ, ನಾನು ಬೇಷರತ್ ಆಗಿ ನನ್ನ ಹೇಳಿಕೆಯನ್ನು ಹಿಂಪಡೆಯುತ್ತೇನೆ. ಯಾರ ಧಾರ್ಮಿಕ ಭಾವನೆಗೂ ಧಕ್ಕೆಯನ್ನುಂಟುಮಾಡುವ ಇರಾದೆ ನನ್ನಲ್ಲಿಲ್ಲ ಎಂದು ನೂಪುರ್ ಶರ್ಮ ಟ್ವೀಟ್ ಮಾಡಿದ್ದಾರೆ. ಇದೇ ರೀತಿಯ ಹೇಳಿಕೆಯನ್ನೂ ಜಿಂದಾಲ್ ನೀಡಿದ್ದಾರೆ. ಇದೀಗ ಉಭಯ ಉಚ್ಛಾಟಿತ ನಾಯಕರೂ ತಮಗೆ ಪ್ರಾಣ ಬೆದರಿಕೆಗಳು ಸೋಶಿಯಲ್ ಮೀಡಿಯಾ ಮೂಲಕ ಬರುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ.
ಇದೇ ಸಂದರ್ಭ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಹೇಳಿಕೆ ನೀಡಿ, ಪಕ್ಷ ಎಲ್ಲ ಧರ್ಮಗಳನ್ನೂ ಸಮಾನವಾಗಿ ಗೌರವಿಸುತ್ತದೆ ಎಂದಿದ್ದಾರೆ.ನೂಪುರ್ ಹೇಳಿಕೆ ವಿರೋಧಿಸಿ ಕಾನ್ಪುರದಲ್ಲಿ ನಡೆದ ಘಟನೆಯಲ್ಲಿ 29 ಮಂದಿಯನ್ನು ಕಾನ್ಪುರ ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯ ಹಯಾತ್ ಝಫರ್ ಹಾಶ್ಮಿ ಎಂಬಾತನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಆತ ಗಲಭೆ ಹಿಂದಿದ್ದಾನೆ ಎಂದು ಪೊಲೀಸರು ಸಂಶಯಿಸಿದ್ದಾಗಿ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.