News: ನಾನು ಪಾರ್ವತಿಯ ಅವತಾರ ಎಂದು ಹಿಮಾಲಯದ ಬಾರ್ಡರ್ ನಲ್ಲೇ ರಚ್ಚೆ ಹಿಡಿದು ಕುಳಿತ ಯುವತಿಗೆ ಶಿವನನ್ನು ಮದ್ವೆ ಆಗ್ಬೇಕಂತೆ!!
Saturday, June 4, 2022
ವಾಪಸ್ ಬರೋಲ್ಲ ಅಂತಾಳೆ ಹಿಮಾಲಯ ಪ್ರವಾಸಕ್ಕೆ ಹೋದ ಮಹಿಳೆ, ಉತ್ತರಾಖಂಡ ಪೊಲೀಸರಿಗೆ ತಲೆನೋವಾದ ಪ್ರಕರಣವಿದು.
ಹಿಮಾಲಯ ಪ್ರವಾಸಕ್ಕೆ ಎಂದು ತೆರಳಿದ ಮಹಿಳೆಯೊಬ್ಬರು ಮನೆಯವರು, ಪೊಲೀಸರು ಎಷ್ಟು ಪರಿಪರಿಯಾಗಿ ಬೇಡಿಕೊಂಡರೂ ವಾಪಸ್ ಬರುವುದಿಲ್ಲ ಎನ್ನುತ್ತಿದ್ದಾಳೆ. ಇದೀಗ ಉತ್ತರಾಖಾಂಡ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಯಾಕೆ ಬರುತ್ತಿಲ್ಲ ಎಂದು ಪ್ರಶ್ನಿಸಿದರೆ, ನಾನು ಪಾರ್ವತಿಯ ಅವತಾರ ಎನ್ನುತ್ತಿದ್ದಾಳಂತೆ. ಸದ್ಯಕ್ಕೆ ಭಾರತ ಚೀನಾ ಗಡಿಯಾದ ನಬಿಧಾಂಗ್ ಎಂಬಲ್ಲಿ ಆಕೆ ಠಿಕಾಣಿ ಹೂಡಿದ್ದಾಳೆ.
ಉತ್ತರ ಪ್ರದೇಶದ ಖೇರಿ ನಿವಾಸಿ ಹರ್ವಿಂದರ್ ಕೌರ್ ತನ್ನ ತಾಯಿಯೊಂದಿಗೆ ನಬಿಧಾಂಗ್ ಎಂಬಲ್ಲಿಗೆ ಪ್ರವಾಸಕ್ಕೆ ತೆರಳಿದ್ದರು. ಹಲವಾರು ದಿನಗಳ ಕಾಲ ಹಿಮಾಲಯಲ್ಲಿ ತಂಗಿದ್ದರು. ಹಾಗೆ ಹೋಗಲು ಇನ್ನರ್ ಲೈನ್ ಪರ್ಮಿಟ್ ಬೇಕು. ಅದಕ್ಕೊಂದು ನಿರ್ದಿಷ್ಟ ಅವಧಿಯೂ ಇರುತ್ತದೆ. ಆದರೆ ಅವಧಿ ಮುಗಿದರೂ ಈ ಮಹಿಳೆ ವಾಪಸ್ ಬರ್ತಿಲ್ಲ.
ಮಗಳು ಹೀಗೆ ಬರೋಲ್ಲ ಎಂದು ರಚ್ಚೆಹಿಡಿದಾಗ ತಾಯಿ ಪರ್ಮಿಟ್ ವಿಸ್ತರಿಸಿದ್ದರು. ಆದರೆ ಮತ್ತೊಂದು ಅವಧಿ ಮುಗಿದರೂ ಬರ್ತಿಲ್ಲವಂತೆ. ಬಳಿಕ ಬಾರ್ಡರ್ ಪೊಲೀಸ್ ಸಿಬ್ಬಂದಿ ಮನವೊಲಿಸಲು ಯತ್ನಿಸಿದರು. ಉಹೂಂ.. ನಾನು ಬರೋಲ್ಲ ಅನ್ನುತ್ತಿದ್ದಾಳೆ.
ಬಳಿಕ ಧಾರ್ಚುಲಾ ಪೊಲೀಸರು ತಂಡದೊಂದಿಗೆ ಮಹಿಳೆ ಮನವೊಲಿಸಲು ಬಂದರೂ ಮಹಿಳೆ ತಯಾರಾಗಲಿಲ್ಲ. ಬಲವಂತವಾಗಿ ಕರೆದುಕೊಂಡು ಹೋಗಲು ಯತ್ನಿಸಿದರೆ ಸಾಯುತ್ತೇನೆ ಎಂದು ಧಮ್ಕಿ ಹಾಕಿದ್ದಾಳೆ.