Movie: ನಾಯಿ, ಮನುಷ್ಯ ಸಂಬಂಧಕ್ಕೆ ಹೊಸ ಅರ್ಥ ಕಲ್ಪಿಸಿದ ಚಾರ್ಲಿ ಅಷ್ಟೊಂದು ಜನಪ್ರಿಯತೆ ಗಳಿಸಿತೇಕೆ?

Movie: ನಾಯಿ, ಮನುಷ್ಯ ಸಂಬಂಧಕ್ಕೆ ಹೊಸ ಅರ್ಥ ಕಲ್ಪಿಸಿದ ಚಾರ್ಲಿ ಅಷ್ಟೊಂದು ಜನಪ್ರಿಯತೆ ಗಳಿಸಿತೇಕೆ?

ಚಾರ್ಲಿ ಸೂಪರ್ ಹಿಟ್ ಸಿನಿಮಾ ಆಗಿ ಮೂಡಿಬಂದದ್ದು, ನಾಯಿ ಕಂಡರೆ ಮೂಗು ಮುರಿಯುತ್ತಿದ್ದವರೂ ಹಾಡಿ ಹೊಗಳುತ್ತಿರುವುದು ಈಗ ಇತಿಹಾಸ ಈ ಸಿನಿಮಾ ಕುರಿತು ಹಿರಿಯ ಪತ್ರಕರ್ತ ಅನಿಲ್ ಎಚ್.ಟಿ. ಬರೆದಿದ್ದಾರೆ.
ಚಾಲಿ೯ - ಸಂಭ್ರಮ ಮತ್ತು ವಿಷಾಧ

( ಕಲಿಯುಗದ ಧಮ೯ರಾಯನ ಕಥೆ..)

- ಅನಿಲ್ ಎಚ್.ಟಿ.

 777  ಚಾಲಿ೯ ಚಿತ್ರದ ಕಥೆ ಏನು?

- ಅದೊಂದು ನಾಯಿ ಕಥೆ…ನಾಯಿ ಜತೆ ನಾಯಕನ ನಾಯಿ ಪಾಡಿನ ಕಥೆ.. ಅಥವಾ ನಾಯಿ ಸಹವಾಸ ಮಾಡಿ ಜೀವನದ ದಿಕ್ಕು ಕಂಡುಕೊಂಡವನ ಮನೋಜ್ಞ ಕಥೆ... ಹೖದಯ ಹಿಂಡುವುದರ ಜತೆಗೇ ಹೖದಯ  ಗೆಲ್ಲುವ ಹೖದಯಂಗಮ ಕಥೆ..... 

ಚಿತ್ರ ಹೇಗಿದೆ?

- ಇದಕ್ಕಿಂತ ಉತ್ತಮವಾಗಿ ನಾಯಿ ಕಥೆ ಹೇಳೋದು ಕಷ್ಟ ಕಷ್ಟ..

ಚಿತ್ರಕ್ಕೆ ರೆಸ್ಪಾನ್ಸ್ ಹೇಗಿದೆ?

- ನಾಯಿ ಸಾಕಿದವರು ಎದ್ದು ಬಿದ್ದು ಚಿತ್ರ ನೋಡಲು ಬರ್ತಾ ಇದ್ದಾರೆ. ಚಿತ್ರ ನೋಡಿದವರು ನಾಯಿ ಸಾಕೋಣ.. ಆದ್ರೆ ಚಾಲಿ೯ಯಂಥ ನಾಯಿ ಬೇಕು ಅಂಥ ಅಂದ್ಕೋತಾ ಇದ್ದಾರೆ. ಚಿತ್ರ ಮಂದಿರಗಳಲ್ಲಿ ಇಂಗ್ಲೀಷ್ ಮಾತಾಡಿಕೊಂಡು ಪಾಪ್ ಕಾನ್೯ ತಿಂದುಕೊಳ್ತಾ, ಥಮ್ಯ್ ಅಪ್ ಕುಡ್ಕೊಂಡು ಯುವಪೀಳಿಗೆ ಕನ್ನಡದ ನಾಯಿ ಸಿನಿಮಾ ನೋಡಲು ಬರ್ತಾ ಇದೆ. ಚಾಲಿ೯ ಸಕ್ಸಸ್ ಆಗಿದೆ ಎಂಬೋದಕ್ಕೆ ಇದಕ್ಕಿಂತ ಉದಾಹರಣೆ ಬೇಕಾಗಿಲ್ಲ.

ಯಾರು ಹಿರೋ?

- ನಾಯಿಯ ಕಥೆ ಇರೋದ್ರಿಂದ ಚಾಲಿ೯ ಪಾತ್ರ ನಿವ೯ಹಿಸಿರೋ ನಾಯಿಯೇ ಹಿರೋ.. ಜತೆಗೆ ನಾಯಿಯಷ್ಟೇ ಪ್ರಬುದ್ದವಾಗಿ ನಮ್ಮ ರಕ್ಷಿತ್ ಶೆಟ್ಟಿ ನಟಿಸಿದ್ದಾರೆ. ನನ್ ಪ್ರಕಾರ ನಾಯಿಯನ್ನು ಪ್ರತೀ ದೖಶ್ಯದಲ್ಲಿಯೂ  ಸಹಜತೆಯೊಂದಿಗೆ ಮುದ್ದಾಗಿ  ಸೆರೆಹಿಡಿದ ಚಿತ್ರದ ಛಾಯಾಗ್ರಾಹಕ ಕೂಡ ಹಿರೋವೇ. 3 ಗಂಟೆ ಕಾಲ ನಾಯಿಯನ್ನು ಕ್ಯಾಮರದಲ್ಲಿ ಸೆರೆಹಿಡಿಯೋದು ಸಾಧಾರಣ ಕೆಲಸವೇ 

ವಿಷಯಕ್ಕೆ ಬಂದರೆ..

ರಕ್ಷಿತ್ ಶೆಟ್ಟಿ ನಿಮಾ೯ಣದ ಹೊಸ ಚಿತ್ರ  777 ಚಾಲಿ೯ ಸದ್ದು ಮಾಡುತ್ತಿದೆ. ಬಾಕ್ಸ್ ಆಫೀಸ್ ನಲ್ಲಿ ಬೌ ಬೌ ಎನ್ನುತ್ತಿದೆ. ಚಾಲಿ೯ಯ ಆಭ೯ಟ ಜೋರಾಗಿಯೇ ಇದೆ. ಕೆಜಿಎಫ್ ಧೂಳಿನಲ್ಲಿ ಮುಳುಗಿದ್ದ ಕನ್ನಡ ಚಿತ್ರರಂಗ ಇದೀಗ ಚಾಲಿ೯ ಎಂಬ ನಾಯಿಯ ಕನವರಿಕೆಯಲ್ಲಿ ತೇಲುವ ಸಮಯ ಬಂದಿದೆ.

ಧಮ೯ ಎಂಬಾತ ಸಿಡುಕ. ಕೋಪಿಷ್ಟ.. ಯಾರೊಂದಿಗೂ ಬೆರೆಯದ ಬಿಸಿರಕ್ತದ ತರುಣ.. ಇವನಿರೋ ಕಾಲೋನಿಯಲ್ಲಿ ನಾಯಿ ಸಾಕುವಂತಿಲ್ಲ. ಹೀಗಿರುವಾಗಲೇ ಕಾಲೋನಿಯಲ್ಲಿ ಬೈಕ್ ಅಪಘಾತಕ್ಕೀಡಾದ ಬೀದಿ ನಾಯಿ ಮೂಲಕ ಧಮ೯ನಿಗೆ ನಾಯಿಯ ಸಂಪಕ೯ ಸಿಗುವಂತಾಗುತ್ತದೆ. ನಾಯಿ ವೈದ್ಯ ರಾಜ್ ಬಿ ಶೆಟ್ಟಿ ಚಿಕಿತ್ಸೆ ನೀಡಿ ನಾಯಿಯನ್ನು ಬದುಕಿಸುತ್ತಾರೆ. ಯಾರನ್ನೂ ಇಷ್ಟಪಡದ ಧಮ೯ನ ಮನೆಯೊಳಗೆ ಸೇರಿಕೊಂಡ ನಾಯಿ ನಿಜಕ್ಕೂ ಧಮ೯ನಿಗೆ ಧಮ೯ ಸಂಕಷ್ಟ ಉಂಟು ಮಾಡುತ್ತದೆ. ಹೇಗಾದರೂ ಮಾಡಿ ನಾಯಿಯನ್ನು ಹೊರಹಾಕುವ ಧಮ೯ನ ಪ್ರಯತ್ನಗಳೆಲ್ಲಾ ವಿಫಲವಾಗುತ್ತದೆ. ಹೀಗಿರುವಾಗಲೇ ನಾಯಿ ಮತ್ತು ಧಮ೯ನ ನಡುವೇ ಬೆಸುಗೆಯೊಂದು ಬೆಳೆಯುತ್ತಾ ಹೋಗುತ್ತದೆ. ನಾಯಿಯನ್ನು ಬಿಟ್ಟಿರಲಾರದ ಹಂತಕ್ಕೆ ತಲುಪುವ ಧಮ೯ ತನ್ನ ಪ್ರೀತಿಯ ಕಲಾವಿದ ಚಾಲಿ೯ ಚಾಪ್ಲಿನ್ ನೆನಪಿನಲ್ಲಿ ಪ್ರೀತಿಯ ನಾಯಿಗೂ ಚಾಲಿ೯ ಎಂದು ಹೆಸರಿಡುತ್ತಾನೆ.

ಚಾಲಿ೯ ಮತ್ತು ಧಮ೯ನ ಗೆಳೆತನ ಪ್ರೇಕ್ಷಕನಿಗೂ ಆಪ್ತವಾಗುತ್ತಲೇ ಹೋಗುತ್ತಿರುವಾಗ, ಚಾಲಿ೯ ಹುಷಾರು ತಪ್ಪುತ್ತದೆ... ಚಾಲಿ೯ಗೆ ಏನಾಯಿತು... ಮುಂದೇನಾಯಿತು..

ಅದೇ ಇರೋದು ಚಾಲಿ೯ ಕಥೆ.. ಅಥವಾ ನಾಯಿ ಕಥೆ.. ಚಾಲಿ೯ಯ ಮುಂದುವರೆದ ಕಥೆಯನ್ನು ಚಿತ್ರ ನೋಡಿಯೇ ಅನುಭವಿಸಬೇಕಾಗಿ ವಿನಂತಿ.
ಇಷ್ಟಕ್ಕೂ ಇದ್ರಲ್ಲಿ ಸಸ್ಪೆನ್ಸ್ ಏನೂ ಇಲ್ಲ. ಚಿತ್ರದ ಮಧ್ಯಭಾಗದಲ್ಲಿಯೇ ಚಾಲಿ೯ಯ ಅಂತ್ಯದ ಕಥೆ ಏನೂಂತ ಪ್ರೇಕ್ಷಕ ಸುಲಭವಾಗಿಯೇ ಊಹಿಸಬಹುದಾಗಿದೆ.  ಹೀಗಿದ್ದರೂ ಚಾಲಿ೯ ಎಂಬ ಚಿತ್ರವನ್ನು ಮನೋಜ್ಞವಾಗಿ ಪ್ರೇಕ್ಷಕನ ಮನಸ್ಸಿಗೆ ಆಪ್ತವಾಗಿ ಕಥೆ ಹೆಣೆಯುತ್ತಾ ಮುಂದುವರಿಸುವ ಸೊಬಗು ಈ ಚಿತ್ರದಲ್ಲಿದೆ.

ನಾಯಿ, ಬೆಕ್ಕು, ಹುಲಿ, ಸಿಂಹ, ಆನೆ ಹೀಗೆ ಪ್ರಾಣಿಗಳ ಬಗ್ಗೆ ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ ಚಿತ್ರಗಳು ಬಂದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಪ್ರೇಕ್ಷಕನನ್ನು ಬಹುಕಾಲ ಕಾಡುವಂತೆ ಮಾಡುವ ಅಂಶಗಳನ್ನು ರಕ್ಷಿತ್ ಶೆಟ್ಟಿ ನಿಮಾ೯ಣದ ಚಾಲಿ೯ ಹೊಂದಿದೆ ಎಂಬುದೇ ಹೆಗ್ಗಳಿಕೆ.

3 ಗಂಟೆ ಕಾಲದ ಚಿತ್ರವನ್ನು ಅಧ೯ ಗಂಟೆ ಎಡಿಟ್ ಮಾಡಬಹುದಿತ್ತು ಎಂದು ಅನ್ನಿಸಿದರೂ ಎಲ್ಲಿಯೋ ಬೋರ್ ಆಗದಂತೆ ನೋಡಿಸಿಕೊಂಡು ಹೋಗುವ ಚಾಲಿ೯ ನಿದೇ೯ಶಕ ಕಿರಣ್ ರಾಜ್ ಚಾಕಚಕ್ಯತೆಯಲ್ಲಿ  ಉತ್ತಮವಾಗಿಯೇ ಮೂಡಿಬಂದಿದೆ. ನಿರೂಪಣಾ ಶೈಲಿಯೂ  ನೋಡುಗನನ್ನು ಹಿಡಿದಿಡುತ್ತದೆ.
 
ಚಾಲಿ೯ ಚಿತ್ರದ ಡೈಲಾಗ್ ಗಳು ಸಹಜವಾಗಿದೆ. ಎಲ್ಲಿಯೂ ಸಿನಿಮಾ ಭಾಷೆಯ ಕೖತಕತೆ ಹೊಂದಿಲ್ಲ. ಕ್ಯಾಮರ ಮನ್  ಅರವಿಂದ್ ಕಶ್ಯಪ್  ಗೆ ಫುಲ್ ಮಾಕ್ಸ್೯.. ನೋಬಿನ್ ಪೌಲ್ ಸಂಗೀತವೂ ಬಲು ಸೊಗಸು. ಕಷ್ಟಕರವಾದ ಸಂಕಲನವನ್ನು   ಪ್ರತೀಕ್ ಶೆಟ್ಟಿ ಸುಸೂತ್ರವಾಗಿ ನಿವ೯ಹಿಸಿದಂತಿದೆ. 

ಕೆಲವು ಹಾಡುಗಳು ಹೖದಯ ತಟ್ಟುತ್ತವೆ.. ಕೆಲವು ಸಾಲುಗಳು ದೖಷ್ಯದೊಂದಿಗೆ  ಮಿಳಿತಗೊಂಡು ಹೖದಯ ಹಿಂಡುತ್ತದೆ 
 
ಚಿತ್ರದಲ್ಲಿ ಧಮ೯ , ಚಾಲಿ೯ಗೆ ಬೈಯುತ್ತಾನೆ. ಬರೀ ತಿನ್ನೋದು, ಮಲಗೋದೇ ಆಯಿತು.. ಏನ್ ಸಾಧನೆ ನಿಂದು..ಚಾಲಿ೯ ಬರುವ ಮುನ್ನ ಧಮ೯ನ ಜೀವನ ಕೂಡ ಹೀಗಿಯೇ ಇತ್ತು .. ಚಾಲಿ೯ ಎಂಟರ್ ಆಗಿ ಧಮ೯ನ ಜೀವನದ ದಿಕ್ಕೇ ಬದಲಾಗಿಬಿಡುತ್ತದೆ. 

ಸಾಮಾನ್ಯವಾಗಿ ಚಿತ್ರವೊಂದರಲ್ಲಿ ನಾಯಕನಿಗೆ ಸಿಗುವ ಶಿಳ್ಳೆ, ಚಪ್ಪಾಳೆ.. ವಾಹ್ ವಾಹ್ ಎಂಬೆಲ್ಲಾ ಉದ್ಗೋಷಗಳು ಚಾಲಿ೯ಯಲ್ಲಿ ಬೀದಿನಾಯಿ ಪಾತ್ರಕ್ಕೆ ಸಿಗುತ್ತದೆ ಎಂದರೆ ಅದುವೇ ಚಿತ್ರದ ಹಿರಿಮೆಯಂತಿದೆ. ನಾಯಿಯೊಂದರ  ಪಾತ್ರದ ಸಾಧನೆ ಅದು. 

ಚಾಲಿ೯ ಎಂಬ ನಾಯಿಗೆ ಖಂಡಿತಾ ಅತ್ಯುತ್ತಮ ಪಾತ್ರ ನಿವ೯ಹಣೆಯ ಪ್ರಶಸ್ತಿ ನೀಡಬಹುದು. ಚಾಲಿ೯  ಅಭಿಮಾನಿ ಸಂಘ ಎಂಬ ಸಂಘ ಹುಟ್ಟಿಕೊಂಡರೂ ಅಚ್ಚರಿಯಿಲ್ಲ. ಚಾಲಿ೯ ಎದುರು ತನ್ನ ಪಾತ್ರ ವಿಜೖಂಭಿಸದಂತೆ ಆದರೂ ಧಮ೯ ಪಾತ್ರ ಮಂಕಾಗದಂತೆ ರಕ್ಷಿತ್ ಶೆಟ್ಟಿ ಸೊಗಸಾಗಿ ನಟಿಸಿದ್ದಾರೆ... ಹಿರೋಯಿನ್ ಸಂಗೀತ ಶೖಂಗೇರಿ ಚಿತ್ರದಲ್ಲಿ ಆಗಾಗ್ಗೆ ಬಂದು ಚಾಲಿ೯ಗೊಂದು ಕಿಸ್ ಮಾಡಿ ಹೋಗುತ್ತಾರೆ. ರಾಜ್ ಬಿ ಶೆಟ್ಟಿ ತನ್ನ ಪಾತ್ರದ ಮೂಲಕ ಖಂಡಿತಾ ನಗಿಸುತ್ತಾರೆ. ಡೈಲಾಗ್ ಡೆಲಿವರಿಯೂ ಸೂಪರ್..!!

ಚಿತ್ರದ ನಾಯಕಿ ರಮ್ಯಳಿಗೆ ಕ್ಯಾನ್ಸರ್ ಎಂದು ಹಿರೋ ತನ್ನ ಪ್ರಿಯತಮೆಯ  ಕೊನೇ ಆಸೆಯಂತೆ ತಾಜ್ ಮಹಲ್ ಗೆ ಕರೆದೊಯ್ಯುವ ಕಥೆ ಹೊಂದಿರುವ ನಾಗತಿಹಳ್ಳಿ ಚಂದ್ರಶೇಖರ್ ನಿದೇ೯ಶನದ ಅಮೖತ ಧಾರೆಯನ್ನು ಚಾಲಿ೯ ಕೆಲವು ಸಲ ನೆನಪಿಸುತ್ತದೆ. ಆದರೂ ಚಾಲಿ೯ ಚಾಲಿ೯ಯೇ.. ಸರಿಸಾಟಿಯಿಲ್ಲದ ಚಾಲಿ೯.. 

ಕೆಲವೊಂದು ಭಾವನಾತ್ಮಕ ಸನ್ನಿವೇಶಗಳು ಕಣ್ಣಿನಲ್ಲಿ ನೀರು ಹಾಗೇ ಹರಿದು ಬರಲು ಕಾರಣವೂ ಆಗಬಹುದು. ಒರೆಸಿಕೊಳ್ಳುವ ವ್ಯಥ೯ ಪ್ರಯತ್ನಕ್ಕಿಂತ ಮನಸ್ಸಿನ ಭಾವನೆಗಳು ಕಣ್ಣೀರ ಧಾರೆಯಾಗಿ ಚಾಲಿ೯ಗೆ ಗೌರವ ಸಲ್ಲಿಸುವಂತೆ ಹರಿದುಬರಲು ಅವಕಾಶ ನೀಡಿಬಿಡಿ.

ಅಂತ್ಯದಲ್ಲಿ ಹೊಸ ನಾಯಿ ಮರಿಯನ್ನು ನಾಯಕ ಮುದ್ದಾಡುತ್ತಾನೆ. ಚಾಲಿ೯ ಪಾಟ್೯ 2 ಸೂಚನೆಯೇ ಇದು.. ಬರಲಿ.. ಬರಲಿ.. ಉತ್ತಮ ಚಿತ್ರಗಳು ಬಂದೇ ಬರಲಿ.. 

ಚಾಲಿ೯ ನೋಡಿದ ಶ್ವಾನ ಪ್ರೇಮಿಗಳು ತಮ್ಮ ಮನೆಯ ಶ್ವಾನಗಳನ್ನು ಮತ್ತಷ್ಟು ಹೆಚ್ಚು ಪ್ರೀತಿಸಬಹುದು. ನಾಯಿ ಸಾಕದವರು, ಶ್ವಾನ ದ್ವೇಷಿಗಳು ನಾಯಿಯತ್ತಲಿನ ತಮ್ಮ ನಿಲುವು ಬದಲಿಸಿ ಒಲವು ತೋರಬಹುದು.. ನಾಯಿಗಳನ್ನು ಸಾಕಲು ಚಾಲಿ೯ ಪ್ರೇರಣೆಯಾಗಲೂ ಸಾಕು. 

ನಿದ್ದೆ ಮಾಡಿದಾಗೆಲ್ಲಾ ಬೊಗಳಿ ನಿದ್ದೆ ಕೆಡಿಸುವ ಬೀದಿ ನಾಯಿಗಳು ಚಾಲಿ೯ಯನ್ನು ನೋಡಿ ಕಲಿಯುವುದು ಸಾಕಷ್ಟಿದೆ.  !!!!ಎಲ್ಲಾ ನಾಯಿಗಳೂ ಚಾಲಿ೯ಯೇ ಆಗಬೇಕೆಂದಿಲ್ಲ ಎಂಬುದೂ ಸತ್ಯ..!!!

ಆದರೆ, ಚಾಲಿ೯ ವೀಕ್ಷಿಸಿದವರು ಒಂದೆರಡು ದಿನ ಚಾಲಿ೯ಯ ಕನವರಿಕೆಯಲ್ಲಿಯೇ ನಿದ್ದೆ ಕೆಡುವುದು ಕೂಡ ಅಷ್ಟೇ ಸತ್ಯ...!!!! ಚಾಲಿ೯ ಎಂಬ ನಾಯಿಕ ಕಥೆಯಲ್ಲಿ ಚಾಲಿ೯ಯ ಸಂಭ್ರಮವೂ ಇದೆ.. ಚಾಲಿ೯ಯ ವಿಷಾಧವೂ ಇದೆ.. ಇಂಥದ್ದನ್ನು  ಅನುಭವಿಸಿದರೆ ಮಾತ್ರ ಚಾಲಿ೯ಯನ್ನು ಮನಸ್ಸಿನಾಳಕ್ಕೆ ತಂದುಕೊಳ್ಳಬಹುದು. 

ಚಾಲಿ೯ಯ ಬಗ್ಗೆ ಲಾಸ್ಟ್ ಪಾಯಿಂಟ್…
ಬರೀ ಕೈಯಲ್ಲಿ ಚಾಲಿ೯ ನೋಡಲು ಹೋದವರು ಸಿನಿಮಾ ನೋಡಿ ಮರಳುವಾಗ ಚಾಲಿ೯ಯನ್ನು ಮನಸ್ಸಿನಲ್ಲಿ ಹೊತ್ತು ಮರಳುತ್ತಾರೆ. !!

ಚಾಲಿ೯ಯ ನಿಜವಾದ ಗೆಲವು ಅದು..!!! 
ನಾಯಿಗೂ ಒಂದ್ ಡೇ ಇದೆ ಅಂಥ ಖಂಡಿತಾ ಚಾಲಿ೯ ಸಾಬೀತುಮಾಡಿಬಿಟ್ಟಿದೆ..!!!
ಮಿಸ್  ಆಗುವ ಚಾಲಿ೯ಯನ್ನು ನೋಡಲು... ಮಿಸ್ ಮಾಡಿಕೊಳ್ಳಬೇಡಿ!!!

Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ