
NEWS: ಎಸಿಬಿ ರದ್ದು, ಲೋಕಾಯುಕ್ತಕ್ಕೆ ಮರುಜೀವ
Thursday, August 11, 2022
2016ರಲ್ಲಿ ಅಂದಿನ ಸಿದ್ದರಾಮಯ್ಯ ಸರ್ಕಾರ ರಚಿಸಿದ್ದ ಭ್ರಷ್ಟಾಚಾರ ನಿಗ್ರಹ ದಳವನ್ನು ರಾಜ್ಯ ಹೈಕೋರ್ಟ್ ಗುರುವಾರ ರದ್ದುಗೊಳಿಸಿದೆ. ಎಸಿಬಿಗೆ ನೀಡಲಾದ ಪೊಲೀಸ್ ಠಾಣೆ ಸ್ಥಾನಮಾನವನ್ನು ಮರಳಿ ಲೋಕಾಯುಕ್ತಕ್ಕೆ ನೀಡಿದೆ.
ಎಸಿಬಿ ರಚನೆ ಪ್ರಶ್ನಿಸಿ ಬೆಂಗಳೂರು ವಕೀಲರ ಸಂಘ, ಸಮಾಜ ಪರಿವರ್ತನ ಸಮುದಾಯ ಸೇರಿದಂತೆ ಹಲವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ನ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಭ್ರಷ್ಟಾಚಾರ ನಿಗ್ರಹ ದಳಕ್ಕೆ ರಾಜ್ಯ ಸರ್ಕಾರ ನೀಡಿದ್ದ ಪೊಲೀಸ್ ಠಾಣೆ ಸ್ಥಾನಮಾನವನ್ನೂ ಹೈಕೋರ್ಟ್ ರದ್ದುಪಡಿಸಿದೆ. ನ್ಯಾಯಮೂರ್ತಿಗಳಾದ ಬಿ. ವೀರಪ್ಪ ನೇತೃತ್ವದ ವಿಭಾಗೀಯ ಪೀಠದ ಈ ಆದೇಶ ನೀಡಿದೆ. ಲೋಕಾಯುಕ್ತಕ್ಕೆ ಪೊಲೀಸ್ ಠಾಣೆ ಸ್ಥಾನಮಾನವನ್ನು ನ್ಯಾಯಾಲಯ ಮರುಸ್ಥಾಪಿಸಿದ್ದು, ಎಸಿಬಿಯು ಲೋಕಾಯುಕ್ತ ಸಂಸ್ಥೆಯ ವ್ಯಾಪ್ತಿಯಲ್ಲಿಯೇ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದೆ. ಲೋಕಾಯುಕ್ತರು ಮತ್ತು ಉಪ ಲೋಕಾಯುಕ್ತರನ್ನು ಅರ್ಹತೆ ಮೇಲೆ ನೇಮಕ ಮಾಡಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ಉಲ್ಲೇಖಿಸಿದೆ.
ಎಸಿಬಿಯ ಸಂವಿಧಾನವನ್ನು ಪ್ರಶ್ನಿಸಿ ಬೆಂಗಳೂರಿನ ವಕೀಲ ಚಿದಾನಂದ ಅರಸ್, ವಕೀಲರ ಸಂಘ ಮತ್ತು ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ನ್ಯಾಯಮೂರ್ತಿ ಬಿ ವೀರಪ್ಪ ಮತ್ತು ನ್ಯಾಯಮೂರ್ತಿ ಕೆ ಎಸ್ ಹೇಮಲೇಖಾ ಅವರಿದ್ದ ವಿಭಾಗೀಯ ಪೀಠವು ವಿಚಾರಣೆಗೆ ಅಂಗೀಕರಿಸಿತ್ತು. 2016ರ ಮಾರ್ಚ್ನಲ್ಲಿ ರಾಜ್ಯ ಸರ್ಕಾರವು ಎಸಿಬಿ ರಚನೆ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ಅಧಿಕಾರವನ್ನು ಕರ್ನಾಟಕ ಲೋಕಾಯುಕ್ತದಿಂದ ಹಿಂಪಡೆದು ಹೊರಡಿಸಿದ ಅಧಿಸೂಚನೆಗಳನ್ನು ಅರ್ಜಿದಾರರು ಪ್ರಶ್ನಿಸಿದ್ದರು.