
NEWS: ಮಗಳು ಜಾನಕಿಯಲ್ಲಿ ಚಂದು ಭಾರ್ಗಿ ಖ್ಯಾತಿಯ ರವಿ ಮಂಡ್ಯ ಇನ್ನಿಲ್ಲ
Wednesday, September 14, 2022
ಕನ್ನಡದ ಕಿರುತೆರೆಯ ಭರವಸೆಯ ನಟ, ಮಗಳು ಜಾನಕಿ ಮೂಲಕ ಪ್ರಸಿದ್ಧರಾಗಿದ್ದ ರವಿಪ್ರಸಾದ್ ಮಂಡ್ಯ ಇನ್ನಿಲ್ಲ. ತಂದೆ ಡಾ. ಎಚ್.ಎಸ್.ಮುದ್ದೇಗೌಡ, ತಾಯಿ, ತಂಗಿಯರು, ಪತ್ನಿ, ಪುತ್ರ ಹಾಗೂ ಅಪಾರ ಸ್ನೇಹಿತ ಬಳಗವನ್ನು ಅವರು ಬಿಟ್ಟುಹೋಗಿದ್ದಾರೆ. ಬಹುಅಂಗಾಂಗ ವೈಫಲ್ಯದಿಂದ ಅವರು ನಿಧನ ಹೊಂದಿದ್ದಾರೆ. ಕಳೆದ ಒಂದು ತಿಂಗಳಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜಾಂಡಿಸ್ ಎಂದು ಆಸ್ಪತ್ರೆ ದಾಖಲಾಗಿದ್ದರು.
ಮಂಡ್ಯದಲ್ಲಿ ರಂಗಭೂಮಿಯತ್ತ ಆಸಕ್ತರಾಗಿದ್ದ ಅವರು ಓದಿದ್ದು ಇಂಗ್ಲೀಷ್ ಎಂ.ಎ, ಎಲ್.ಎಲ್.ಬಿ. ಟಿ.ಎಸ್.ನಾಗಾಭರಣ ಅವರ ಮಹಾಮಾಯಿ ಧಾರಾವಾಹಿಯಲ್ಲಿ ಅಭಿನಯಿಸುವ ಮೂಲಕ ನಟನೆ ಆರಂಭ. ಮಿಂಚು, ಮುಕ್ತ ಮುಕ್ತ, ಚಿತ್ರಲೇಖ ಸೇರಿ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದ ಅವರು ಇತ್ತೀಚಿಗಿನ ಮಗಳು ಜಾನಕಿ ಧಾರಾವಾಹಿಯ ಚಂದು ಭಾರ್ಗಿ ಪಾತ್ರದ ಮೂಲಕ ಗಮನ ಸೆಳೆದಿದ್ದರು. ಟಿ.ಎನ್.ಸೀತಾರಾಮ್ ಅವರ ನಿರ್ದೇಶನದ ಕಾಫಿ ತೋಟ ಸಿನಿಮಾದಲ್ಲೂ ಅವರು ಅಭಿನಯಿಸಿದ್ದರು.