NEWS: ಇಡೀ ದಿನ ಸದ್ದು ಮಾಡಿದ NIA RAID: ಕರ್ನಾಟಕದಲ್ಲಿ ಪಿಎಫ್ ಐ ನಾಯಕರ ಮನೆ ಕದ ತಟ್ಟಿದ ಪೊಲೀಸರು
ಹೊಸದಿಲ್ಲಿ: ದೇಶದಾದ್ಯಂತ ಗುರುವಾರ 10ಕ್ಕೂ ಅಧಿಕ ರಾಜ್ಯಗಳಲ್ಲಿ ಎನ್.ಐ.ಎ., ಇಡಿ ದಾಳಿ ಮುಂದುವರಿಸಿದ್ದು, ಏಕಕಾಲದಲ್ಲಿ ನೂರಕ್ಕೂ ಅಧಿಕ ಪಿಎಫ್ ಐ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ವಿವಿಧ ಪ್ರಕರಣಗಳಿಗೆ ಸಂಬಂಧಿಸಿ ಆರೋಪಿಗಳನ್ನು ಸೆರೆಹಿಡಿದಿರುವ ರಾಷ್ಟ್ರೀಯ ತನಿಖಾ ದಳ, ಹಲವರನ್ನು ವಿಚಾರಣೆಗೊಳಪಡಿಸಿದೆ. ಹಲವು ಮಹತ್ವದ ದಾಖಲೆಗಳನ್ನು ತನ್ನೊಂದಿಗೆ ಒಯ್ದಿದೆ.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ)ದ ಕಚೇರಿಗಳು ಮತ್ತು ಅದರ ಪದಾಧಿಕಾರಿಗಳು, ಕಾರ್ಯಕರ್ತರ ನಿವಾಸಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ ಗುರುವಾರ ದಾಳಿ ನಡೆಸಿದ್ದು, ಈ ದಾಳಿಯನ್ನು ಖಂಡಿಸಿ ಎಸ್ ಡಿಪಿಐ ಮತ್ತು ಪಿಎಫ್ ಐ ದೇಶಾದ್ಯಂತ ಭಾರೀ ಪ್ರತಿಭಟನೆ ನಡೆಸುತ್ತಿವೆ.
ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಂತೆ ಪಿಎಫ್‌ಐ ಅಧ್ಯಕ್ಷ ಓಎಂಎ ಸಲಾಂ ಮತ್ತು ಪಿಎಫ್‌ಐನ ಇತರ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತನಿಖಾ ಸಂಸ್ಥೆಯು ದೆಹಲಿ ಪಿಎಫ್‌ಐ ಮುಖ್ಯಸ್ಥ ಪರ್ವೇಜ್ ಅಹ್ಮದ್ ಮತ್ತು ಅವರ ಸಹೋದರನನ್ನು ಓಖ್ಲಾದಲ್ಲಿ ಇಂದು ಬೆಳಗಿನ ಜಾವ ೩.೩೦ಕ್ಕೆ ಬಂಧಿಸಿದೆ. ಕರ್ನಾಟಕದ ಬೆಂಗಳೂರು, ಮಂಗಳೂರು ಸಹಿತ ವಿವಿಧೆಡೆ ಬಂಧನ ಸತ್ರ ನಡೆದಿದೆ.
ದಕ್ಷಿಣ ಭಾರತದಲ್ಲಿ, ಎನ್ ಐಎ ಅನೇಕ ಸ್ಥಳಗಳಲ್ಲಿ ದಾಳಿಗಳನ್ನು ನಡೆಸಿದೆ. ತನಿಖಾ ಸಂಸ್ಥೆಯು ಹತ್ತು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ದಾಳಿ ನಡೆಸಿ ಕನಿಷ್ಠ ೧೦೬ ಜನರನ್ನು ಬಂಧಿಸಿದೆ. ಆಂಧ್ರಪ್ರದೇಶ (೫), ಅಸ್ಸಾಂ (೯), ದೆಹಲಿ (೩), ಕರ್ನಾಟಕ (೨೦), ಕೇರಳ (೨೨), ಮಧ್ಯಪ್ರದೇಶ (೪), ಮಹಾರಾಷ್ಟ್ರ (೨೦), ಪುದುಚೇರಿ (೩), ರಾಜಸ್ಥಾನ (೨), ತಮಿಳುನಾಡು (೧೦) ಮತ್ತು ಉತ್ತರ ಪ್ರದೇಶ (೮)ಗಳಿಂದ ಬಂಧಿಸಲಾಗಿದೆ.
ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ದಾಳಿ ನಡೆಸಿದ ನಂತರ ನಾಲ್ವರು ಆರೋಪಿಗಳ ಬಂಧನಕ್ಕೆ ಸಂಬಂಧಿಸಿದಂತೆ ಎನ್‌ಐಎ ಸೆಪ್ಟೆಂಬರ್ ೧೯ ರಂದು ರಿಮಾಂಡ್ ವರದಿಯನ್ನು ಸಲ್ಲಿಸಿತ್ತು.
ಪಿಎಫ್ ಐ ಹಾಗು ಎಸ್ ಡಿಪಿಐ ಮೇಲೆ ಎನ್ಐಎ ಹಾಗೂ ಪೊಲೀಸರು ಖಚಿತ ಮಾಹಿತಿ ಮೇಲೆ ದಾಳಿ ನಡೆಸಿದ್ದು, ಏಕತೆ, ಸಮಗ್ರತೆ ಹಾಳು ಮಾಡೋ, ಜೀವಹಾನಿ ಮಾಡುವ ಸಂಘಟನೆಗಳು ಹಲವು ಕೃತ್ಯಗಳ ಹಿಂದೆ ಇದ್ದು, ಇದಕ್ಕೆ ಸಂಬಂಧಿಸಿದವರ ಬಂಧಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಶಿವಮೊಗ್ಗ ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ ಅವರು, ಶಿವಮೊಗ್ಗ ಪ್ರಕರಣದಲ್ಲಿ ಬಾಂಬ್ ತಯಾರು ಮಾಡಲಾಗಿತ್ತು. ಅದನ್ನು ಟ್ರಯಲ್ ಕೂಡ ಮಾಡಿದ್ದಾರೆ. ಅವರ ಬಂಧನದಿಂದ ರಕ್ತಹಾನಿ ಜೀವಹಾನಿ ತಡೆಗಟ್ಟಲಾಗಿದೆ ಎಂದು ಹೇಳಿದರು