BOOK READING: ಪತ್ರಕರ್ತನ ಬದುಕು - ''ಈಗ ಯಾವ ಪೇಪರ್ ನಿಮ್ದು?'' - ಪ.ಗೋ. ಲೇಖನಮಾಲೆಯ ಮರುಓದು

BOOK READING: ಪತ್ರಕರ್ತನ ಬದುಕು - ''ಈಗ ಯಾವ ಪೇಪರ್ ನಿಮ್ದು?'' - ಪ.ಗೋ. ಲೇಖನಮಾಲೆಯ ಮರುಓದು.ಗೋ. ಎಂದೇ ಚಿರಪರಿಚಿತರಾಗಿದ್ದ ಪದ್ಯಾಣ ಗೋಪಾಲಕೃಷ್ಣ (1928-1997) ಕನ್ನಡದ ಪ್ರಸಿದ್ಧ ದಿನಪತ್ರಿಕೆಗಳಲ್ಲಿ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಕೆಲಸ ಮಾಡಿದವರು. ವೃತ್ತಪತ್ರಿಕಾ ಜಗತ್ತಿನ ಎಲ್ಲ ಮುಖಗಳ ಅನುಭವವನ್ನು ವೃತ್ತಿನಿರತ ಪತ್ರಿಕೋದ್ಯೋಗಿಯಾಗಿ ಕಂಡ ನಾನಾ ಮುಖಗಳೂ, ಅನುಭವಿಸಿದ ನೋವು, ನಲಿವುಗಳನ್ನು ನಿರ್ಮೋಹದಿಂದ, ವಸ್ತುನಿಷ್ಠವಾಗಿ ಬರೆದ ವಿಶೇಷ ಸೃಷ್ಟಿಯ ಲೋಕದಲ್ಲಿ ವೃತ್ತಪತ್ರಿಕೆಗಳ ಕಾಲಂ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯದಲ್ಲಿ ಒಂದು ವಿಶಿಷ್ಟ ಬರವಣಿಗೆಇದು .ಗೋ. ಆತ್ಮಕತೆಯ ಭಾಗವೂ ಹೌದು. 2005ರಲ್ಲಿ ಪುಸ್ತಕವಾಗಿಯೂ ಪ್ರಕಟಗೊಂಡಿವೆ. ಇಲ್ಲಿ ವ್ಯಕ್ತವಾದ ವಿಚಾರಗಳೆಲ್ಲವೂ ಲೇಖಕರಿಗೆ ಸಂಬಂಧಿಸಿದ್ದಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯನಡ್ಕದಲ್ಲಿ ಜನಿಸಿದ .ಗೋ, ಅವರ ಕೃತಿಯನ್ನು ಬಂಟ್ವಾಳನ್ಯೂಸ್ ಓದುಗರಿಗಾಗಿ ಒದಗಿಸಿಕೊಟ್ಟವರು .ಗೋ ಅವರ ಪುತ್ರ ಪದ್ಯಾಣ ರಾಮಚಂದ್ರ. (.ರಾಮಚಂದ್ರ).  ಅಂಕಣಮಾಲೆಯಾಗಿ ಪ್ರಕಟಗೊಂಡು, ಪುಸ್ತಕರೂಪವಾಗಿ ಹೊರಬಂದ ವಿಶೇಷ ಸೃಷ್ಟಿಗಳ ಲೋಕದಲ್ಲಿ ಪುಸ್ತಕದ ಮರುಪ್ರಕಟಣೆ ಇದು.

ಈ ಲೇಖನಗಳ ಮಾಲೆ ಪುಸ್ತಕವಾಗಿ ಹೇಗೆ ಪ್ರಕಟವಾಯಿತು? ಪ.ಗೋ. ಅವರ ಪುತ್ರ ಪ. ರಾಮಚಂದ್ರ ಹೀಗೆ ವಿವರಿಸುತ್ತಾರೆ. ಟ್ರಂಕ್ ಒಳಗೆ ಭದ್ರವಾಗಿ ಹುದುಗಿದ್ದ ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾದ ಪ್ರತಿಗಳನ್ನು ಸಂಪಾದಿಸಿ 2005ನೇ ಇಸವಿಯಲ್ಲಿ ಪುಸ್ತಕವನ್ನಾಗಿ ಪ್ರಕಟಿಸಲು ಪ್ರಕಾಶಕರ ಸಂಪರ್ಕವನ್ನು ಒದಗಿಸಲು ಸಹಕರಿಸಿದವರು ಬೆಂಗಳೂರಲ್ಲಿ ನೆಲೆಸಿರುವ ಕೆ.ಪಿ. ರಾಜಗೋಪಾಲ ಕನ್ಯಾನ. ಅವರ ಸಹಕಾರವಿಲ್ಲದೇ ಇದ್ದರೆ ಇದು ಪುಸ್ತಕ ರೂಪ ಪಡೆಯಲು ಸಾಧ್ಯವೇ ಇರಲಿಲ್ಲ ಎನ್ನುತ್ತಾರೆ ಪ.ರಾಮಚಂದ್ರ. ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆಯೂ ಪುಷ್ಪಾ ಪುಂಜತ್ತೋಡಿ ಈ ಲೇಖನಮಾಲೆ ಸಿದ್ಧಪಡಿಸಲು ಸಹಕರಿಸಿದ್ದಾರೆ. (ಇವರ ಪತಿ ರಾಮಕೃಷ್ಣ ಪುಂಜತ್ತೋಡಿ ವಿದೇಶದಲ್ಲಿ ಉದ್ಯೋಗಿ) ಪುಸ್ತಕ ರೂಪದಲ್ಲಿ ಇದ್ದ ಈ ಲೇಖನಮಾಲೆಯನ್ನು ಕನ್ನಡದ ಯುನಿಕೋಡ್ ನಲ್ಲಿ ಬರಹರೂಪಕ್ಕಿಳಿಸಿ ಅಂದವಾಗಿ ಪ್ರಕಟಗೊಳ್ಳಲು ಸಹಕರಿಸಿದವರು ಪುಷ್ಪಾ ಪುಂಜತ್ತೋಡಿ. ಇವರಿಬ್ಬರಿಗೂ ಕೃತಜ್ಞತೆ ಅರ್ಪಿಸಿದ್ದಾರೆ. ಪ.ರಾಮಚಂದ್ರ ಅವರು. ನಮ್ಮೂರು ಅದನ್ನು ಮತ್ತೆ ನೆನಪಿಸುತ್ತಿದೆ. ನಮ್ಮೂರು ಆನ್ಲೈನ್ ನ ಸೋದರ ಜಾಲತಾಣ ಬಂಟ್ವಾಳನ್ಯೂಸ್ ಆರಂಭಿಸಿದಾಗಲೇ ಪ್ರೋತ್ಸಾಹ ನೀಡಿ ಲೇಖನಮಾಲೆಯನ್ನು ಒದಗಿಸಿದವರು ಪ.ರಾಮಚಂದ್ರ ಅವರಿಗೂ ಜಾಲತಾಣದ ಪರವಾಗಿ ಕೃತಜ್ಞತೆ. ಇದು ಈ ಲೇಖನಮಾಲೆಯ ಕೊನೆಯ ಕಂತು. ಬಿಡುವಾದಾಗಲೆಲ್ಲ ಬಂಟ್ವಾಳನ್ಯೂಸ್ ಕ್ಲಿಕ್ ಮಾಡಿದರೆ, ಪ.ಗೋ. ಅಂಕಣದ ಮರುಓದು ಸಾಧ್ಯ. ಬಂಟ್ವಾಳ ತಾಲೂಕಿನವರಾಗಿ ಕನ್ನಡದ ಮೇರು ಪತ್ರಕರ್ತರಲ್ಲಿ ಓರ್ವರಾಗಿದ್ದ ಪ.ಗೋ. ಜೀವನಾನುಭವ ಈಗಿನ ಪತ್ರಿಕೋದ್ಯಮಿಗಳಿಗೆ ಹಾಗೂ ಪತ್ರಕರ್ತರಿಗೆ ಪಾಠವೂ ಹೌದು. ಅವರ ಲೇಖನದ ಒಂದು ಭಾಗ ಇದು: ವಿಶೇಷ ಸೃಷ್ಟಿಗಳ ಲೋಕದಲ್ಲಿ : “ಈಗ ಯಾವ ಪೇಪರ್ ನಿಮ್ಮದು?"


ಮುಂದಿನ ಬದುಕನ್ನು ವರದಿಗಾರನಾಗಿಯೇ ಸಾಗಿಸುವ ನಿಲುಮೆ ತಳೆದಿದ್ದೆ. ವೃತ್ತಿಯ ‘ನಾರದಸಂಹಿತೆ’ ರೂಪಿಸಿಕೊಂಡು ಎಕ್ಸ್ ಪ್ರೆಸ್ ಸುದ್ದಿಗಾರರ ಸಮೂಹದಲ್ಲಿ ಒಬ್ಬನಾಗಿದ್ದೆ. ಪ್ರಕಟವಾಗಲಿರುವ ಯಾವುದೇ ವಿಚಾರವಿರಲಿ, ಅದರ ಮಾಹಿತಿಯನ್ನು ಸಾಧ್ಯವಿದ್ದಷ್ಟು ವಿಸ್ತೃತವಾಗಿ ಪಡೆದು, ವಿಭಿನ್ನ ಮುಖಗಳನ್ನೂ ತಿಳಿದು, ವಸ್ತುನಿಷ್ಠವಾಗಿ ವರದಿ ಮಾಡಬೇಕು ಎನ್ನುವುದು ಸಂಹಿತೆಯ ಮುಖ್ಯಾಂಶವಾಗಿತ್ತು. ಮಾನವೀಯ ಆಸಕ್ತಿಯ ಸುದ್ದಿಗಳನ್ನು ಹುಡುಕುತ್ತಲೇ ಇರುವ ಪ್ರವೃತ್ತಿಯನ್ನೂ ಬೆಳೆಸಿಕೊಳ್ಳಬೇಕಾಗಿತ್ತು.
 
 ಮಾಹಿತಿಗಳ ಆಕರಮೂಲಗಳ ಪರಿಚಯ ಮಾಡಿಕೊಳ್ಳಲು, (ಹಲವು ಪತ್ರಿಕೆಗಳ ವರದಿಗಾರರಾಗಿಯೂ ಯೋಗ್ಯ ಆದಾಯಕ್ಕಾಗಿ ಜಿಲ್ಲಾ ಸಹಕಾರಿ ಯೂನಿಯನ್ನಿನ ಮ್ಯಾನೇಜರ್ ಉದ್ಯೋಗವನ್ನು ಅವಲಂಬಿಸಿದ್ದ) ಹಿರಿಯ ಪತ್ರಕರ್ತ ನರಸಿಂಹರಾಯರ ಸಹಾಯ ಪಡೆದೆ. ಪತ್ರಿಕಾಗೋಷ್ಟಿಗಳಲ್ಲಿ ಅವರು ಪ್ರಶ್ನೆ ಕೇಳುತ್ತಿದ್ದ ಕ್ರಮವನ್ನು ಮೆಚ್ಚಿ ಅವರನ್ನು (ಅವರಿಂದ ತುಸು ಸೌಮ್ಯವಾದ ರೀತಿಯಲ್ಲಿ) ಅನುಸರಿಸುತ್ತಲೂ ಇದ್ದೆ.
 
ಆಡಳಿತದವರು ಶೀಘ್ರವಾಗಿ ಒದಗಿಸಿದ ಟೆಲಿಪ್ರಿಂಟರ್ ಸೌಕರ್ಯವೂ ಅನುಕೂಲಕ್ಕೆ ಒದಗಿ ಬಂತು. ಕಳುಹಿಸುತ್ತಿದ್ದ ಸುದ್ದಿಗಳೂ ಹೆಚ್ಚಿನ ಕತ್ತರಿ ಪ್ರಯೋಗಕ್ಕೆ ಒಳಗಾಗದೆ ಪ್ರಕಟವಾಗಿ, ಪ್ರೋತ್ಸಾಹ ನೀಡುತ್ತಿದ್ದವು.
 
ವೃತ್ತಿಪರ ಚಟುವಟಿಕೆಗಳ ಎಡೆಯಲ್ಲಿ, ಸ್ಥಳೀಯ ಮಟ್ಟದಲ್ಲೂ ಬೆಂಗಳೂರಿನಲ್ಲೂ ‘ನೋಡಿಕೊಳ್ಳಬೇಕಾದವರ’ ಮರ್ಜಿ ಕಾಯುವ ‘ಪ್ರಾಮುಖ್ಯ ಕಾರ್ಯವನ್ನು -ನನ್ನ ಸ್ವಭಾವದಂತೆ ಕಡೆಗಣಿಸಿದ್ದೆ. ಆ ತಪ್ಪನ್ನು ತಿದ್ದಿಕೊಳ್ಳೆಂದು ಬಂದಿದ್ದ ಪರ್ಯಾಯ ಸೂಚನೆಗಳನ್ನೂ ಗಮನಿಸಿರಲಿಲ್ಲ. ಅದರಿಂದಾಗಿ ಸಹಾಯಕ ಸಂಪಾದಕ ಎಸ್.ನರಸಿಂಹನ್ ರವರು ಬದುಕಿರುವವರೆಗೆ ಏನೂ ತೊಂದರೆಯಾಗದಿದ್ದರೂ, ಅವರು ತೀರಿಕೊಂಡ ಮರುವಾರವೇ, ಬೀಳಲೆಂದು ವರ್ಷಗಟ್ಟಲೆ ಕಾಯುತ್ತಿದ್ದ ಹೊಡೆತ ಬಿದ್ದಿತು.
 
ಪತ್ರಿಕಾ ಪ್ರಪಂಚಕ್ಕೆ ಸಂಬಂಧಿಸದ ಒಂದು ವ್ಯವಹಾರಕ್ಕೆ ನಾನು ಕೈಹಾಕಿದುದು. ಹೊಡೆತಕ್ಕೆ ಸ್ಥಳೀಯ ಪ್ರಚೋದನೆಯನ್ನು ಒದಗಿಸಿತ್ತು. ‘ನಿನ್ನ ಸೇವೆಯನ್ನು ತಕ್ಷಣದಿಂದ ರದ್ದು ಮಾಡಲಾಗಿದೆ’ ಎಂಬ ಆಜ್ಞೆಯನ್ನು ಟೆಲಿಪ್ರಿಂಟರಿನಲ್ಲೇ  ಪಡೆದು, ಎಕ್ಸ್ ಪ್ರೆಸ್ ಪತ್ರಿಕೆಯಿಂದ ಬೇರಾದೆ. ಉದ್ಯೋಗದಲ್ಲಿದ್ದ ಅವಧಿಯಲ್ಲಿ ಗಳಿಸಿದ್ದ ಮನ್ನಣೆಯೊಂದೇ ಕಸಿಯಲಾಗದ ‘ಆಸ್ತಿ’ಯಾಗಿ ನನ್ನಲ್ಲಿ ಉಳಿಯಿತು.
 
ನಡುಗಾಲದ ಒಂದೆರಡು ತಿಂಗಳುಗಳಲ್ಲಿ ಜಿ.ರಮೇಶ ಕಾರಂತರ ಒಂದು ಸಂಸ್ಥೆಯ ಆಶ್ರಯದಲ್ಲಿದ್ದು, ತಾತ್ಕಾಲಿಕವಾಗಿ ಯು.ಎನ್.ಐ. ವಾರ್ತಾ ಸಂಸ್ಥೆಯ ಪ್ರಾತಿನಿಧ್ಯವನ್ನು ಪಡೆದೆ. ಆ ಮೇಲೆ, ಖಾದ್ರಿ ಶಾಮಣ್ಣನವರ ಮುಕ್ತ ಬೆಂಬಲದಿಂದ ಸಂಯುಕ್ತ ಕರ್ನಾಟಕದ ಮಂಗಳೂರು ಸಿಬ್ಬಂದಿ (ಸ್ಟಾಫ್) ವರದಿಗಾರನಾಗಿ ನೇಮಕಗೊಂಡು, ಬಹುಕಾಲದಿಂದ ಈಡೇರದೆ ಉಳಿದಿದ್ದ ಆಸೆಯನ್ನು ತೀರಿಸಿಕೊಂಡೆ.
 
ಸಂಯುಕ್ತ ಕರ್ನಾಟಕವು ಅಷ್ಟು ಹೊತ್ತಿಗೆ ವೃತ್ತಿಪರ ರಾಜಕೀಯಸ್ಥರ ಆಡುಂಬೊಲದ ರೂಪ ತಳೆದಿತ್ತು. ವಿವಾದಾಸ್ಪದ ಹಿನ್ನೆಲೆಯಲ್ಲಿ ಎಂ.ವೈ.ಘೋರ್ಪಡೆಯವರ ಕೈಗೆ ಬಂದು, ಆ ಕೈಯ(ಹಣವ)ನ್ನೂ ಕಚ್ಚಿ ನುಂಗಿ ಹಾಕುತ್ತಿತ್ತು. ಆದರೆ  ಅಲ್ಲಿನ ವ್ಯವಹಾರಗಳು ನನ್ನನ್ನು ಬಾಧಿಸಿರಲಿಲ್ಲ. ಪತ್ರಿಕೆಯು ಎಚ್.ಆರ್.ಬಸವರಾಜ್ ಅವರಿಗೆ ‘ಮಧ್ಯರಾತ್ರಿ ಮಾರಾಟ’ವಾದಾಗಲೂ, ಆ ನಂತರ ಹನ್ನೊಂದು ತಿಂಗಳು ಪ್ರಕಟಣೆಯೇ ನಿಂತುಹೋದಾಗಲೂ, ತಿರುಗಿ ಆರ್.ಗುಂಡೂರಾಯರ ಕೃಪಾಛತ್ರದ ನೆರಳಿನಡಿ ಶಕ್ತಿಯ ಸಂಪಾದಕ ಬಿ.ಎಸ್.ಗೋಪಾಲಕೃಷ್ಣರ ಸಂಪಾದಕತ್ವದಲ್ಲಿ ಪ್ರಕಟಣೆಯ ಪುನರಾರಂಭವಾದಾಗಲೂ, ನಾನು ಸೋತು ಸೊರಗಲಿಲ್ಲ. ಬದುಕಿ ಉಳಿಯಲು ಸಾಲುವಷ್ಟು ಬುದ್ಧಿ ಕಲಿತುಕೊಂಡಿದ್ದೆ. “11ತಿಂಗಳ ವೇತನ ಬಾಕಿಯನ್ನು ನಿಮಗೇ ಬಿಡುತ್ತೇನೆ" ಎಂದು ‘ಲೇಟೆಸ್ಟ್’ ಸಂಪಾದಕರೆದುರಿಗೇ ಸಾರುವಷ್ಟರ ಧೈರ್ಯ ಆಗ ನನ್ನಲ್ಲಿತ್ತು!
 
ಸಂಯುಕ್ತ ಕರ್ನಾಟಕದ ಪೂರ್ಣಕಾಲಿಕ ಸೇವಾವಧಿಯಲ್ಲೇ ಪತ್ರಕರ್ತರ ಸಂಘಟನೆಗಳನ್ನು ಹೇಗೆ ನಡೆಸಲಾಗುತ್ತದೆ - ಅವುಗಳ ಮೂಲಕ ವ್ಯಕ್ತಿಗಳು ತಮ್ಮ ಉದ್ದೇಶಗಳನ್ನು ಹೇಗೆ ಸಾಧಿಸಿಕೊಳ್ಳುತ್ತಾರೆ ಎಂಬ ವಿಚಾರಗಳ ಅನುಭವ ದೊರೆಯಿತು. ಜಿಲ್ಲೆ ಮತ್ತು ರಾಜ್ಯ ಮಟ್ಟದ ಸಂಘಟನೆಗಳ ಒಳನೋಟ, ರಾಜ್ಯ ಸಮ್ಮೇಳನವು ಮಂಗಳೂರಿನಲ್ಲಿ ನಡೆದಾಗ ಸಂಪೂರ್ಣವಾಗಿ ಪ್ರಾಪ್ತವಾಯಿತು.
 
ಬಿ.ಎಸ್.ಜಿ.ಯವರ ಕಾಲಕ್ಕೆ, ಸಂ.ಕ.ದ ಆಡಳಿತ ಸರಕಾರದ ಹಸ್ತಕ್ಷೇಪಕ್ಕೆ ಒಳಗಾಗಿದ್ದು ಎಲ್ಲ ಕಡೆಯೂ ಆಗುವಂತೆ - ಗೋಜಲಾಗಿತ್ತು. ಸಂಸ್ಥೆಯನ್ನು ತೊರೆಯುವ ಅವಕಾಶಕ್ಕಾಗಿ ಕಾಯುತ್ತಿದ್ದ ದಿನಗಳಲ್ಲಿ ಒಮ್ಮೆ ಬೆಂಗಳೂರಿನಿಂದ ಬಂದಿದ್ದ ದೂರವಾಣಿ ಕರೆಯನ್ನು ಅನುಸರಿಸಿ - ಆಗಷ್ಟೇ ಆರಂಭವಾಗಿದ್ದ ‘ಟೈಮ್ಸ್ ಆಫ್ ಡೆಕ್ಕನ್’(ಮತ್ತು ಮುಂಜಾನೆ ) ಪತ್ರಿಕೆಗೆ ಸೇರಿದೆ.
 
ತಮ್ಮ ಚಪಲ ಪೂರೈಸಲು ರಾಜಕಾರಣಿಗಳು ಆರಂಭಿಸುವ ಪತ್ರಿಕೆಗಳ ಅಭದ್ರ ಸ್ಥಿತಿ ನೆನಪಿನಲ್ಲಿ ಉಳಿದಿತ್ತು. ಜಾಗೃತನಾಗಿಯೇ ಕೆಲಸ ನಡೆಸುತ್ತಿದ್ದುದರಿಂದ, ಚುನಾವಣೆಯ ಸೋಲಿನ ನಂತರ, ಪತ್ರಿಕೆಯನ್ನು ನಿರ್ಜೀವಗೊಳಿಸಿದ ರಾಜಕೀಯ ಧುರೀಣರ ಕ್ರಮದಿಂದಾಗಿ ನನಗೆ ಹೆಚ್ಚಿನ ನಷ್ಟವಾಗಲಿಲ್ಲ.
 
 (ವೇತನದ ಕೊನೆಯ ಕಂತನ್ನು ಬೆಂಗಳೂರಿಗೆ ಹೋಗಿಯೇ ಕೈಗೆಟಕಿಸಿಕೊಂಡಿದ್ದೆ...)
 
ಮಂಗಳೂರಿನಲ್ಲಿ ಬೆಳೆಸಿಕೊಂಡಿದ್ದ ‘ಸುದ್ದಿಮೂಲ’ಗಳ ಪರಿಚಯ, ಕಂಡವರು ನನ್ನ ಹೆಸರನ್ನು ಮಾತ್ರ ಗುರುತಿಸಿ “ಈಗ ಯಾವ ಪೇಪರ್ ನಿಮ್ಮದು?" ಎಂದು ಕೇಳುವಷ್ಟರ ಮಟ್ಟಿಗೆ ಬೆಳೆದಿತ್ತು. ರೂಢಿಸಿಕೊಂಡಿದ್ದ ಕಾರ್ಯವಿಧಾನ (ಮುಖ್ಯವಾಗಿ ಪತ್ರಿಕಾಗೋಷ್ಟಿಗಳಲ್ಲಿ ಪ್ರಶ್ನೆಗಳನ್ನು ಕೇಳುತ್ತಲೇ ಇದ್ದ ಅಭ್ಯಾಸ), ವರದಿಗಾರಿಕೆಯ ಆಧುನಿಕ ಕಲ್ಪನೆಗಳನ್ನಿರಿಸಿಕೊಂಡು ವೃತ್ತಿಗೆ ಪ್ರವೇಶಿಸಿದ ಯುವಕ ಸಹೋದ್ಯೋಗಿಗಳ ಅಸಮಾಧಾನಕ್ಕೆ ಒಳಗಾಗತೊಡಗಿತ್ತು.
 
ರಾಜಕಾರಣಿಗಳ ವಿಫಲಪ್ರಯತ್ನದ ಕೂಸಾದ ಟೈಮ್ಸ್ ಆಫ್ ಡೆಕ್ಕನ್ ನಿಂದ, ಆಗಷ್ಟೇ ಆರಂಭವಾಗಿದ್ದ ಟೈಮ್ಸ್ ಆಫ್ ಇಂಡಿಯಾದ ಬೆಂಗಳೂರು ಆವೃತ್ತಿಗೆ ಸೇರಿಕೊಳ್ಳಲು ನಾನು ಬೆಳೆಸಿಕೊಂಡಿದ್ದ ಪರಿಚಯ, ಬಹಳ ಸಹಾಯ ಮಾಡಿತು.
 
ವಯಸ್ಸಿನ ಅಂತರದಿಂದಾಗಿ, ಪೂರ್ಣಕಾಲಿಕ ಉದ್ಯೋಗ ಸಿಗುವ ಸಾಧ್ಯತೆ ಇರಲಿಲ್ಲ. ಇನ್ನೊಮ್ಮೆ ಅಂಶಕಾಲಿಕ ವರದಿಗಾರನ ಅವತಾರ ತಾಳಬೇಕಾಯಿತು
 
ಟೈಮ್ಸ್ ಆಫ್ ಇಂಡಿಯಾದ ‘ಸೇವೆ’ಯಲ್ಲಿ ಹೆಚ್ಚುಕಡಿಮೆ ಒಂಬತ್ತು ವರ್ಷಗಳನ್ನು ಕಳೆಯುತ್ತಿರುವಾಗ –
 
ವೃತ್ತಿಯಲ್ಲಿ ಪ್ರಸಿದ್ಧನಾಗಬೇಕೆಂಬ ಯಾವ ಆಕಾಂಕ್ಷೆಯೂ ಮೂಡಿರಲಿಲ್ಲ. ಕುಂದು ಕೊರತೆಗಳಿಲ್ಲದ ಕೆಲಸ ಮಾಡಿದರೆ ಸಾಕೆಂಬ ಭಾವನೆಯಷ್ಟೆ ಉಳಿದಿತ್ತು. ಹೊಸ ಪೀಳಿಗೆಯ ಭಾಷೆ ಶೈಲಿಗಳಲ್ಲಿ ನನ್ನ ವರದಿಗಳು ಇರಬೇಕಾಗಿಲ್ಲವೆಂಬ ವಿಶ್ವಾಸ ಭದ್ರವಾಗಿತ್ತು.
 
ಕೆಲಸದಲ್ಲಿ ಲವಲವಿಕೆ ಉಳಿಯಲಾರದೆಂದು ದೇಹಸ್ಥಿತಿಯ ಸ್ಪಷ್ಟ ಸೂಚನೆಗಳು 1994ರ ಮಧ್ಯಭಾಗದಲ್ಲಿ ದೊರೆತ ಮೇಲೆ “ವಾರ್ಷಿಕ ಗುತ್ತಿಗೆ(ಕಂಟಾಕ್ಟ್)ನ್ನು ನವೀಕರಿಸುವುದಿಲ್ಲ" ಎಂದು ತಿಳಿಸಬೇಕಾದವರಿಗೆ ತಿಳಿಸಿ, ಮಂಗಳೂರಿನ ಸಹೋದ್ಯೋಗಿಗಳ ವಿದಾಯ ಸ್ವೀಕರಿಸಿ, ಸಕ್ರಿಯ ಪತ್ರಿಕೋದ್ಯಮದಿಂದ ಹೊರಬಂದ ಮಾರಣೆಯ ದಿನವೇ 1994ರ ರಾಜ್ಯೋತ್ಸವ.   ಹೆಚ್ಚಿನ ಓದಿಗೆ www.bantwalnews.com ನಲ್ಲಿ ಅಂಕಣಗಳ ವಿಭಾಗಕ್ಕೆ ಹೋಗಿ ಪ.ಗೋ. ಅಂಕಣ ಕ್ಲಿಕ್ ಮಾಡಿರಿ.
 
 

Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ