KARNATAKA POLITICS: ಮಳೆಗಾಲದಲ್ಲಿ ರಾಜಕೀಯದಾಟ: ಕುಮಾರಸ್ವಾಮಿ v/s ಕಾಂಗ್ರೆಸ್
ಎಚ್.ಡಿ.ಕುಮಾರಸ್ವಾಮಿ ಎಂದಿಗಿಂತ
ಹೆಚ್ಚು ಆಕ್ರಮಣಕಾರಿಯಾಗಿ ರಾಜ್ಯ ಸರಕಾರವನ್ನು ಟೀಕಿಸಲು ಆರಂಭಿಸಿದ್ದಾರೆ. ಎಷ್ಟರವರೆಗೆ ಎಂದರೆ,
ಬಿಜೆಪಿ ಮುಂಚೂಣಿ ನಾಯಕರ ಹೇಳಿಕೆಗಳೂ ಸಪ್ಪೆ ಎನಿಸುವಷ್ಟು. ಪೆನ್ ಡ್ರೈವ್ ನಿಂದ ಹಿಡಿದು,
ಸರ್ಕಾರ ಪತನಗೊಳ್ಳುವ ವಿಚಾರದವರೆಗೆ ಮಾಧ್ಯಮಗಳ ಮೂಲಕ ರಾಜಕೀಯ ಆಸಕ್ತರ ತಲೆಗೆ ಹುಳ ಬಿಡುವ ಕೆಲಸವನ್ನು
ಅಚ್ಚುಕಟ್ಟಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾಡುತ್ತಿದ್ದಾರೆ. ಅದೆಲ್ಲಾ ಹಿಟ್
ಎಂಡ್ ರನ್, ದೊಡ್ಡ ವಿಷಯವೇ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ
ಡಿ.ಕೆ.ಶಿವಕುಮಾರ್ ನಿರ್ಲಕ್ಷ್ಯ ಮಾಡುತ್ತಿದ್ದರೂ ದೊಡ್ಡ ಮಟ್ಟದ ರಾಜಕೀಯ ಲೆಕ್ಕಾಚಾರಗಳು ಇದರ
ಹಿಂದೆ ನಡೆಯುತ್ತಿದೆ ಎಂಬ ಮಾತನ್ನು ಯಾರೂ ಅಲ್ಲಗಳೆಯುತ್ತಿಲ್ಲ.
2004ರ ಚುನಾವಣೆಯಲ್ಲಿ ಯಾರಿಗೂ
ಪೂರ್ಣ ಬಹುಮತವಿರಲಿಲ್ಲ. ಧರ್ಮಸಿಂಗ್ ಸರಕಾರದ ಬಳಿಕ ಕುಮಾರಸ್ವಾಮಿ ಸರಕಾರ ಬಿಜೆಪಿ
ನೆರವಿನೊಂದಿಗೆ ಬಂತು. 2008ರ ಚುನಾವಣೆಯಲ್ಲಿ 113 ಸೀಟುಗಳು ಬಿಜೆಪಿಗೆ ಬಂದಿರಲಿಲ್ಲ. 110 ಸೀಟು
ಗಳಿಸಿದ ಬಿಜೆಪಿ ಅಧಿಕಾರಕ್ಕೆ ಪಡೆಯಲು ಇತರ ಪಕ್ಷಗಳಿಂದ ಗೆದ್ದವರ ಸಹಾಯ ಬೇಕಾಯಿತು. ಆ ಸಂದರ್ಭ
ಯಡಿಯೂರಪ್ಪ, ಡಿ.ವಿ.ಸದಾನಂದ ಗೌಡ, ಜಗದೀಶ ಶೆಟ್ಟರ್ ಎಂದು ಮೂರು ಮುಖ್ಯಮಂತ್ರಿಗಳು ಆಗಿಹೋದರು.
2018ರಲ್ಲಿ ಯಾವ ಪಕ್ಷಕ್ಕೂ ಪೂರ್ಣ ಬಹುಮತ ಇರಲಿಲ್ಲ. ಆದರೆ ಮತ್ತೆ ‘ಸಹಾಯ’ ‘ಮರುಚುನಾವಣೆ’ ‘ರಾಜೀನಾಮೆ’ಗಳಂಥ
ಪ್ರಕ್ರಿಯೆಗಳು ನಡೆದು ಬಿಜೆಪಿ ಅಧಿಕಾರಕ್ಕೆ ಬಂತು. ಇಲ್ಲಿ ಗಮನಾರ್ಹ ಅಂಶವೆಂದರೆ, ಸಾರ್ವತ್ರಿಕ
ಚುನಾವಣೆ ನಡೆದ ಸಂದರ್ಭ 224 ಸ್ಥಾನಗಳ ಪೈಕಿ 113 ಸ್ಥಾನಗಳನ್ನು ಮೊದಲ ಹಂತದಲ್ಲೇ ಗೆಲ್ಲಲು ಬಿಜೆಪಿಗೆ
ಇದುವರೆಗೂ ಸಾಧ್ಯವಾಗಿಲ್ಲ. ಅಧಿಕಾರಕ್ಕೆ ಬರಬೇಕಾದರೆ, ಆಗ ಆಯ್ಕೆಯಾದ ಉಳಿದ ಪಕ್ಷಗಳು, ಪಕ್ಷೇತರರ
ಬೆಂಬಲ ಬೇಕಾಯಿತು. ಅದನ್ನು ಆಪರೇಷನ್ ಕಮಲ ಎಂದು ಮಾಧ್ಯಮಗಳು ಬಣ್ಣಿಸಿದವು. ಕುಮಾರಸ್ವಾಮಿ ಸಿಎಂ
ಆಗಬೇಕಾದರೆ, ಬಿಜೆಪಿಯೊಂದಿಗೆ ಮತ್ತು ಕಾಂಗ್ರೆಸ್ ನೊಂದಿಗೆ ಮೈತ್ರಿಯನ್ನು ಮಾಡಿಕೊಂಡೇ ಆದರು.
ರಾಜಕೀಯದಲ್ಲಿ ಶಾಶ್ವತವಾಗಿ ಯಾರೂ ಶತ್ರುವಲ್ಲ, ಯಾರೂ ಮಿತ್ರರಲ್ಲ ಎಂಬುದನ್ನು ಈ ವಿದ್ಯಮಾನಗಳು
ಸಾರಿ ಹೇಳಿದವು.
ಈ ಬಾರಿಯ ಬಜೆಟ್ ಅಧಿವೇಶನ
ಗ್ಯಾರಂಟಿ ಘೋಷಣೆ, ಕೊನೆಯಲ್ಲಾದ ಲೆಟರ್ ಪೀಸ್ ಪೀಸ್ ಮಾಡಿ ಎಸೆದು ಸದನದಿಂದ ಔಟ್ ಆದ ಬಿಜೆಪಿ
ಶಾಸಕರ ವರ್ತನೆಯ ವಿಚಾರಕ್ಕಿಂತ ಹೆಚ್ಚು ಬಿಜೆಪಿ ತನ್ನ ಶಾಸಕಾಂಗ ಪಕ್ಷದ ನಾಯಕನನ್ನೇ ಆರಿಸದೆ ‘ಸುಧಾರಿಸಿತು’
ಎಂಬ ಗಮನಾರ್ಹ ವಿಚಾರವನ್ನು ಪ್ರದರ್ಶಿಸಿತು. ಬಿಜೆಪಿಯ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ
ಸಚಿವರಾದ ಸುನಿಲ್ ಕುಮಾರ್, ಫೈರ್ ಬ್ರಾಂಡ್ ಯತ್ನಾಳ್ ದೊಡ್ಡ ಸ್ವರ, ಮಧ್ಯಮ ಸ್ವರ ಹಾಗೂ ಸಣ್ಣ
ಸ್ವರದ ನಾಯಕರು ಸರಕಾರವನ್ನು ಎಷ್ಟೇ ಬಲವಾಗಿ ಟೀಕಿಸಿದರೂ ಜೆಡಿಎಸ್ ನ ಕುಮಾರಸ್ವಾಮಿ ಮತ್ತು ಸಿಎಂ
ಸಿದ್ದರಾಮಯ್ಯ ನಡುವಿನ ವಾಕ್ಸಮರದಷ್ಟು ಪರಿಣಾಮಕಾರಿಯಾಗಿ ಕಾಣಿಸಲಿಲ್ಲ ಎಂದು ಸದನ ಪರಿಣತರು
ವಿಶ್ಲೇಷಣೆ ಮಾಡುತ್ತಿದ್ದರು. ಒಂದು ಹಂತದಲ್ಲಿ ಕಾಂಗ್ರೆಸ್ ಪಕ್ಷ ಕುಮಾರಸ್ವಾಮಿಯನ್ನೇ ವಿಪಕ್ಷ
ನಾಯಕನನ್ನಾಗಿ ಮಾಡಬಹುದು ಎಂದು ಟ್ವೀಟ್ ಮಾಡುವಷ್ಟರ ಮಟ್ಟಿಗೆ ಎಚ್.ಡಿ.ಕೆ.
ಆವರಿಸಿಕೊಂಡುಬಿಟ್ಟಿದ್ದಾರೆ.
‘’ಫೀನಿಕ್ಸ್ ನಂತೆ ಧೂಳಿನಿಂದ
ಎದ್ದು ಬರುವೆ, ನಾನು ಮಣ್ಣಿನ ಮಗ’’ ಈ ಡೈಲಾಗ್ ಯಾರದ್ದು ಎಂದು ಕೇಳಿದರೆ, ದೇವೇಗೌಡರತ್ತಲೇ
ಬೆರಳು ಹೋಗುತ್ತದೆ. ಹುಟ್ಟು ಹೋರಾಟಗಾರ ಎಂದು ಅಭಿಮಾನಿಗಳಿಂದ ಹೊಗಳಲ್ಪಡುವ ಮಾಜಿ ಪ್ರಧಾನಿ
ದೇವೇಗೌಡ ತನ್ನ ಪುತ್ರರಾದ ಎಚ್.ಡಿ.ರೇವಣ್ಣ ಮತ್ತು ಎಚ್.ಡಿ.ಕುಮಾರಸ್ವಾಮಿಯನ್ನು ತನ್ನದೇ
ರೀತಿಯಲ್ಲಿ ತಯಾರು ಮಾಡಿದ್ದಾರೆ. ಕುಮಾರಸ್ವಾಮಿಯೂ ಅಷ್ಟೇ. ನಾನು ಆಕಸ್ಮಿವಾಗಿ
ಮುಖ್ಯಮಂತ್ರಿಯಾದೆ ಎಂದು ವಾಸ್ತವವನ್ನೇ ಹೇಳುವುದರ ಮೂಲಕ ಮತ್ತೊಂದು ಆಕಸ್ಮಿಕ ನಡೆಯಬಹುದು ಎಂಬ
ಸಂದೇಶವನ್ನು ಬಿಜೆಪಿಗೂ ನೀಡಿದ್ದಾರೆ.
ಬಿಜೆಪಿಗೆ ಪ್ರತಿಪಕ್ಷ ನಾಯಕ
ಮಾತ್ರ ಸಿಗಲೇ ಇಲ್ಲ: ಕಾಂಗ್ರೆಸ್ ಲೇವಡಿ ಮಾಡಿದ ಟ್ವೀಟ್
ಅಧಿವೇಶನವೂ ಮುಗಿಯಿತು...
— Karnataka Congress (@INCKarnataka) July 22, 2023
ಬಿಜೆಪಿಗೆ ಪ್ರತಿಪಕ್ಷ ನಾಯಕ ಮಾತ್ರ ಸಿಗಲೇ ಇಲ್ಲ, ಸಿಗುವ ಲಕ್ಷಣವೂ ಕಾಣುತ್ತಿಲ್ಲ!
ಹೈಕಮಾಂಡ್ ಮೆಚ್ಚಿಸಲು
ಸದನದೊಳಗೆ ಬಿಜೆಪಿಗರು ತೋರಿದ ಪರ್ಫಾರ್ಮೆನ್ಸ್ ಕೂಡ ವ್ಯರ್ಥವಾಗಿದೆ.
ಹೈಕಮಾಂಡಿನಿಂದ ಈ ಪರಿ ನಿರ್ಲಕ್ಷ್ಯಕ್ಕೆ ಒಳಪಟ್ಟಿರುವ @BJP4Karnataka ಮನೆಯಲ್ಲಿ ಕಂಬಳಿ ಹೊದ್ದು ಮಲಗುವುದು ಒಳಿತು.
ಕುಮಾರಸ್ವಾಮಿ ಟ್ವೀಟ್ ಗಳನ್ನೇ ನೋಡಿ – ಮೈತ್ರಿ ಆಯ್ಕೆ ಮುಕ್ತವಾಗಿರಿಸಿದ್ದೇವೆ ಎಂದು ಅವರು ಹೇಳುವುದಾದರೂ ಯಾರಿಗೆ?
ಮೈತ್ರಿ ಆಯ್ಕೆ ಮುಕ್ತವಾಗಿರಿಸಿದ್ದೇವೆ.@KannadaPrabha ಪತ್ರಿಕೆಯಲ್ಲಿ ನನ್ನ ಸಂದರ್ಶನ.@JanataDal_S pic.twitter.com/IykHqYuQ6v
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) July 20, 2023