NEWS: ಮಂಗಳೂರಿನ ಐಡಿಯಲ್ ಐಸ್ ಕ್ರೀಂನ ಗಡ್ ಬಡ್ ಸ್ವಾದಕ್ಕೆ ಮೆರುಗು: ವಿಶ್ವದ ಟಾಪ್ 100ರಲ್ಲಿ ಸ್ಥಾನ
ಇದೀಗ ಈ ಪ್ರಸಿದ್ದ ಐಸ್ ಕ್ರೀಂ ನ ಐಟಂ ವಿಶ್ವದ ಟಾಪ್ 100 ರಲ್ಲಿ ಸ್ಥಾನ ಗಳಿಸಿದೆ. ವಿಶ್ವದ ಟಾಪ್ 100 ಐಕಾನಿಕ್ ಐಸ್ಕ್ರೀಮ್ ಗಳ ಪಟ್ಟಿ ಬಿಡುಗಡೆ ಗೊಂಡಿದ್ದು, ಇದರಲ್ಲಿ ಮಂಗಳೂರಿನ ಪಬ್ಬಾಸ್ ನ ಗಡ್ ಬಡ್ ಗೆ ಸ್ಥಾನ ಲಭಿಸಿದೆ. ಇದು ಮಂಗಳೂರಿಗರಿಗಷ್ಟೇ ಅಲ್ಲ, ದೇಶಕ್ಕೂ ಹೆಮ್ಮೆ ವಿಚಾರ.
TasteAtlas ಎಂಬ ಜನಪ್ರಿಯ ಆಹಾರ ಮತ್ತು ಪ್ರಯಾಣ ಮಾರ್ಗದರ್ಶಿ "ವಿಶ್ವದ 100 ಅತ್ಯಂತ ಸಾಂಪ್ರದಾಯಿಕ ಐಸ್ ಕ್ರೀಮ್‌ಗಳ" ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ 100 ರ ಪಟ್ಟಿಯಲ್ಲಿ ಭಾರತದ ಐದು ಐಸ್ ಕ್ರೀಮ್ ಫ್ಲೇವರ್ ಗಳು ಸೇರಿವೆ. ಅವುಗಳಲ್ಲಿ ಬೆಂಗಳೂರಿನ ಕಾರ್ನರ್ ಹೌಸ್‌ನಲ್ಲಿ ತಯಾರಿಸಲಾಗುವ ಜನಪ್ರಿಯ ಡೆತ್ ಬೈ ಚಾಕಲೇಟ್, ಮುಂಬಯಿಯ ಕೆ. ರುಸ್ತೋಮ್ ಆ್ಯಂಡ್ ಕೋನಲ್ಲಿ ಸಿಗುವ ಮ್ಯಾಂಗೋ ಐಸ್‌ಕ್ರೀಮ್ ಸ್ಯಾಂಡ್‌ವಿಚ್, ಮುಂಬಯಿಯ ಅಪ್ಸರಾ ಐಸ್‌ಕ್ರೀಮ್‌ನವರು ತಯಾರಿಸುವ ಗ್ವಾವಾ ಐಸ್‌ಕ್ರೀಮ್ (ಪೇರಳೆ ಐಸ್ ಕ್ರೀಮ್), ಮುಂಬಯಿಯ ನ್ಯಾಚುರಲ್ಸ್ ಸಂಸ್ಥೆಯ ಟೆಂಡರ್ ಕೋಕನಟ್ ಐಸ್‌ಕ್ರೀಮ್ ಹಾಗೂ ಮಂಗಳೂರಿನ ಪಬ್ಬಾಸ್‌ನಲ್ಲಿ ಸಿಗುವ ಗಡ್‌ಬಡ್ ಐಸ್‌ಕ್ರೀಮ್‌ಗಳಿಗೆ ಪಟ್ಟಿಯಲ್ಲಿ ಸ್ಥಾನ ನೀಡಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಐಡಿಯಲ್ಸ್ ನ ಮಾಲೀಕ ಮುಕುಂದ್ ಕಾಮತ್ ಇದೊಂದು ಹೆಮ್ಮೆಯ ವಿಚಾರ, ಸರ್ವೇ ಮಾಡುತ್ತಿರುವ ವಿಚಾರ ನಮ್ಮ ಗಮನಕ್ಕೂ ಬರಲಿಲ್ಲ. ನಮ್ಮ ಸ್ವಾದವನ್ನು ಅರಿತುಕೊಂಡು, ಅದನ್ನು ಗುರುತಿಸಿ ವಿಶ್ವದ ನೂರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದ್ದು ಖುಷಿ ತಂದಿದೆ. ಮಂಗಳೂರಿಗರಿಗೂ ಗಡ್ ಬಡ್ ಐಸ್ ಕ್ರೀಂ ಗೂ ಭಾವನಾತ್ಮಕ ನಂಟು ಇದೆ. ನಮ್ಮಲ್ಲಿ ಬರುವ ಗ್ರಾಹಕರು ಈ ಸ್ವಾದವನ್ನು ಅತಿ ಹೆಚ್ಚು ಇಷ್ಟಪಡುತ್ತಾರೆ. ಇದಕ್ಕೆ ಮನ್ನಣೆ ದೊರಕಿದೆ ಎಂದರು.