RAIN: ಮಂಗಳೂರಿನಲ್ಲಿ ಮಳೆಗೆ ಹೈಟೆನ್ಷನ್ ವಯರ್ ಮೇಲೆಯೇ ಬಿದ್ದ ಬೃಹತ್ ಹೋರ್ಡಿಂಗ್ - ತಪ್ಪಿದ ಭಾರೀ ದುರಂತ
ಮಂಗಳೂರು: ನಿನ್ನೆ ರಾತ್ರಿ ಸುರಿದ ಮಳೆಗೆ ನಗರದ ಕೊಟ್ಟಾರ ಬಳಿಯ ಇನ್ಫೋಸಿಸ್ ಮುಂಭಾಗದಲ್ಲಿದ್ದ ಬೃಹತ್ ಗಾತ್ರದ ಹೋರ್ಡಿಂಗ್ ಒಂದು ಹೈಟೆನ್ಷನ್ ವೈಯರ್ ಮೇಲೆಯೇ ಬಿದ್ದಿದ್ದು, ವಿದ್ಯುತ್ ಕಂಬ ರಸ್ತೆ ಕಡೆಗೆ ವಾಲಿ ನಿಂತಿದೆ.
ಮಂಗಳೂರು ನಗರಾದ್ಯಂತ ರಾತ್ರಿ ವೇಳೆಗೆ ಸಾಧಾರಣ ಮಳೆ ಸುರಿದಿತ್ತು. ಪರಿಣಾಮ ತುಕ್ಕು ಹಿಡಿದಿದ್ದ ಈ ಬೃಹತ್ ಹೋರ್ಡಿಂಗ್ ಏಕಾಏಕಿ ಬಾಗಿ ಕುಸಿದು ಹೈಟೆನ್ಷನ್ ವಯರ್ ಮೇಲೆಯೇ ಬಿದ್ದಿದೆ. ಈ ವೇಳೆ ವಿದ್ಯುತ್ ಕಂಬ ವಾಲಿಕೊಂಡಿದ್ದರೂ, ಹೋರ್ಡಿಂಗ್ ಅನ್ನು ತಡೆದು ನಿಲ್ಲಿಸಿದೆ. ಒಂದು ವೇಳೆ ಇಲ್ಲಿ ಈ ವಿದ್ಯುತ್ ಕಂಬ ಇಲ್ಲದಿದ್ದಲ್ಲಿ ಹೋರ್ಡಿಂಗ್ ನೇರ ರಸ್ತೆಗೆ ಬೀಳುತ್ತಿದ್ದು ರಸ್ತೆಯಲ್ಲಿ ಯಾರಾದರೂ ಸಂಚರಿಸುತ್ತಿದ್ದಲ್ಲಿ ಭಾರೀ ಅನಾಹುತ ಸಂಭವಿಸುತ್ತಿತ್ತು. ಆದರೆ ಅದೃಷ್ಟವಶಾತ್ ಇಂತಹ ಯಾವುದೇ ದುರ್ಘಟನೆ ಸಂಭವಿಸಿಲ್ಲ. ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕಾ ದೃಷ್ಟಿಯಿಂದ ಜಿಲ್ಲೆಯ ರಸ್ತೆ ಬದಿಗಳಲ್ಲಿ ಅಳವಡಿಸಿರುವ ಅಪಾಯಕಾರಿ ಫ್ಲೆಕ್ಸ್, ಹೋರ್ಡಿಂಗ್ ಗಳನ್ನು ತೆರವು ಮಾಡಬೇಕೆಂದು ಮನಪಾ ಆಯುಕ್ತರು ಹಾಗೂ ಜಿಲ್ಲಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಈ ಹಿಂದೆಯೇ ಜಿಲ್ಲಾಧಿಕಾರಿ ಸೂಚನೆ ನೀಡಿದ್ದರು. ಆದರೂ ಈ ಆದೇಶ ಸರಿಯಾಗಿ ಪಾಲನೆಯಾಗದೆ ಈ ಘಟನೆ ನಡೆದಿದೆ