UPSC: ಯಾವುದೇ ಕೋಚಿಂಗ್ ಇಲ್ಲದೆ ಯುಪಿಎಸ್ ಸಿ ತೇರ್ಗಡೆಯಾದ ಉಡುಪಿಯ ನಿವೇದಿತಾ ಶೆಟ್ಟಿ
2022ರ ಸಾಲಿನ ಕೇಂದ್ರ ನಾಗರಿಕ ಸೇವಾಪರೀಕ್ಷೆಯ
ಪರಿಷ್ಕೃತ ಪಟ್ಟಿ ಮೊನ್ನೆ ಬಿಡುಗಡೆಯಾಗಿದ್ದು, ಅದರಲ್ಲಿ ಉಡುಪಿಯ ನಿವೇದಿತಾ ಶೆಟ್ಟಿ ತೇರ್ಗಡೆಯಾಗಿದ್ದಾರೆ. ಯುಪಿಎಸ್ ಸಿ
ಪರೀಕ್ಷೆಯಲ್ಲಿ ಸಾಧಿಸುವ ಮನಸ್ಸಿದ್ದರೆ, ಛಲವಿದ್ದರೆ, ಮನೆಯಲ್ಲಿ ಮಕ್ಕಳಿದ್ದರೂ ಕಠಿಣ
ಪರಿಶ್ರಮದಿಂದ ಯಾವುದೇ ಕೋಚಿಂಗ್ ಇಲ್ಲದೆ ತೇರ್ಗಡೆಯಾಗಬಹುದು ಎಂಬುದಕ್ಕೆ ನಿವೇದಿತಾ
ಸಾಕ್ಷಿ. ವಿಶೇಷವೆಂದರೆ, ಇವರು ಕೋಚಿಂಗ್ ಅನ್ನೇ ತೆಗೆದುಕೊಂಡಿಲ್ಲ.
ನಿವೇದಿತಾ ಶೆಟ್ಟಿ ಅವರ ತಂದೆ ಸದಾನಂದ ಶೆಟ್ಟಿ ಪೆರ್ಡೂರು ಹಾಗೂ ತಾಯಿ ಸಮಿತಾ ಶೆಟ್ಟಿ ಉಡುಪಿಯವರು. ತಂದೆ ಅಂಬಾಗಿಲಿನಲ್ಲಿ ಭಾರತ್ ಟೈಲ್ಸ್ ನಲ್ಲಿ ನೌಕರಿಯಲ್ಲಿದ್ದು ನಿವೃತ್ತರಾಗಿದ್ದಾರೆ.
ಇವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಕಲ್ಯಾಣಪುರ ಮಿಲಾಗ್ರೀಸ್ ಸಂಸ್ಥೆಯಲ್ಲಿ ಮಾಡಿದ್ದರು. ಉಡುಪಿ ವಿದ್ಯೋದಯದಲ್ಲಿ ಪಿಯುಸಿ ಮುಗಿಸಿದ ಬಳಿಕ ನಿಟ್ಟಿಯಲ್ಲಿ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿದ್ದರು. ಕಂಪ್ಯೂಟರ್ ಸೈನ್ಸ್ ನಲ್ಲಿ ಅವರು ಇಂಜಿನಿಯರಿಂಗ್ ಕಲಿತಿದ್ದಾರೆ.ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜನಿಯರ್ ಆಗಿ ದುಡಿಯುವಾಗಲೇ ನಾಗರಿಕ ಸೇವಾ ಪರೀಕ್ಷೆ ಬರೆಯಲು ಅವರು ಸಿದ್ಧತೆ ನಡೆಸಿದ್ದರು. ತಮ್ಮ ಬಿಡುವಿನ ವೇಳೆಯಲ್ಲಿ ಸಂಪೂರ್ಣ ತಯಾರಿ ನಡೆಸಿದರು.ಯಾವುದೇ ಕೋಚಿಂಗ್, ತರಬೇತಿ ಸಹಾಯವಿಲ್ಲದೆ, ಸ್ವಪ್ರಯತ್ನದಲ್ಲಿ ಯುಪಿಎಸ್ ಸಿ ತೇರ್ಗಡೆಯಾಗಿರುವುದು ಇವರ ಹೆಗ್ಗಳಿಕೆ.
ಓಮನ್ ನಲ್ಲಿ ಸರಕಾರಿ ಟೆಕ್ನಿಕಲ್ ಯೂನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿರುವ ದಿವಾಕರ ಶೆಟ್ಟಿ ಅವರನ್ನು ಮದುವೆಯಾಗಿ ಮಗುವಿನ ತಾಯಿಯೂ ಆಗಿರುವ ನಿವೇದಿತಾ, ತಾಯಿ ಮನೆಯಲ್ಲಿ ಪರೀಕ್ಷೆ ಸಿದ್ಧತೆ ನಡೆಸಿದ್ದರು. 2022ರ ಮೇ ತಿಂಗಳಲ್ಲಿ ಪ್ರಕಟವಾದ ಯುಪಿಎಸ್ ಸಿ ಅಂತಿಮ ಪರೀಕ್ಷೆಯಲ್ಲಿ ಕೇವಲ ಒಂದು ಅಂಕ ಕಡಿಮೆ ಆಗಿತ್ತು.