-->
BUDJET REACTION: ದುಡಿದು ತಿನ್ನುವವನನ್ನು ಬೇಡಿ ತಿನ್ನು ಎಂದು ಹೇಳಿದಂತಾಯಿತು: ಕರಾವಳಿಯಲ್ಲಿ ದುಡಿಯುವ ಕೃಷಿಕರ ಬವಣೆಗೆ ಬಜೆಟ್ ಪರಿಹಾರ ನೀಡಿಲ್ಲ ಎನ್ನುತ್ತಾರೆ ಕಿಸಾನ್ ಸಂಘದ ಸತ್ಯನಾರಾಯಣ ಉಡುಪ

BUDJET REACTION: ದುಡಿದು ತಿನ್ನುವವನನ್ನು ಬೇಡಿ ತಿನ್ನು ಎಂದು ಹೇಳಿದಂತಾಯಿತು: ಕರಾವಳಿಯಲ್ಲಿ ದುಡಿಯುವ ಕೃಷಿಕರ ಬವಣೆಗೆ ಬಜೆಟ್ ಪರಿಹಾರ ನೀಡಿಲ್ಲ ಎನ್ನುತ್ತಾರೆ ಕಿಸಾನ್ ಸಂಘದ ಸತ್ಯನಾರಾಯಣ ಉಡುಪ

 

ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮಂಡಿಸಿದ ಬಜೆಟ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಕುರಿತು ಭಾರತೀಯ ಕಿಸಾನ್ ಸಂಘದ ಉಡುಪಿ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಗೂ ಬಳಕೆದಾರರ ಪರ ಹೋರಾಟಗಾರ ಜಪ್ತಿ ಸತ್ಯನಾರಾಯಣ ಉಡುಪ ಪ್ರತಿಕ್ರಿಯಿಸಿದ್ದು, ದುಡಿದು ತಿನ್ನುವ ಕೃಷಿಕರನ್ನು ಬೇಡಿ ತಿನ್ನುವಂತೆ ಬಜೆಟ್ ಪ್ರೋತ್ಸಾಹ ಮಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಅವರು ನೀಡುವ ಕಾರಣಗಳು ಇವು.

ಹೈಟೆಕ್ ಚಿಂತನೆಗಳಿಂದ ಕೃಷಿಕರಿಗೆ ಪ್ರಯೋಜನವಿಲ್ಲ

‘‘’ಈ ಬಾರಿ ರಾಜ್ಯಸರಕಾರ ಮಂಡಿಸಿರುವ ಬಜೆಟ್ ನಲ್ಲಿ ಕೃಷಿ ಹಾಗೂ ಕರಾವಳಿಯ ಕೃಷಿಕರಿಗೆ ಯಾವುದೇ ಯೋಜನೆಗಳನ್ನು ನೀಡದೆ ನಿರಾಸೆ ಉಂಟುಮಾಡಿದೆ. ಕೇವಲ ಹೈಟೆಕ್ ಚಿಂತನೆಯ ಕಿಸಾನ್ ಮಾಲ್, ಫುಡ್ ಪಾರ್ಕ್, ಎಪಿಎಂಸಿಗಳ ಡಿಜಿಟಲೀಕರಣ ಮೊದಲಾದ ಹೆಸರುಗಳಲ್ಲಿ ಒಂದಷ್ಟು ಅನುದಾನಗಳನ್ನು ತೆಗೆದಿರಿಸಲಾಗಿದೆಯೇ ಹೊರತು, ರೈತರಿಗೆ ಆದಾಯ ಹೆಚ್ಚಿಸುವ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸುವ ಯಾವುದೇ ಯೋಜನೆಗಳನ್ನು ಘೋಷಿಸಲಾಗಿಲ್ಲ’’ ಎಂದವರು ಅಭಿಪ್ರಾಯಪಟ್ಟಿದ್ದಾರೆ.

ಕರಾವಳಿಯ ಮೂಲವಿಚಾರಗಳಿಗೆ ಒತ್ತು ನೀಡಿಲ್ಲ

‘’ಕರಾವಳಿ ಜಿಲ್ಲೆಗಳಲ್ಲಿ ಕುಂಠಿತಗೊಳ್ಳುತ್ತಿರುವ ಮಣ್ಣಿನ ಫಲವತ್ತತೆ, ಬರಿದಾಗುತ್ತಿರುವ ಅಂತರ್ಜಲ ಮಟ್ಟ, ಕಾರ್ಮಿಕರ ಕೊರತೆಗೆ ಪರ್ಯಾಯವಾಗಿ ಬೇಕಾದ ಯಾಂತ್ರೀಕರಣ ಮೊದಲಾದ ಮೂಲಭೂತ ವಿಚಾರಗಳಿಗೆ ಯಾವುದೇ ಒತ್ತು ನೀಡಿಲ್ಲ. ನಾಲ್ಕೈದು ವರ್ಷಗಳಿಂದ ಕುಂಟುತ್ತಿರುವ ವಾರಾಹಿ ಯೋಜನೆ, ಮುಳುಗಿ ಮೂಲೆ ಹಿಡಿದಿರುವ ಸಕ್ಕರೆ ಕಾರ್ಖಾನೆ, ಕೃಷಿ ಭೂಮಿಗೆ ನುಗ್ಗುತ್ತಿರುವ ಸಮುದ್ರದ ನೀರು ತಡೆಗಟ್ಟಲು ಕಿಂಡಿ ಅಣೆಕಟ್ಟುಗಳು, ಕಾಡು ಪ್ರಾಣಿ ಮತ್ತು ಮನುಷ್ಯನ ಸಂಘರ್ಷಕ್ಕೆ ಕಂಡುಕೊಳ್ಳಬೇಕಾದ ಮಾರ್ಗೋಪಾಯಗಳು ಮೊದಲಾದ ಬೇಡಿಕೆಗಳು ಈಡೇರಬಹುದಾದ ಭರವಸೆ ಇದ್ದರೂ ಆ ಬಗ್ಗೆ ಬಜೆಟ್ ಮೌನವಾಗಿದೆ’’ ಎಂದು ಆತಂಕ ವ್ಯಕ್ತಪಡಿಸಿದರು.

ಕಳೆದ ಬಜೆಟ್ ಘೋಷಣೇಯೇ ಅನುಷ್ಠಾನಕ್ಕೆ ಬಂದಿಲ್ಲ

‘’ಸಹಕಾರಿ ಬ್ಯಾಂಕುಗಳಲ್ಲಿ ಬಡ್ಡಿರಹಿತ ಸಾಲದ ಪ್ರಮಾಣವನ್ನು 3 ಲಕ್ಷದಿಂದ 5 ಲಕ್ಷಕ್ಕೆ ಏರಿಸುವ ಪ್ರಸ್ತಾಪ ಕಳೆದ ಬಜೆಟ್ ನಲ್ಲೇ ಘೋಷಿಸಲಾಗಿತ್ತು. ಆದರೆ ಅನುಷ್ಠಾನಕ್ಕೆ ಬಂದಿಲ್ಲ. ಹಸು, ಎಮ್ಮೆ ಖರೀದಿಗೆ ನೀಡಲಾಗುವ ಸಾಲಕ್ಕೆ ಶೇ.6 ರಿಯಾಯಿತಿ ಘೋಷಿಸಲಾಗಿದ್ದರೂ ಹಾಲಿಗೆ ನೀಡಲಾಗುತ್ತಿದ್ದ ಪ್ರೋತ್ಸಾಹಧನ ನೆನೆಗುದಿಗೆ ಬಿದ್ದಿದೆ. ನಮ್ಮ ಸಂಘಗಳ ಬಹುಬೇಡಿಕೆಯಾದ ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ನಿರ್ಧರಿಸಿ ಬೆಂಬಲ ಬೆಲೆ ಘೋಷಿಸಿ ಖರೀದಿ ಮಾಡಬೇಕು ಎನ್ನುವ ವಾದವನ್ನು ರಾಜ್ಯಸರಕಾರ ಒಪ್ಪಿತ್ತು. ಅದನ್ನು ಬಜೆಟ್ ಪ್ರಸ್ತಾವನೆ ಮೂಲಕ ಕೇಂದ್ರ ಸರಕಾರಕ್ಕೆ ವರ್ಗಾಯಿಸಿದೆ. ಬಹುತೇಕ ಉಚಿತಗಳನ್ನು ಪೂರೈಸುವ ಭರದಲ್ಲಿ ದುಡಿದು ತಿನ್ನುವ ಕೃಷಿಕನನ್ನು ಬೇಡಿ ತಿನ್ನುವ ಪರಿಸ್ಥಿತಿಗೆ ನೂಕುವಂತಿದೆ’’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.


Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ