Udupi: ಮಕರ ಸಂಕ್ರಮಣದಂದು ಉಡುಪಿಯಲ್ಲಿ ತ್ರಿರಥೋತ್ಸವ
Monday, January 15, 2024
PHOTO COURTESY: ARUNACHALA HEBBAR |
ದ್ವಾರಕೆಯಿಂದ ಬಂದ ಭಗವಾನ್ ಶ್ರೀಕೃಷ್ಣನನ್ನು ಮಕರ ಸಂಕ್ರಮಣದ ಪರ್ವ ಕಾಲದಲ್ಲಿ ದ್ವೈತ ಮತ ಸ್ಥಾಪಕ ಶ್ರೀ ಮಧ್ವಾಚಾರ್ಯರು ಪ್ರತಿಷ್ಠಾಪಿಸಿದ ಸ್ಮರಣೆಗಾಗಿ ಉಡುಪಿಯಲ್ಲೀಗ ರಥೋತ್ಸವ ವೈಭವ. ಪ್ರತಿ ವರ್ಷವೂ ಈ ರಥೋತ್ಸವ ನಡೆಯುತ್ತದೆ. ಭಾನುವಾರ ರಾತ್ರಿ ತ್ರಿರಥೋತ್ಸವ ಉಡುಪಿ ರಥಬೀದಿಯಲ್ಲಿ ವೈಭವದಿಂದ ನೆರವೇರಿತು.
ಮಧ್ವ ಸರೋವರದಲ್ಲಿ ತೆಪ್ಪೋತ್ಸವದ ಬಳಿಕ ಸಣ್ಣ ರಥದಲ್ಲಿ ಮುಖ್ಯಪ್ರಾಣ, ಬ್ರಹ್ಮರಥದಲ್ಲಿ ಶ್ರೀಕೃಷ್ಣ, ಹಾಗೂ ಮಧ್ಯರಥದಲ್ಲಿ ಚಂದ್ರಮೌಳೀಶ್ವರ, ಅನಂತೇಶ್ವರ ದೇವರನ್ನು ಕೂರಿಸಿ, ಪೂಜೆ ಸಲ್ಲಿಸಿ, ತೆಂಗಿನಕಾಯಿ ಒಡೆದು ಚಾಲನೆ ನೀಡಲಾಯಿತು.ಭಕ್ತರು ಗೋವಿಂದಾ, ಕೃಷ್ಣಾ ಎನ್ನುವ ಹೊತ್ತಿನಲ್ಲಿ ರಥದ ಹಗ್ಗ ಎಳೆಯಲಾಯಿತು. ಪುತ್ತಿಗೆ ಮಠದ ಎದುರು ತ್ರಿರಥಗಳು ಒಟ್ಟು ಸೇರಿದವು. ಪರ್ಯಾಯ ಶ್ರೀ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ಫಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಕಿರಿಯ ಯತಿ ಶ್ರೀ ವಿದ್ಯಾರಾಜೇಶ್ವರ ತೀರ್ಥರು, ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು, ಸೋದೆ ಶ್ರೀ ವಿಶ್ವವಲ್ಲಭ ತೀರ್ಥರು, ಶಿರೂರು ಮಠದ ಶ್ರೀ ವೇದವರ್ಧನತೀರ್ಥರು ಉತ್ಸವದಲ್ಲಿ ಪಾಲ್ಗೊಂಡರು. ರಥಬೀದಿ ಸುತ್ತಮುತ್ತ ಮಹೇಶ್ ಪತ್ತಾರ ಮತ್ತು ಬಳಗದಿಂದ ರಂಗೋಲಿ ಚಿತ್ತಾರ ಕಂಡುಬಂತು. ಸುಡುಮದ್ದಿನ ಆಕರ್ಷಣೆಯೊಂದಿಗೆ ರಥೋತ್ಸವ ನಡೆಯಿತು.