BRIJESH CHOWTA: ವಿದ್ಯಾರ್ಥಿ ನಾಯಕರಾದ ಹರ್ಷಿತ್ ಪೂಜಾರಿ, ಗಣೇಶ್ ಪೂಜಾರಿ ವಿರುದ್ಧ ಕೇಸು ; ಕಾಂಗ್ರೆಸಿನ ಅಸಲಿ ಮುಖ ಬಯಲು - ಕ್ಯಾಪ್ಟನ್ ಬ್ರಿಜೇಶ್ ಚೌಟ
ಮಂಗಳೂರು: ,ಹುಬ್ಬಳ್ಳಿಯಲ್ಲಿ ಹಿಂದೂ ಯುವತಿ ನೇಹಾ ಹಿರೇಮಠ ಬರ್ಬರ ಹತ್ಯೆಯನ್ನು ಖಂಡಿಸಿ ಕಾರ್ಕಳದಲ್ಲಿ ಪ್ರತಿಭಟನೆ ನಡೆಸಿದ ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಹರ್ಷಿತ್ ಪೂಜಾರಿ ಮತ್ತು ಗಣೇಶ್ ಪೂಜಾರಿ ಮೇಲೆ ಕೇಸು ದಾಖಲಿಸುವ ಮೂಲಕ ಕಾಂಗ್ರೆಸಿನ ಅಸಲಿ ಮುಖ ಮತ್ತೆ ಬಯಲಾಗಿದೆ ಎಂದು ದಕ್ಷಿಣ ಕನ್ನಡ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಲೇವಡಿ ಮಾಡಿದ್ದಾರೆ.
ಜಿಹಾದಿ ಕೃತ್ಯಕ್ಕೆ ಮುಗ್ಧ ಹಿಂದೂ ಯುವತಿ ಬಲಿಯಾಗಿದ್ದರೂ ಕಾಂಗ್ರೆಸ್ ನಾಯಕರು ಮೌನವಾಗಿ ಕುಳಿತಿದ್ದಾರೆ. ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ಬೇಜವಾಬ್ದಾರಿ ಹೇಳಿಕೆಗಳು ಪರೋಕ್ಷವಾಗಿ ಮತಾಂಧರಿಗೆ ಪ್ರೋತ್ಸಾಹ ನೀಡುವಂತಿದೆ. ಇಂತಹ ಅಮಾನುಷ ಕೊಲೆಯನ್ನು ಖಂಡಿಸಿ ಎಬಿವಿಪಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರೆ ಅವರ ವಿರುದ್ದವೇ ಕೇಸು ದಾಖಲಿಸಿದ್ದು ಕಾಂಗ್ರೆಸಿನ ಓಲೈಕೆ ರಾಜಕೀಯಕ್ಕೆ ಜ್ವಲಂತ ಉದಾಹರಣೆ. ಸಮಾಜಘಾತುಕ ಕೃತ್ಯಗಳು ನಡೆದಾಗ ತಕ್ಷಣವೇ ಅದರ ವಿರುದ್ಧ ಹೋರಾಟ ಮಾಡುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಂತಹ ದೇಶಭಕ್ತ ಸಂಘಟನೆ ಯಾವಾಗಲೂ ಮುಂಚೂಣಿಯಲ್ಲಿರುತ್ತದೆ. ಅಂತಹ ಕಾರ್ಯಕರ್ತರ ಮೇಲೆ ಕೇಸು ದಾಖಲಿಸಿ ಬೆದರಿಸುವ ಕೆಲಸ ಮಾಡಿದ್ದರೆ ಮುಂದಿನ ದಿನಗಳಲ್ಲಿ ಇದಕ್ಕೆ ಬೆಲೆ ತೆರಬೇಕಾಗುತ್ತದೆ ಎಂದವರು ಹೇಳಿದ್ದಾರೆ.
ಹಿಂದೂ ವಿರೋಧಿ ನೀತಿ ಅನುಸರಿಸಿ ಅಲ್ಪಸಂಖ್ಯಾತರನ್ನು ಓಲೈಸುತ್ತಾ ಬಂದಿರುವ ಕಾಂಗ್ರೆಸ್ ಈಗ ಓಟಿಗಾಗಿ ಹಿಂದೂಗಳನ್ನು ಒಡೆಯುವ ವ್ಯವಸ್ಥಿತ ಷಡ್ಯಂತ್ರ ನಡೆಸಿದೆ. ಒಂದೆಡೆ ಎಸ್ ಡಿಪಿಐ ಜತೆ ಕೈ ಜೋಡಿಸಿರುವ ಕಾಂಗ್ರೆಸ್ ಇನ್ನೊಂದೆಡೆ ಸಮಾಜವನ್ನು ಒಡೆಯುವ ನೀಚ ಕೃತ್ಯದಲ್ಲಿ ತೊಡಗಿದೆ ಎಂದು ಬ್ರಿಜೇಶ್ ಚೌಟ ಹೇಳಿದ್ದಾರೆ.
ಹಿಂದೂ ಯುವತಿ ನೇಹಾ ಹತ್ಯೆ ಖಂಡಿಸಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಮೇಲೆ ಕೇಸು ದಾಖಲಿಸಿದ ಕಾಂಗ್ರೆಸಿಗೆ ಯುವಶಕ್ತಿ ಮತ್ತು ನಾರಿಶಕ್ತಿ ಒಂದಾಗಿ ತಕ್ಕ ಪಾಠ ಕಲಿಸುವ ಕಾಲ ಸನ್ನಿಹಿತವಾಗಿದೆ ಎಂದು ಕ್ಯಾಪ್ಟನ್ ಬ್ರಿಜೇಶ್ ಚೌಟ ತಿಳಿಸಿದ್ದಾರೆ.