Mangalore: ಸಕ್ಷಮ ದಕ್ಷಿಣ ಕನ್ನಡ ಘಟಕದಿಂದ ಅಷ್ಟಾವಕ್ರ ದಿನಾಚರಣೆ, ಸೆರೆಬ್ರಲ್ ಪಾಲ್ಸಿ ಹಾಗೂ ವಿಶ್ವ ಮಾನಸಿಕ ಸ್ವಾಸ್ಥ್ಯ ದಿನಾಚರಣೆ
Monday, October 7, 2024
ಮಂಗಳೂರು: ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಅಷ್ಟಾವಕ್ರದಿನಾಚರಣೆ, ಸೆರೆಬ್ರಲ್ ಪಾಲ್ಸಿ ಹಾಗೂ ವಿಶ್ವ ಮಾನಸಿಕ ಸ್ವಾಸ್ಥ್ಯ ದಿನಾಚರಣೆಗಳು ದೇರೇಬೈಲ್ ಕೊಂಚಾಡಿಯ ಲ್ಯಾಂಡ್ಲಿಂಕ್ಸ್ ಬಡಾವಣೆಯ ಸಿದ್ಧಿಯಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಕೆ ಐ ಓ ಸಿ ಎಲ್ ಸಂಸ್ಥೆಯ ನಿವೃತ್ತ ಹಣಕಾಸು ನಿರ್ದೇಶಕರಾದ ಸಿ ಎ ಗೋಪಾಲಕೃಷ್ಣ ಭಟ್ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪರ್ಯಾವರಣ್ ಗತಿವಿಧಿ ಇದರ ರಾಜ್ಯ ಸಂಯೋಜಕರಾದ ಜಯರಾಮ್ ಬೊಳ್ಳಾಜೆಯವರು ಅಷ್ಟಾವಕ್ರ ಜಯಂತಿಯ ವಿಷಯವಾಗಿ ಮಾತನಾಡಿ ಅಷ್ಟಾವಕ್ರನು ತನ್ನ ಎಂಟು ರೀತಿಯ ವೈಕಲ್ಯತೆಯನ್ನು ಮೀರಿ ಜ್ಞಾನಿಯೂ, ದಾರ್ಶನಿಕನಾಗಿಯೂ ಬೆಳೆದ ರೀತಿ ದಿವ್ಯಾಂಗರಿಗೆ ಮಾತ್ರವಲ್ಲ, ಸಮಸ್ತ ಸಮಾಜಕ್ಕೆ ಆದರ್ಶ ಎಂದರು. ಇನ್ನೋರ್ವ ಮುಖ್ಯ ಅತಿಥಿ ಡಾ ಅನಿಲ್ ಕಾಕುಂಜೆ, ಮನೋವೈದ್ಯರು ಹಾಗೂ ಮುಖ್ಯಸ್ಥರು ಮನಃಶಾಸ್ತ್ರ ವಿಭಾಗ, ಯೆನಪೋಯ ಮೆಡಿಕಲ್ ಕಾಲೇಜು ಇವರು ಸೆರಬ್ರಲ್ ಪಾಲ್ಸಿ ದಿನಾಚರಣೆ ಮತ್ತು ಮಾನಸಿಕ ಸ್ವಾಸ್ಥ್ಯ ದಿನಾಚರಣೆ ಬಗ್ಗೆ ಮಾತನಾಡುತ್ತಾ ಸೆರಬ್ರಲ್ ಪಾಲ್ಸಿ ಬಾಧಿತರಲ್ಲಿ ಹೆಚ್ಚಿನವರ ದೇಹದಲ್ಲಿ ಊನತೆಯಿದ್ದರೂ ಮಾನಸಿಕವಾಗಿ ಸದೃಢವಾಗಿರುತ್ತಾರೆ, ಆದೇ ರೀತಿ ದೈಹಿಕವಾಗಿ ಸಮರ್ಥರಾಗಿದ್ದೂ ಮಾನಸಿಕವಾಗಿ ಅಸ್ವಸ್ಥತೆ ಇರುವ ಜನರು ನಮ್ಮ ನಡುವೆ ಇರುತ್ತಾರೆ. ಆದರೆ ಜನರಲ್ಲಿ ಮಾನಸಿಕ ಅಸ್ವಸ್ಥತೆಯ ಬಗ್ಗೆ ಹಾಗೂ ಮಾನಸಿಕ ಚಿಕಿತ್ಸೆಯನ್ನು ಪಡೆದುಕೊಳ್ಳುವ ಬಗ್ಗೆ ಜನರಲ್ಲಿ ಕೀಳರಿಮೆಯಿದೆ, ಇದು ಮಾನಸಿಕ ಅಸ್ವಸ್ಥತೆಯ ಚಿಕಿತ್ಸೆಯ ವಿಚಾರದಲ್ಲಿ ದೊಡ್ಡ ತೊಡಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಕ್ಷಮ ದಕ್ಷಿಣಕನ್ನಡ ಘಟಕದ ಅಧ್ಯಕ್ಷ ರಾಜಶೇಖರ ಭಟ್ ಕಾಕುಂಜೆ ಮಾತನಾಡಿ ದಿವ್ಯಾಂಗರನ್ನು ಸಮಾಜ ಸಮಾನ ದೃಷ್ಟಿಯಿಂದ ನೋಡಬೇಕು ಮತ್ತು ಅವರಿಗೆ ಅವಕಾಶಗಳನ್ನು ಕಲ್ಪಿಸಿಕೊಡಬೇಕೆಂದು ವಿನಂತಿ ಮಾಡಿದರು.ನಮ್ಮ ಜನರು ಅಮೇರಿಕಾ ಸಿಂಗಾಪುರಗಳಂತಹ ದೇಶಗಳಲ್ಲಿ ದಿವ್ಯಾಂಗರಿಗೆ ಒದಗಿಸಲಾಗಿರುವ ಸೌಲಭ್ಯಗಳ ಬಗ್ಗೆ ಹೊಗಳುತ್ತಾರೆ, ಆದರೆ ಅದೇ ಜನರು ಅವರ ಅಕ್ಕಪಕ್ದದ ಮನೆಗಳಲ್ಲಿರುವ ದಿವ್ಯಾಂಗ ಜನರಿಗೆ ಸಹಾಯ ಹಸ್ತ ಚಾಚಲು ಮೀನ ಮೇಷ ಮಾಡುತ್ತಾರೆ. ದಿವ್ಯಾಂಗರು ತಮ್ಮ ಊನತೆಯನ್ನು ಮೀರಿ ಸಾಧಿಸಬಲ್ಲರು ಎಂಬುದನ್ನು ಸಾಮಾನ್ಯ ಜನರಿಗೆ ತೋರಿಸಿಕೊಡುವ ಉದ್ದೇಶದಿಂದ ಸಕ್ಷಮದ ವತಿಯಿಂದ ದಿವ್ಯಾಂಗ ಸಾಧಕರನ್ನು ಗುರುತಿಸಿ, ಗೌರವಿಸುವುದು ಕಾರ್ಯಕ್ರಮದ ಮುಖ್ಯ ಭಾಗ. ದಿವ್ಯಾಂಗತೆಯನ್ನು ಮೀರಿ ಬಹುಮುಖ ಸಾಧನೆ ಮಾಡಿರುವ ಅಜಯ್ ಪಿ ರಾವ್ ಅವರನ್ನು ಸಕ್ಷಮದ ವತಿಯಿಂದ ಗೌರವಿಸಲಾಯಿತು.
ಮಂಗಳೂರಿನ MRW ಶ್ರೀ ಜಯಪ್ರಕಾಶ್ ಅವರು ಇಂತಾ ಕಾರ್ಯಕ್ರಮಗಳು ನಿರಂತರ ಆಗಬೇಕು ಮತ್ತು ತಮ್ಮ ಸಹಕಾರ ಸದಾ ಇದೆಯೆಂಬ ಭರವಸೆಯನ್ನು ನೀಡಿದರು.
ಸಕ್ಷಮ ದ.ಕ. ಜಿಲ್ಲಾ ಉಪಾಧ್ಯಕ್ಷ ಹಾಗೂ ವಿಕಾಸಂ ಸೇವಾ ಫೌಂಡೇಶನ್, ಬಿ ಸಿ ರೋಡು ಇದರ ಸಹ ಸಂಸ್ಥಾಪಕ ಗಣೇಶ್ ಭಟ್ ವಾರಣಾಸಿ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.ಸಕ್ಷಮ ಸದಸ್ಯೆ ಶ್ರೀಮತೀ ಗೀತಾ ಲಕ್ಷ್ಮೀಶ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಕ್ಷಮ ಕಜಾಂಜಿ ಸುರೇಶ್ ರಾವ್ ಸಕ್ಷಮ ಗೀತೆ ಹಾಡಿದರು,
ಸಕ್ಷಮ ಕಾರ್ಯದರ್ಶಿ ಹರೀಶ್ ಪ್ರಭು ವಂದನಾರ್ಪಣೆಗೈದರು. ಕುಮಾರಿ ಅನುಷಾ ಭಟ್ ಕಾಕುಂಜೆ ಪ್ರಾರ್ಥನೆ ನಡೆಸಿಕೊಟ್ಟರು.
ಪ್ರಸಿದ್ಧ ಮನೋತಜ್ಞ ಡಾ ಸತೀಶ್ ರಾವ್, ಹೊಸದಿಗಂತ ಮುದ್ರಣದ CEO ಪ್ರಕಾಶ್ ಪಿ ಎಸ್, NSS ಜಿಲ್ಲಾ ಸಂಚಾಲಕರಾದ ಪ್ರೋ ಶೇಷಪ್ಪ ಅಮೀನ್, ಉಷಾ ಫೈರ್ ಸಂಸ್ಥೆಯ ಮಾಲಿಕರಾದ ಭಗವಾನ್ ದಾಸ್, APD ಸಂಸ್ಥೆಯ ವಿನಾಯಕ ಕಿಣಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕೆನರಾ ಕಾಲೇಜಿನ ಎನ್ ಎಸ್ ಎಸ್ ಘಟಕದ ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಭಾಗವಹಿಸಿದ್ದರು.