
NOTE: ಜ್ಞಾನದ ಜ್ಯೋತಿ ಬೆಳಗೋಣ - ಕೊರೊನಾ ಲಾಕ್ ಡೌನ್ ಮರೆಯದಿರೋಣ
ಹರೀಶ ಮಾಂಬಾಡಿ
ಕೊರೊನಾ ಪ್ರಮಾಣ ಇಳಿಮುಖವಾಗಿ ಮುಗಿದೇ ಹೋಯಿತು ಎಂಬಂತಾಯಿತು. ಅದರ ನಂತರ ಹಲವಾರು ಸನ್ನಿವೇಶಗಳು ನಡೆದವು. ವರ್ಷಗಳು ಉರುಳಿದವು. ಈಗ 2025 ನಾವು ಕೊರೊನಾದ ಜೊತೆ ಸಾರ್ವಜನಿಕವಾಗಿ ಯಾವ ರೀತಿ ವರ್ತಿಸಬೇಕು ಎಂಬುದನ್ನು ಮರೆಯುತ್ತಿದ್ದೇವೆ. ಕೊರೊನಾ ಬಂದಾಗ ಆಡಳಿತ ಸಾರಿ ಸಾರಿ ಹೇಳಿದ್ದು ಒಂದೇ ಸಾರ್ವಜನಿಕ ಸ್ಥಳದಲ್ಲಿ ಉಗುಳಬೇಡಿ.ಇದಕ್ಕೆವಿರುದ್ಧವಾಗಿ ಅದನ್ನೇ ಅಕ್ಷರಶಃ ಪಾಲಿಸುತ್ತೇವೆ ಎಂದು ಹಠ ತೊಟ್ಟರೆ ಏನು ಮಾಡುವುದು? ವಿದೇಶಗಳಲ್ಲಾದರೆ ತೆಪ್ಪಗೆ ಅವರು ಹೇಳಿದ ಕಾನೂನನ್ನೆಲ್ಲಾ ಪಾಲಿಸುವ ನಾವು ಊರಲ್ಲಿ ತದ್ವಿರುದ್ಧ.
ಇದು ಕೊರೊನಾ ಎಂಬ ಹೆಸರು ಕಾಣಿಸಿಕೊಳ್ಳುವ ಮೊದಲೂ ಇದ್ದ ಪದ್ಧತಿ. ಲಾಕ್ ಡೌನ್ ಬಂದಾಗ ಜನರಲ್ಲಿ ಜಾಗೃತಿ ಮೂಡಿತೇನೋ ಎಂದು ಭಾವಿಸಿದರೆ ಉಹುಂ.. ಇಲ್ಲ. ಬೀದಿ ಬೀದಿಗಳಲ್ಲಿ ಕಸ ಎಸೆಯುವುದು, ಉಗುಳುವುದು ಮೊದಲಿನಂತಾಯಿತು. ಶಾಲೆ, ಕಾಲೇಜುಗಳಿಲ್ಲ ಎಂಬುದನ್ನು ಬಿಟ್ಟರೆ ಈಗೆಲ್ಲವೂ ಮೊದಲಿನಂತೆ. ನಾವು ಖರೀದಿ ಮಾಡುವ 10 ರೂ ಪೆನ್ ಗೂ ತೆರಿಗೆ ಕಟ್ಟುತ್ತೇವೆ. ಇಂಥ ಸಣ್ಣ ತೆರಿಗೆ ಹಣವೇ ಸಹಸ್ರ ಲಕ್ಷ, ಕೋಟಿಗಳಾಗುತ್ತವೆ. ಇದೇ ತೆರಿಗೆ ಹಣವನ್ನು ‘ಬಿಡುಗಡೆ’ ಮಾಡಲಾಗುತ್ತದೆ. ತಮ್ಮ ಪಾಡಿಗೆ ನಿಯತ್ತಾಗಿ ತೆರಿಗೆ ಕಟ್ಟಿ, ಸರ್ಕಾರ ಸೂಚಿಸಿದ್ದೆಲ್ಲವೂ ಪಾಲಿಸಿ, ತಮ್ಮಷ್ಟಕ್ಕೆ ವಾಸಿಸುವ ನಾಗರಿಕರಾದವರು ನಾವು, ನಿಯಮಗಳನ್ನೂ ಪಾಲಿಸಬೇಕಲ್ಲವೇ? ಈಗ ತಲೆ ಮೇಲೆ ಕೈ ಇಟ್ಟು ನೋಡುವ ಪರಿಸ್ಥಿತಿ. ಸ್ವಚ್ಛತೆಗೇ ನಾವು ಕಟ್ಟಿದ ತೆರಿಗೆ ಹಣವನ್ನು ಬಳಸಬೇಕು..
ಕೊರೊನಾದ ಬದಲು ಇನ್ಯಾವುದೋ ರೋಗದ ಹೆಸರು ಬಿತ್ತರವಾಗುತ್ತಿದೆ. ಯಾವುದಾದರೂ ಗಂಡಾಂತರ ಬರಬಹುದು ಎಂಬ ಪ್ರಜ್ಞೆ ಅಗತ್ಯ.ಇನ್ನೊಂದು ಲಾಕ್ ಡೌನ್ ನಮಗೆ ಬೇಡ. ನಮ್ಮ ಬದುಕಿನ ಶೈಲಿಯನ್ನು ಬದಲಾಯಿಸೋಣ. ನಾನು ಒಂದು ಮಾತು ಹೇಳಿದರೆ, ಸಾವಿರಾರು ಜನರು ಕೇಳುತ್ತಾರೆ ಎಂದು ಹೇಳಿಕೊಳ್ಳುವವರು ಇಂದು ಮುಂದೆ ಬಂದು ಜನರಲ್ಲಿ ಆತ್ಮವಿಶ್ವಾಸ ತುಂಬುವ ಕಾರ್ಯ ಮಾಡಿದರೆ ಖಂಡಿತವಾಗಿಯೂ ಇದು ಸಾಧ್ಯ. ಜ್ಞಾನದ ಜ್ಯೋತಿ ಬೆಳಗಲಿ.