-->
UDUPI: ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ: ಉಡುಪಿ ಡಿ.ಸಿ. ಸ್ವರೂಪ ಸೂಚನೆ

UDUPI: ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ: ಉಡುಪಿ ಡಿ.ಸಿ. ಸ್ವರೂಪ ಸೂಚನೆ

 



ಉಡುಪಿ ಜಿಲ್ಲೆಯಲ್ಲಿ ಹೆಚ್ಚು ಹೆಚ್ಚು ಕೈಗಾರಿಕಾ ಘಟಕಗಳನ್ನು ಸ್ಥಾಪಿಸುವುದರೊಂದಿಗೆ ಸ್ಥಳೀಯ ಜನರಿಗೆ ಉದ್ಯೋಗ ಅವಕಾಶಗಳು ಲಭಿಸುವಂತೆ ಕಾರ್ಯಪ್ರವೃತ್ತರಾಗಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಸೂಚನೆ ನೀಡಿದರು.

 

ಗುರುವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೈಗಾರಿಕಾ ಸ್ಪಂದನ ಸಮಿತಿ ಸಭೆ, ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ, ರಫ್ತು ಉತ್ತೇಜನ ಸಮಿತಿ ಸಭೆ ಹಾಗೂ ಪ್ರಧಾನಮಂತ್ರಿಯವರ ಉದ್ಯೋಗ ಸೃಜನ ಯೋಜನೆಯ ಡಿ.ಎಲ್.ಎಂ.ಸಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

 

ಹೆಬ್ರಿ ತಾಲೂಕಿನ ಶಿವಪುರದಲ್ಲಿ ೭೪.೮೪ ಎಕ್ರೆ, ಕೆರೆಬೆಟ್ಟುವಿನಲ್ಲಿ ೩೮.೭೫ ಎಕ್ರೆ, ಕಾರ್ಕಳದ ನಿಟ್ಟೆಯಲ್ಲಿ ೫೦.೪೨ ಎಕ್ರೆ ಹಾಗೂ ಬ್ರಹ್ಮಾವರ ತಾಲೂಕಿನ ಉಪ್ಪೂರು ೧೦೧.೧೯ ಎಕ್ರೆ ಪ್ರದೇಶದಲ್ಲಿ ಹೊಸ ಕೈಗಾರಿಕಾ ಪ್ರದೇಶ ನಿರ್ಮಾಣ ಮಾಡಲು ಭೂ ಸ್ವಾಧೀನ ಸೇರಿದಂತೆ ಮತ್ತಿತರ ಪ್ರಕ್ರಿಯೆಗಳನ್ನು ಆದ್ಯತೆಯ ಮೇಲೆ ತ್ವರಿತವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

 

ಡಾ. ಸರೋಜಿನಿ ಮಹಿಷಿ ವರದಿ ಅನ್ವಯ ಕೈಗಾರಿಕಾ ಘಟಕಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ಅವಕಾಶ ಕಲ್ಪಿಸಬೇಕು. ಜಿಲ್ಲೆಯ ಕೈಗಾರಿಕೆಗಳಲ್ಲಿ ಡಿ ವರ್ಗದ ಹುದ್ದೆಗಳಿಗೆ ಯಾವುದೇ ರೀತಿಯ ವಿದ್ಯಾರ್ಹತೆ ಇಲ್ಲದಿದ್ದರೂ ಸಹ ನೇಮಕ ಮಾಡಿಕೊಳ್ಳಬೇಕು. ಆದರೆ ಇದು ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಬಗ್ಗೆ ಕೈಗಾರಿಕೆಗಳ ಮಾಲೀಕರು ಹೆಚ್ಚು ಜಾಹೀರಾತು ಪಡಿಸಿ, ನೇಮಕಾತಿಯನ್ನು ಹೆಚ್ಚಿಸುವ ಪ್ರಯತ್ನ ಮಾಡಬೇಕು ಎಂದರು.

 ಬೆಳಪು ಕೈಗಾರಿಕಾ ಪ್ರದೇಶದ ಸಂಪರ್ಕ ರಸ್ತೆ ವಿಸ್ತರಣೆಗೆ ಅಗತ್ಯವಿರುವ ಭೂಮಿಯ ಭೂ ಸ್ವಾಧೀನ ಪ್ರಕ್ರಿಯೆ ಕಾರ್ಯವು ನಿರೀಕ್ಷಿತ ಮಟ್ಟದ ಪ್ರಗತಿಯಾಗಿರುವುದಿಲ್ಲ. ಕಾರ್ಯವನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು ಎಂದ ಅವರು, ಭೂ ಪರಿಹಾರ ಪಡೆಯಲು ಅನಾಸಕ್ತಿ ತೋರಿರುವ ಭೂ ಮಾಲೀಕರಿಗೆ ಸಂಬಂಧಿಸಿದ ಪರಿಹಾರ ಮೊತ್ತವನ್ನು ನ್ಯಾಯಾಲಯದಲ್ಲಿ ಠೇವಣಿಯಿಟ್ಟು ಮುಂದಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

 

  ಶಿವಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಮೂಲ ಮಂಜೂರಾತಿದಾರರು ನಿವೇಶನಗಳನ್ನು ಇತರರಿಗೆ ಲೀಸ್ ಆಧಾರದ ಮೇಲೆ ನೀಡಿದ್ದು, ಅವರುಗಳು ಆರ್.ಎಂ.ಸಿ ಘಟಕಗಳನ್ನು ಪ್ರಾರಂಭಿಸಲು ಯಾವುದೇ ರೀತಿಯ ಅನುಮತಿಯನ್ನು ಪಡೆಯದೇ ಚಟುವಟಿಕೆಗಳನ್ನು ನಡೆಸುತ್ತಿರುತ್ತಾರೆ. ಇದರಿಂದಾಗಿ ವಾಯುಮಾಲಿನ್ಯ, ಜಲಮಾಲಿನ್ಯ ಸೇರಿದಂತೆ ಮತ್ತಿತರ ಸಮಸ್ಯೆಗಳು ಉಂಟಾಗಿವೆ. ಇವುಗಳಿಗೆ ಕಡಿವಾಣ ಹಾಕಬೇಕು ಎಂದ ಅವರು, ಇವುಗಳಿಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೀಡಿರುವ ಅನುಮತಿಯನ್ನು ರದ್ದುಪಡಿಸಲು ಕ್ರಮ ಕೈಗೊಳ್ಳಬೇಕು ಎಂದರು.

 

 ಪ್ರಧಾನಮಂತ್ರಿಯವರ ಉದ್ಯೋಗ ಸೃಜನ ಯೋಜನೆಯ ಫಲಾನುಭವಿಗಳ ೫೫೮ ಘಟಕಗಳಿಗೆ ೨೦೨೫.೧೬ ಲಕ್ಷ ರೂ. ನಷ್ಟು ಮಾರ್ಜಿನ್ ಹಣ ಬಿಡುಗಡೆಯಾಗಬೇಕಾಗಿತ್ತು. ಆದರೆ ವರೆಗೆ ಪೈಕಿ ೧೭೧ ಘಟಕಗಳಿಗೆ ೫೭೦.೧೨ ಲಕ್ಷ ರೂ. ನಷ್ಟು ಬಿಡುಗಡೆಯಾಗಿದೆ. ಬಾಕಿ ಉಳಿದ ೩೮೭ ಘಟಕಗಳಿಗೆ ೧೪೫೫.೦೪ ಲಕ್ಷ ರೂ. ನಷ್ಟು ಮಾರ್ಜಿನ್ ಹಣ ನೀಡಲು ಕ್ರಮವಹಿಸಬೇಕು ಎಂದರು.

 

 ಕೈಗಾರಿಕೆಗಳನ್ನು ಸ್ಥಾಪಿಸಲು ಬಂದಂತಹ ಅರ್ಜಿಗಳನ್ನು ಬ್ಯಾಂಕ್ ಅಧಿಕಾರಿಗಳು ನಿಯಮಾನುಸಾರ ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎಂದ ಅವರು ಹೊಸದಾಗಿ ಸಣ್ಣ ಕೈಗಾರಿಕಾ ಘಟಕಗಳನ್ನು ಸೃಜನಿಸಲು ಉತ್ತೇಜಿಸಬೇಕು ಎಂದರು.

 

 ಜಿಲ್ಲೆಯಿಂದ ಮೀನುಗಾರಿಕೆ ಉತ್ಪನ್ನಗಳು, ಗೋಡಂಬಿ, ಕಾಫಿಬೀನ್, ನೈಲಾನ್, ಫಿಶ್‌ನೆಟ್, ಎಲ್..ಡಿ ಕಂಟೈನರ್‌ಗಳು, ಪಿ.ಪಿ, ಪಿಬ್ಕ್ ಬ್ಯಾಗ್ಸ್ ಸೇರಿದಂತೆ ಮತ್ತಿತರ ಉತ್ಪನ್ನಗಳು ವಿದೇಶಗಳಿಗೆ ರಫ್ತು ಆಗುತ್ತಿವೆ. ಇತರೆ ಉತ್ಪನ್ನಗಳು ರಫ್ತಿಗೆ ಉತ್ತೇಜಿಸಬೇಕು ಎಂದ ಅವರು, ಮೀನಿನ ಉತ್ಪನ್ನಗಳ ರಫ್ತು ಹೆಚ್ಚಿದೆ. ಎಲ್ಲಾ ಉತ್ಪನ್ನಗಳ ರಫ್ತು ಪ್ರಮಾಣವನ್ನು ಹೆಚ್ಚಿಸಲು ರಫ್ತುದಾರರು ಸೇರಿದಂತೆ ಮತ್ತಿತರ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡಂತಹ ಸಭೆಯನ್ನು ನಡೆಸಿ, ರಫ್ತನ್ನು ಹೆಚ್ಚಿಸಲು ಮುಂದಾಗಬೇಕು ಎಂದು ಕೈಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

 

 ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ವಿ ನಾಯಕ್, ಸಣ್ಣ ಕೈಗಾರಿಕಾ ಸಂಘದ ಜಿಲ್ಲಾ ಅಧ್ಯಕ್ಷ ಹರೀಶ್ ಕುಂದರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಸೀತಾರಾಮ ಶೆಟ್ಟಿ, ಕೃಷಿ ಇಲಾಖೆಯ ಉಪನಿರ್ದೇಶಕ ಚಂದ್ರಶೇಖರ್ ನಾಯ್ಕ್, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು, ಜಿಲ್ಲೆಯ ಸಣ್ಣ ಕೈಗಾರಿಕಾ ಉದ್ದಿಮೆದಾರರು ಹಾಗೂ ಮತ್ತಿತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ