
Mangalore: ಮಯೂರ ಪ್ರತಿಷ್ಠಾನ ಮಂಗಳೂರು: ಪ್ರಥಮ ವಾರ್ಷಿಕೋತ್ಸವ, ಮಯೂರಯಾನ -1
Sunday, August 10, 2025
ಯಕ್ಷಗುರು ರಕ್ಷಿತ್ ಶೆಟ್ಟಿ ಪಡ್ರೆ ಶಿಷ್ಯ ವೃಂದದ ನೂತನ ಯಕ್ಷ ವೇಷಭೂಷಣ ಉದ್ಘಾಟನೆ
ಮಯೂರ ಪ್ರತಿಷ್ಠಾನ ಮಂಗಳೂರು ಇದರ ಪ್ರಥಮ ವಾರ್ಷಿಕೋತ್ಸವ ಮಯೂರಯಾನ-1ಹಾಗೂ ಯಕ್ಷ ಗುರು ರಕ್ಷಿತ್ ಪಡ್ರೆ ಶಿಷ್ಯವೃಂದದ ನೂತನ ಯಕ್ಷವೇಷಭೂಷಣ ಉದ್ಘಾಟನಾ ಕಾರ್ಯಕ್ರಮ ಕಟೀಲು ರಥಬೀದಿ ಶ್ರೀ ಸರಸ್ವತಿ ಸದನದಲ್ಲಿ ನಡೆಯಿತು.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆನುವಂಶಿಕ ಅರ್ಚಕ ಹರಿದಾಸ ಆಸ್ರಣ್ಣ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಆಶೀರ್ವಚನ ನೀಡಿ ಮಾತನಾಡಿ, ಪರಂಪೆರೆಯನ್ನು ಬಿಂಬಿಸುವ ಯಕ್ಷಗಾನದ ಆಹಾರ್ಯವನ್ನು ಮುಂದುವರೆಸುವ ಕಲೆಯನ್ನು ಮಕ್ಕಳಿಗೆ ಕಲಿಸಿದಾಗ ಭಾರತೀಯ ಸಂಸ್ಕೃತಿ ಎಂಬುವುದು ಯಕ್ಷಗಾನದಿಂದ ಉಳಿಯಲು ಸಾಧ್ಯ.ಅದನ್ನು ತಲುಪಿಸುವಲ್ಲಿ ಯಕ್ಷಗುರುಗಳು ಪ್ರಯತ್ನಿಸಬೇಕು ಎಂದು ಹೇಳಿದರು.
ಅಧ್ಯಯನ, ಹಿರಿಯ ಕಲಾವಿದರು ಕಲೆಯನ್ನು ಬೆಳೆಸಿದ ರೀತಿ ಯಕ್ಷಗಾನದ ನಡೆ ಹೀಗೆ ಪರಂಪರೆಯನ್ನು ಗಮನಿಸಿ ಯುವ ಕಲಾವಿದರು ಬೆಳೆಯಬೇಕು ಎಂದು ಅವರು ನುಡಿದರು.
ಹಿರಿಯ ನ್ಯಾಯವಾದಿ, ಮಯೂರ ಪ್ರತಿಷ್ಠಾನದ ಅಧ್ಯಕ್ಷ ಪಿ.ಸದಾಶಿವ ಐತಾಳ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಉನ್ನತ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಯಕ್ಷಗಾನದಲ್ಲಿ ತೊಡಗಿಸಿಕೊಂಡಿರುವುದು ಸಂತಸದಾಯಕವಾಗಿದೆ. ಯಕ್ಷಗಾನವನ್ನು ಉಳಿಸಿ, ಬೆಳೆಸುವಲ್ಲಿ ಯುವ ಜನತೆಯ ಕೊಡುಗೆ ಅಮೂಲ್ಯವಾಗಿದೆ ಎಂದರು.
ಪಣಂಬೂರು ಪಿ.ವಿ.ಐತಾಳ ಇಂಗ್ಲೀಷ್ ಯಕ್ಷಗಾನ ಬಳಗದ ಸಂಚಾಲಕ ಪಿ.ಸಂತೋಷ್ ಐತಾಳ, ನಿಡ್ಡೋಡಿ ಜ್ಞಾನರತ್ನ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಭಾಸ್ಕರ ದೇವಸ್ಯ, ಮಂಗಳೂರು ಯಕ್ಷ ಮಂಜೂಷ ನಿರ್ದೇಶಕಿ ವಿದ್ಯಾ ಕೂಳ್ಯೂರು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಯಕ್ಷಗಾನ ಹಿಮ್ಮೇಳ ಕಲಾವಿದರಾದ ಚೈತನ್ಯಕೃಷ್ಣ ಪದ್ಯಾಣ ಹಾಗೂ ಪ್ರಸಾಧನ ಕಲಾವಿದ ಮೋಹಿನಿ ಕಲಾಸಂಪದ ಸಂಸ್ಥೆಯ ಗಂಗಾಧರ ಡಿ.ಶೆಟ್ಟಿಗಾರ್ ಅವರಿಗೆ ಮಯೂರಯಾನ ಪ್ರಶಸ್ತಿ ಪ್ರದಾನ ಮಾಡಲಾಯಿತು. ನೂತನ ಯಕ್ಷ ವೇಷಭೂಷಣ ಸಿದ್ಧ್ದಪಡಿಸಿದ ಬೆನಕ ಕಲಾ ಆರ್ಟ್ಸ್ ಸಂಸ್ಥೆಯ ಕೃಷ್ಣ ಭಟ್ ದೇವಕಾನ, ಯಕ್ಷಗುರು ರಕ್ಷಿತ್ ಶೆಟ್ಟಿ ಪಡ್ರೆ ಅವರನ್ನು ಸಮ್ಮಾನಿಸಲಾಯಿತು. ಸಂಘ, ಸಂಸ್ಥೆಗಳನ್ನು ಗೌರವಿಸಲಾಯಿತು.
ಪ್ರತಿಷ್ಠಾನದ ಉಪಾಧ್ಯಕ್ಷ ಪ್ರಕಾಶ್ ಮೂಡಿತ್ತಾಯ ಅವರು ಸ್ವಾಗತಿಸಿದರು. ರತ್ನದೇವ್ ಪುಂಜಾಲಕಟ್ಟೆ ವಂದಿಸಿದರು. ಉಮೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೆ ಮುನ್ನ ಕಟೀಲು ಶ್ರೀ ದೇವಿ ಸನ್ನಿಧಿಯಲ್ಲಿ ಯಕ್ಷ ಸೇವೆ ನಡೆಯಿತು. ಬಳಿಕ ಪ್ರತಿಷ್ಠಾನ ಕಲಾವಿದರಿಂದ ಯಕ್ಷಗಾನ ಬಯಲಾಟ ಅಶ್ವಮೇಧ ಪ್ರದರ್ಶನ ನಡೆಯಿತು