COMMUNAL HARMONY: ಹಿಂದು ಯುವಕನ ಮದುವೆಗೆ ಮಸೀದಿಯಲ್ಲಿ ಇಫ್ತಾರ್: ಸೌಹಾರ್ದತೆಗೆ ಸಾಕ್ಷಿ
ಬಂಟ್ವಾಳ: ಹಿಂದು ಯುವಕನೋರ್ವನ ಮದುವೆಗೆ ಮಸೀದಿಯಲ್ಲಿ ಇಫ್ತಾರ್ ನೀಡುವ ಮೂಲಕ ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕು ಮತ್ತೊಮ್ಮೆ ಹಿಂದು ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾಯಿತು.
ಕೆಲ ತಿಂಗಳಿಂದ ನಡೆಯುತ್ತಿರುವ ವಿವಿಧ ಘಟನೆಗಳಿಂದ ಉಭಯ ಧರ್ಮೀಯರ ನಡುವೆ ಅಂತರ ಬೆಳೆಯುವ ಆತಂಕ ಇರುವ ಹೊತ್ತಿನಲ್ಲೇ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಬೈರಿಕಟ್ಟೆಯ ಗೆಳೆಯರ ಬಳಗದ ಸದಸ್ಯರಾದ ಚಂದ್ರಶೇಖರ ಅವರ ವಿವಾಹದ ಹಿನ್ನೆಲೆಯಲ್ಲಿ ಮುಸ್ಲಿಂ ಸ್ನೇಹಿತರಿಗೋಸ್ಕರವೇ ಅವರು ಮದುವೆಯ ಭಾಗವಾಗಿ ಇಫ್ತಾರ್ ಏರ್ಪಡಿಸುವ ಮೂಲಕ ಗಮನ ಸೆಳೆದರು. ತನ್ಮೂಲಕ ವಿಟ್ಲ ಸಮೀಪದ ಬೈರಿಕಟ್ಟೆ ಎಂಬ ಪುಟ್ಟ ಊರು ಸೌಹಾರ್ದಕ್ಕೆ ಸಾಕ್ಷಿಯಾಗುವ ಮೂಲಕ ಮಾನವ ಧರ್ಮವೇ ಶ್ರೇಷ್ಠವೆಂಬುದನ್ನು ಸಾಬೀತುಪಡಿಸಿತು.
ಗೆಳೆಯರ ಬಳಗ ಬೈರಿಕಟ್ಟೆಯ ಸದಸ್ಯರಾದ ಚಂದ್ರಶೇಖರ ಜೆಡ್ಡು ಅವರ ವಿವಾಹ ಸಮಾರಂಭ ಏಪ್ರಿಲ್ 24 ರಂದು ನಡೆದಿತ್ತು. ಆದರೆ ಮುಸ್ಲಿಂ ಸಮುದಾಯದವರಿಗೆ ರಂಝಾನ್ ತಿಂಗಳು ಆದ ಕಾರಣಕ್ಕಾಗಿ ಮದುವೆ ಊಟಕ್ಕೆ ಬರಲಾಗುತ್ತಿಲ್ಲ ಎಂಬ ಕಾರಣಕ್ಕಾಗಿ ಮದುಮಗ ಚಂದ್ರಶೇಖರ್ ತನ್ನ ಊರಿನ ಎಲ್ಲಾ ಮುಸ್ಲಿಂ ಬಂಧುಗಳಿಗೆ ಮದುವೆ ಪ್ರಯುಕ್ತ ಬೈರಿಕಟ್ಟೆ ಜುಮಾ ಮಸೀದಿಯಲ್ಲಿ ಇಫ್ತಾರ್ ಕೂಟವನ್ನು ಸೋಮವಾರ ಸಂಜೆ ಏರ್ಪಡಿಸಿದರು.
ಮಸೀದಿಯಿಂದ ಸನ್ಮಾನ:
ಇಫ್ತಾರ್ ಕೂಟ ಏರ್ಪಡಿಸಿದ ನವ ವಿವಾಹಿತ ಚಂದ್ರಶೇಖರ್ ಅವರಿಗೆ ಜಲಾಲಿಯಾ ಜುಮ್ಮಾ ಮಸೀದಿ ಮತ್ತು ಮವೂನತುಲ್ ಇಸ್ಲಾಂ ಯುವಜನ ಕಮಿಟಿ ಅದ್ಯಕ್ಷರು, ಪದಾಧಿಕಾರಿಗಳು, ಮಸೀದಿಯ ಧರ್ಮಗುರುಗಳ ಮುಖಾಂತರ ಸನ್ಮಾನ ಮಾಡಿದರು. ಸೌಹಾರ್ಧ ಇಫ್ತಾರ್ ಕೂಟಕ್ಕೆ ಆಗಮಿಸಿದ ಎಲ್ಲರೂ ನವ ದಂಪತಿಯ ಮುಂದಿನ ದಾಂಪತ್ಯ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.