SALETTUR ಕಲ್ಕಾರು: ವಾರ್ಷಿಕ ನೇಮ, ಧಾರ್ಮಿಕ ಕಾರ್ಯಕ್ರಮದಲ್ಲಿ ಸವಣೂರು ಸೀತಾರಾಮ ರೈಗಳಿಗೆ ಸನ್ಮಾನ
ಸಹಕಾರ, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿ, ಸವಣೂರು ಎಂಬ ಹಳ್ಳಿಯನ್ನು ಎಲ್ಲೆಡೆ ಗುರುತಿಸುವಂತೆ ಸಾಧನೆ ಮಾಡಿದ್ದಾರೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದ್ದಾರೆ.
ಮಂಚಿ ಗ್ರಾಮದ ಕಲ್ಕಾರು ಅಣ್ಣಪ್ಪ ಪಂಜುರ್ಲಿ, ಕಲ್ಲುರ್ಟಿ ಪಂಜುರ್ಲಿ ದೈವಸ್ಥಾನದಲ್ಲಿ ಕುಟುಂಬ ದೈವ-ದೇವರುಗಳ ವಾರ್ಷಿಕ ನೇಮ ಹಾಗೂ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ, ಸವಣೂರು ಸೀತಾರಾಮ ರೈ ಅವರಿಗೆ ಹುಟ್ಟೂರ ಸನ್ಮಾನ ನೆರವೇರಿಸಿ, ಆಶೀರ್ವಚನ ನೀಡಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅಧ್ಯಕ್ಷತೆ ವಹಿಸಿ ಮಾತನಾಡಿ, ಸೀತಾರಾಮ ರೈ ಅವರು ಹುಟ್ಟೂರನ್ನು ಮರೆಯದೇ ಕುಟುಂಬಕ್ಕೆ ಮಾರ್ಗದರ್ಶನ ಮಾಡಿ ಒಗ್ಗೂಡಿಸಿರುವುದು ಶ್ರೇಷ್ಠ ಸಂಸ್ಕೃತಿಯಾಗಿದೆ ಎಂದರು.
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ ಮಣ್ಣಿನ ಅಭಿಮಾನವನ್ನು ಇರಿಸಿಕೊಂಡು ಮುನ್ನಡೆದಾಗ ಯಶಸ್ಸು ಗಳಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ ಎಂದರು.
ಕರ್ನಾಟಕ ಲೋಕಸೇವಾ ಆಯೋಗದ ನಿವೃತ್ತ ಆಯುಕ್ತ ಟಿ. ಶ್ಯಾಮ್ ಭಟ್, ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ಡಿ. ಚಂದ್ರಹಾಸ ಶೆಟ್ಟಿ ರಂಗೋಲಿ, ಮಂಚಿ ಗ್ರಾಮ ಪಂಚಾಯತ್ ಅಧ್ಯಕ್ಷ ಮೋಹನದಾಸ ಶೆಟ್ಟಿ ಪುದ್ದೊಟ್ಟು, ಕಲ್ಕಾರು ಸೀತಾರಾಮ ಅಡ್ಯಂತಾಯ ಬೋಳಂತೂರುಗುತ್ತು ಮತ್ತಿತರರು ಉಪಸ್ಥಿತರಿದ್ದರು. ಪುರುಷೋತ್ತಮ ಭಂಡಾರಿ ಅಡ್ಯಾರು ಅವರು ಅಭಿನಂದನಾ ಭಾಷಣ ಮಾಡಿದರು. ಸಹಕಾರಿ ರತ್ನ ಕೆ.ಸೀತಾರಾಮ ರೈ ಸವಣೂರು - ಕಸ್ತೂರಿ ಕಲಾ ರೈ ದಂಪತಿಗೆ ಹುಟ್ಟೂರ ಸನ್ಮಾನ ಪ್ರದಾನ ಮಾಡಲಾಯಿತು. ಮಂಚಿ ವ್ಯವಸಾಯ ಸೇವಾ ಸಹಕಾರಿ ಸಂಘ, ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನ ಮತ್ತು ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಅವರನ್ನು ಗೌರವಿಸಲಾಯಿತು. ದಿ. ಪುಷ್ಪಾವತಿ ವಿಶ್ವನಾಥ ರೈ, ಕಲ್ಕಾರು-ಕೆಂಜಿಲ ಸ್ಮರಣಾರ್ಥ ವಿದ್ಯಾರ್ಥಿ ಪುರಸ್ಕಾರ ವಿತರಿಸಲಾಯಿತು.
ಭಾಗವತ ಪಟ್ಲ ಸತೀಶ್ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ರಾಧಾಕೃಷ್ಣ ಅಡ್ಯಂತಾಯ ಸಮ್ಮಾನಪತ್ರ ವಾಚಿಸಿದರು. ರಾಜೀವ ಶೆಟ್ಟಿ ಎಡ್ತೂರುಪದವು ವಂದಿಸಿದರು. ಪಾವನಾ ಪಿ ಅಡ್ಯಂತಾಯ ಆಶಯಗೀತೆ ಹಾಡಿದರು. ಪುಷ್ಪರಾಜ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.
ಧಾರ್ಮಿಕ ಕಾರ್ಯಕ್ರಮ: ಬ್ರಹ್ಮಶ್ರೀ ಬಡಾಜೆ ಗೋಪಾಲಕೃಷ್ಣ ತಂತ್ರಿ ಅವರ ನೇತೃತ್ವದಲ್ಲಿ ಸಾನ್ನಿಧ್ಯ ಶುದ್ಧ ಕಲಶ, ಗಣಪತಿಹೋಮ, ನಾಗತಂಬಿಲ, ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಶ್ರೀ ವೆಂಕಟರಮಣ ದೇವರ ಮುಡಿಪು ಕಟ್ಟುವ ಕಾರ್ಯ, ಅನ್ನಸಂತರ್ಪಣೆ, ಹನುಮಗಿರಿ ಮೇಳದವರಿಂದ ಯಕ್ಷಗಾನ ಬಯಲಾಟ, ದುರ್ಗಾ ನಮಸ್ಕಾರ ಪೂಜೆ, ದೈವಗಳಿಗೆ ನೇಮ ನಡೆಯಿತು.