ಅನಾಥ 13 ಮಕ್ಕಳಿಗಿಂದು ಗಮ್ಮತ್!! –ಪಿಲಿಕುಳಕ್ಕೆ ಪಿಕ್ನಿಕ್, ಸಂಜೆ ಡಿಸಿ ಜೊತೆ ಟೀಪಾರ್ಟಿ!!
ಮಂಗಳೂರಿನ ಬೋಂದೆಲ್ ನಲ್ಲಿರುವ ಸರ್ಕಾರಿ ಬಾಲಕರ ಬಾಲಮಂದಿರದಲ್ಲಿರುವ 13 ಅನಾಥ ಮಕ್ಕಳಿಗೆ ಮಂಗಳವಾರ ಅಕ್ಷರಶಃ ಗಮ್ಮತ್ತಿನ ದಿನ. ಖುದ್ದು ಜಿಲ್ಲಾಧಿಕಾರಿ ಸೂಚನೆಯಂತೆ ಪ್ರಸಿದ್ಧ ವಿಹಾರತಾಣ, ಪಿಲಿಕುಳಕ್ಕೆ ಪಿಕ್ನಿಕ್ ಆಯೋಜಿಸಿದರೆ, ಸಂಜೆ ಚಹದ ವೇಳೆ ಸ್ವತಃ ಡಿಸಿ ರಾಜೇಂದ್ರ ಕೆ.ವಿ. ಅವರೊಂದಿಗೆ ಬೆರೆತರು.
ಸರ್ಕಾರಿ ಬಾಲಕರ ಬಾಲ ಮಂದಿರ, ಬೋಂದೆಲ್ ಇಲ್ಲಿನ ಒಟ್ಟು 13 ಅನಾಥ ಮಕ್ಕಳನ್ನು ಪಿಲುಕೊಳ ನಿಸರ್ಗಧಾಮಕ್ಕೆ ಒಂದು ದಿನದ ಪ್ರವಾಸಕ್ಕೆ ಕರೆದುಕೊಂಡು ಹೋಗಲಾಯಿತು, ಮಕ್ಕಳು ಕರ್ನಾಟಕ ರಾಜ್ಯದ ಬೇರೆ ಬೇರೆ ಜಿಲ್ಲೆಯ ಮಕ್ಕಳಾಗಿದ್ದು ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ರಕ್ಷಣೆ, ಪೋಷಣೆಗಾಗಿ ಬಾಲಕರ ಬಾಲಮಂದಿರದಲ್ಲಿ ಆಶ್ರಯ ನೀಡಲಾಗಿದೆ, 6 ರಿಂದ 17 ವರ್ಷದ ವಯಸ್ಸಿವರಾಗಿರುವ, ಮಕ್ಕಳು ಅನಾಥರಾಗಿರುವುದರಿಂದ ರಜೆಯ ದಿನಗಳಲ್ಲಿ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುವವರು ಯಾರೂ ಇರುವುದಿಲ್ಲ, ಹೀಗಾಗಿ ಬಾಲಮಂದಿರದಲ್ಲೇ ಉಳಿದಿರುತ್ತಾರೆ.
ಈ ಸಮಯದಲ್ಲಿ ಮಕ್ಕಳು ಮನರಂಜನೆಗಾಗಿ ಪ್ರವಾಸ ಕೈಗೊಳ್ಳಲು ಜಿಲ್ಲಾಧಿಕಾರಿಗಳನ್ನು ಕೇಳಿದಾಗ ಜಿಲ್ಲಾಧಿಕಾರಿಗಳೇ ಸದರಿ ಪ್ರವಾಸಕ್ಕೆ ಬೇಕಾದ ವಾಹನದ ವ್ಯವಸ್ಥೆ, ಬೆಳಗಿನ ತಿಂಡಿ, ಮದ್ಯಾಹ್ನದ ಊಟ, ಹಾಗೂ ಸಂಜೆ ಉಪಾಹಾರದ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟು, ಸಂಜೆ ಉಪಾಹಾರದ ಸಮಯಕ್ಕೆ ಮಕ್ಕಳ ಜೊತೆ ತಾವೂ ಬಂದು ಮಕ್ಕಳ ಜೊತೆ ಮಾತನಾಡಿದರು. ನಿಸರ್ಗಧಾಮದ ಆಯುಕ್ತ ವೆಂಕಟೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿಗಳಾದ ಯಮುನಾ. ಡಿ. ಜಿಲ್ಲಾ ಮಕ್ಕಳ ರಕ್ಷಣಾ ವಿಭಾಗದ ಸಿಬ್ಬಂದಿಗಳಾದ ಸಂಧ್ಯಾ, ಸೌಭಾಗ್ಯ, ಪ್ರತಿಮಾ, ದೀಕ್ಷಾ, ಅಧೀಕ್ಷಕ ಶ್ರೀಧರ್, ಕೌನ್ಸಿಲರ್ ಪ್ರತಿಮಾ, ರಕ್ಷಕ ತಾರಾನಾಥ್, ಸ್ವಚ್ಛತೆಗಾರರಾದ ಲವೀನಾ, ಅಡುಗೆಯವರಾದ ಗೀತಾ ಹಾಗೂ ಬಾಲಕರ ಬಾಲ ಮಂದಿರದ ಸಿಬ್ಬಂದಿ ಜತೆಗಿದ್ದರು.