CRIME NEWS:ಹಿಂದು ಸಂಘಟನೆಗಳ ಆಕ್ರೋಶಕ್ಕೆ ಕಾರಣವಾದ ಕನ್ಯಾನದ ಬಾಲಕಿ ಸಾವು ಪ್ರಕರಣ
Thursday, May 5, 2022
ಬಂಟ್ವಾಳ ತಾಲೂಕಿನ ಕನ್ಯಾನ ಎಂಬಲ್ಲಿ ಬಾಲಕಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಸ್ಥಳೀಯ ಶಾಹುಲ್ ಹಮೀದ್ ಕಾರಣ ಎಂದು ಬಾಲಕಿ ತಂದೆ ಸಂಜೀವ ಆರೋಪಿಸಿದ್ದು, ಇದರ ಬೆನ್ನಿಗೆ ಹಿಂದು ಸಂಘಟನೆಗಳ ಮುಖಂಡರು ಬಾಲಕಿ ಮನೆಗೆ ಭೇಟಿ ನೀಡಿ ಆರೋಪಿ ಬಂಧನಕ್ಕೆ ಆಗ್ರಹಿಸಿವೆ. ಇದೊಂದು ವ್ಯವಸ್ಥಿತ ಕೊಲೆ, ಲವ್ ಜಿಹಾದ್ ಎಂದು ಇದೇ ವೇಳೆ ಮುಖಂಡ ಶರಣ್ ಪಂಪ್ ವೆಲ್ ಆರೋಪಿಸಿದ್ದಾರೆ.
ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಕಣಿಯೂರು ಎಂಬಲ್ಲಿ ಬುಧವಾರ ನೇಣು ಬಿಗಿದು ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿದ ಸ್ಥಿತಿಯಲ್ಲಿ ಕಂಡುಬಂದ ಪ್ರಕರಣಕ್ಕೆ ಸಂಬಂಧಿಸಿ, ಇದೊಂದು ವ್ಯವಸ್ಥಿತ ಕೊಲೆಯಾಗಿರಬಹುದು ಎಂಬ ಸಂಶಯವನ್ನು ವಿಶ್ವ ಹಿಂದು ಪರಿಷತ್ ವ್ಯಕ್ತಪಡಿಸಿದ್ದು, ಉನ್ನತ ತನಿಖೆಗೆ ಒತ್ತಾಯಿಸಿದೆ.
ವಿಶ್ವ ಹಿಂದು ಪರಿಷತ್ ನ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಕನ್ಯಾನದ ಕಣಿಯೂರಿನಲ್ಲಿರುವ ಬಾಲಕಿಯ ಮನೆಗೆ ಹಿಂದು ಸಂಘಟನೆಯ ಕಾರ್ಯಕರ್ತರೊಂದಿಗೆ ಭೇಟಿ ನೀಡಿ ಆತ್ಮಹತ್ಯೆಗಿಂತಲೂ ಇದೊಂದು ಕೊಲೆ ಎಂಬ ಸಂಶಯ ವ್ಯಕ್ತಪಡಿಸಿದ್ದಾರೆ. ಘಟನೆ ನಡೆದ ದಿನ ಅಂದರೆ ಬುಧವಾರ, ಮೃತ ಬಾಲಕಿಯ ತಂದೆ ಸ್ಥಳೀಯ ನಿವಾಸಿ ಶಾಹುಲ್ ಹಮೀದ್ ಎಂಬಾತನ ದುಷ್ಪ್ರೇರಣೆಯೇ ತನ್ನ ಮಗಳ ಸಾವಿಗೆ ಕಾರಣ ಎಂದು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಶಾಹುಲ್ ದುಷ್ಪ್ರೇರಣೆ ಎಂದು ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.