NEWS: ಕಾಂಗ್ರೆಸ್ ನಿಂದ ರಾಜಭವನ ಚಲೋ: ಸಿದ್ಧು, ಡಿಕೆಶಿ ಸಹಿತ ನಾಯಕರು, ಕಾರ್ಯಕರ್ತರ ಬಂಧನ
ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹಿತ ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ಗುರುವಾರ ಸಾವಿರಾರು ಮಂದಿ ರಾಜಭವನ್ ಚಲೋ ನಡೆಸಿ, ರಾಹುಲ್ ಅವರ ಇಡಿ ವಿಚಾರಣೆಯನ್ನು ವಿರೋಧಿಸಿದರು. ಈ ಸಂದರ್ಭ ರಾಜಭವನ ತಲುಪುವ ಮೊದಲೇ ಪೊಲೀಸರು ನಾಯಕರನ್ನು ಬಂಧಿಸಿದರು.
ಕೆಪಿಸಿಸಿ ಕಚೇರಿಯಿಂದ ಕಾಂಗ್ರೆಸ್ ನಾಯಕರು ಹಾಗೂ ಭಾರೀ ಸಂಖ್ಯೆಯ ಕಾರ್ಯಕರ್ತರು ರಾಜ್ ಭವನ್ ಚಲೋ ರ್ಯಾಲಿ ಆರಂಭಿಸಿದ್ದರು.ಕಾಂಗ್ರೆಸ್ ಪ್ರತಿಭಟನೆ ಹಿನ್ನೆಲೆಯಲ್ಲಿ ಬೆಂಗಳೂರಿನ ಕ್ವೀನ್ಸ್ ರೋಡ್- ಇಂಡಿಯನ್ ಎಕ್ಸ್ ಪ್ರೆಸ್, ಜಿಪಿಓ ಸಿಗ್ನಲ್, ಕ್ವೀನ್ಸ್ ರೋಡ್, ಇಂಡಿಯನ್ ಎಕ್ಸ್ ಪ್ರೆಸ್, ವಸಂತನಗರ, ಶಿವಾಜಿನಗರ, ಕೋಲ್ಸ್ಪಾರ್ಕ್, ನಂದಿದುರ್ಗ ರಸ್ತೆ, ವಿಧಾನಸೌಧ, ಕೆ ಆರ್ ಸರ್ಕಲ್ ಸೇರಿದಂತೆ ಬೆಂಗಳೂರಿನ ಹೃದಯ ಭಾಗದಲ್ಲಿ ಸಂಚಾರ ದಟ್ಟಣೆ ಎದುರಾಯಿತು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಪ್ರಜಾಪ್ರಭುತ್ವ ಮಾದರಿಯಲ್ಲಿ ಪ್ರತಿಭಟನೆ ನಡೆಸುವ ಸಂದರ್ಭ ಸಚಿವ ಸುಧಾಕರ್ ಅವರು ಕೋವಿಡ್ ನಿಯಮಗಳನ್ನು ನೆನಪಿಸುತ್ತಾರೆ ಇದು ಸರಿಯೇ ಎಂದರು.
ಪ್ರಮುಖ ನಾಯಕರ ಬಂಧನ ವೇಳೆ ತಳ್ಳಾಟ, ನೂಕಾಟ ನಡೆಯಿತು. ಪೊಲೀಸರು ವಾಹನಕ್ಕೆ ಕರೆದೊಯ್ಯಲು ಹರಸಾಹಸಪಟ್ಟರು. ಇದೇ ವೇಳೆ ಬಿಜೆಪಿ ವಿರೋಧಿ ಘೋಷಣೆಗಳನ್ನು ಕಾಂಗ್ರೆಸ್ ಮುಖಂಡರು ಕೂಗಿದರು.