
NEWS: ‘ಅಗ್ನಿ’ಪಥ್ ಗೆ ಅಗ್ನಿಪರೀಕ್ಷೆ: ರೈಲಿಗೆ ಬೆಂಕಿ ಹಚ್ಚಿ ಪ್ರತಿಭಟನೆ – ಏನಿದು ಯೋಜನೆ? ಯಾಕಿಷ್ಟು ಆಕ್ರೋಶ?
ನವದೆಹಲಿ: ಸೇನಾ ನೇಮಕಾತಿಗೆ ಸಂಬಂಧಿಸಿ ಕೇಂದ್ರ ಹೊರಡಿಸಿರುವ ಅಗ್ನಿಪಥ್ ಯೋಜನೆಗೆ ಹಲವೆಡೆ ಪ್ರಬಲ ಪ್ರತಿರೋಧಗಳು ವ್ಯಕ್ತವಾಗಿವೆ.
ಬುಧವಾರವೇ ಪ್ರತಿಭಟನೆಗಳು ಆರಂಭಗೊಂಡಿದ್ದು, ಗುರುವಾರ ಬಿಹಾರದ ಕೈಮೂರ್ ಜಿಲ್ಲೆಯ ಭಬುವಾ ರೋಡ್ ರೈಲು ನಿಲ್ದಾಣದಲ್ಲಿ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ನ ಕೋಚ್‌ಗೆ ಬೆಂಕಿ ಹಚ್ಚಲಾಗಿದೆ. ಪ್ರಯಾಣಿಕರು ರೈಲಿನಿಂದ ಇಳಿದ ನಂತರ ವಿದ್ಯಾರ್ಥಿಗಳ ಗುಂಪು ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ ಹಚ್ಚಿದ ಟೈರ್ ಎಸೆದಿದ್ದಾಗಿ ಸುದ್ದಿಮಾಧ್ಯಮಗಳು ವರದಿ ಮಾಡಿವೆ.
ನಾವಡ ರೈಲು ನಿಲ್ದಾಣ ಮತ್ತು ಪ್ರಜಾತಂತ್ರ ಚೌಕ್‌ನಲ್ಲಿ ಟೈರ್‌ಗಳನ್ನು ಸುಟ್ಟುಹಾಕಿದ್ದರೆ. ಗಯಾ - ಕೆಯುಲ್ ರೈಲು ವಿಭಾಗದ ಸಂಚಾರ ಅಸ್ತವ್ಯಸ್ತಗೊಂಡಿದೆ. ಹೌರಾ - ಗಯಾ ಎಕ್ಸ್‌ಪ್ರೆಸ್ ರೈಲ್ನ್ನು ವಾರ್ಸಾಲಿಗಂಜ್ ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ. ಜಹಾನಾಬಾದ್, ಛಾಪ್ರಾ ಮತ್ತು ನವಾಡ ಸೇರಿದಂತೆ ಬಿಹಾರದ ಹಲವಾರು ಪ್ರದೇಶಗಳಲ್ಲಿ ಹಿಂಸಾರೂಪಕ್ಕೆ ಪ್ರತಿಭಟನೆ ತಿರುಗಿದೆ. ಜಹಾನಾಬಾದ್ ರೈಲು ನಿಲ್ದಾಣದಲ್ಲಿ ಸಾವಿರಾರು ಯುವಕರು ಜಮಾಯಿಸಿ ಹಳಿ ತಡೆದು ಪ್ರತಿಭಟನೆ ನಡೆಸಿದರು. ಪಾಟ್ನಾ-ಗಯಾ ರಸ್ತೆ ಮಾರ್ಗ ಮತ್ತು ಪಾಟ್ನಾ-ಗಯಾ ಪ್ಯಾಸೆಂಜರ್ ರೈಲನ್ನು ತಡೆದರು.. ಪಾಟ್ನಾ-ಗಯಾ ಮುಖ್ಯ ರಸ್ತೆಯ ಕಾಕೋ ಮೋರ್‌ನಲ್ಲಿ ಪ್ರತಿಭಟನಾಕಾರರು ಜಮಾಯಿಸಿ ಟೈರ್‌ಗಳನ್ನು ಸುಟ್ಟು ಹಾಕಿದರು.
ಏಕೆ ಆಕ್ರೋಶ: ಕೇಂದ್ರವು ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ. ಅವರು ಅಗ್ನಿವೀರ್ರನ್ನು ನೇಮಿಸಿಕೊಳ್ಳುತ್ತಿಲ್ಲ. ನಾಲ್ಕು ವರ್ಷಗಳಿಂದ 'ಬಲಿ ಕಾ ಬಕ್ರಾ' ಅನ್ನು ನೇಮಿಸಿಕೊಳ್ಳುತ್ತಿದ್ದಾರೆ ಎಂದು ಉದ್ಯೋಗಾಕಾಂಕ್ಷಿಗಳ ಆರೋಪ. ಅಗ್ನಿಪಥ್ ನೇಮಕಾತಿ ಯೋಜನೆಯು ನಾಲ್ಕು ವರ್ಷಗಳ ಅವಧಿಗೆ ಒಪ್ಪಂದದ ಆಧಾರದ ಮೇಲೆ ಸೇನಾ ಅಧಿಕಾರಿಗಳ ನೇಮಕಾತಿಯನ್ನು ಪ್ರಸ್ತಾಪಿಸಿದೆ. ಇದು ಬೇಡ 15 ವರ್ಷಗಳ ಯೋಜನೆಯೇ ಇರಲಿ ಎಂದು ಸೇನಾ ಆಕಾಂಕ್ಷಿಗಳು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ.
ಅಗ್ನಿಪಥ ಯೋಜನೆ: ಯೋಜನೆಯಡಿ ಸಶಸ್ತ್ರ ಪಡೆಗಳಿಗೆ ಆಯ್ಕೆಯಾಗುವ ಯುವಕರು 4 ವರ್ಷಗಳವರೆಗೆ ಸೇನೆಯಲ್ಲಿ ಸೇವೆ ಸಲ್ಲಿಸಲಿದ್ದಾರೆ. ಅವರಿಗೆ ಆಕರ್ಷಕ ಸಂಬಳ, ಭತ್ಯೆಯನ್ನು ನೀಡಲಾಗುತ್ತದೆ. ಅವರ ನಿರ್ಗಮನದ ಬಳಿಕ ಪಿಂಚಣಿ ಸೌಲಭ್ಯವನ್ನೂ ಪಡೆಯಲಿದ್ದಾರೆ. ಅಗ್ನಿಪತ್ ಎನ್ನುವುದು ಸೈನಿಕರು, ವಾಯುಪಡೆಯ ಸಿಬ್ಬಂದಿ ಮತ್ತು ನೌಕಾಪಡೆಗೆ ಪ್ರವೇಶ ಪಡೆಯುವ ಬೃಹತ್ ನೇಮಕಾತಿ ಯೋಜನೆಯಾಗಿದೆ. ಸಶಸ್ತ್ರ ಪಡೆಗಳ ಸಾಮಾನ್ಯ ಕೇಡರ್‌ಗಳಲ್ಲಿ ಸೇವೆ ಸಲ್ಲಿಸಲು ಯುವಜನರಿಗೆ ಅವಕಾಶವಿದೆ. ಮಿಲಿಟರಿ ವ್ಯವಹಾರಗಳ ಇಲಾಖೆಯು ಯೋಜಿಸಿರುವ ಈ ಯೋಜನೆಯಡಿ ಸೇವೆ ಸಲ್ಲಿಸಲು ಬಯಸುವ ಯುವಕರು 17.5 ವರ್ಷದಿಂದ 21 ವರ್ಷದೊಳಗಿನವರಾಗಿರಬೇಕು. 4 ವರ್ಷಗಳವರೆಗಿನ ಅವಧಿಗೆ ಮಾತ್ರ ಅವರನ್ನು ನೇಮಕ ಮಾಡಿಕೊಳ್ಳಲಾಗುವುದು. ನಿವೃತ್ತಿಯಾದ ಶೇ.75 ರಷ್ಟು ಸೈನಿಕರಿಗೆ 11-12 ಲಕ್ಷ ರೂಪಾಯಿ 'ಸೇವಾ ನಿಧಿ'ಯಾಗಿ ನೀಡಲಾಗುತ್ತದೆ. ಇದರೊಂದಿಗೆ ಕೌಶಲ ಪ್ರಮಾಣಪತ್ರ ಮತ್ತು ಅವರ ಮುಂದಿನ ಜೀವನಕ್ಕಾಗಿ ನೆರವಾಗಲು ಬ್ಯಾಂಕ್ ಸಾಲಗಳನ್ನೂ ಕೂಡ ನೀಡಲಾಗುತ್ತದೆ.
ವೇತನ ಎಷ್ಟು: 4 ವರ್ಷಗಳ ಅವಧಿಗೆ ನೇಮಕವಾಗು ಅಗ್ನಿವೀರರಿಗೆ ಆರಂಭಿಕವಾಗಿ 30 ಸಾವಿರ ರೂಪಾಯಿ ಸಂಬಳ ನಿಗದಿ ಮಾಡಲಾಗಿದೆ. ಇದು ಕೊನೆಗೆ 40 ಸಾವಿರ ತಲುಪಲಿದೆ. ನಿವೃತ್ತಿ ನಿಧಿಯಾಗಿ 5 ಲಕ್ಷ ರೂಪಾಯಿ ಪಡೆಯಲಿದ್ದಾರೆ. ಸೇವಾವಧಿಯಲ್ಲಿ ಅಂಗವೈಕಲ್ಯ ಉಂಟಾದರೆ 48 ಲಕ್ಷ ಜೀವವಿಮೆ, ಸಾವನ್ನಪ್ಪಿದಲ್ಲಿ ಹೆಚ್ಚುವರಿಯಾಗಿ ಎಕ್ಸ್ಗ್ರೇಷಿಯಾ 44 ಲಕ್ಷ ರೂಪಾಯಿ ಪಡೆದುಕೊಳ್ಳಲಿದ್ದಾರೆ.