NEWS: ಬೆಳ್ಳಂಬೆಳಗ್ಗೆ ರಾಜ್ಯದಾದ್ಯಂತ ಅಧಿಕಾರಿಗಳ ಮನೆ ಕದ ತಟ್ಟಿದ ಎಸಿಬಿ
ಶುಕ್ರವಾರ ರಾಜ್ಯದ 21 ಅಧಿಕಾರಿಗಳಿಗೆ ಶುಭ ಶುಕ್ರವಾರ ಆಗಿರಲಿಲ್ಲ. ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಬಂದ ದೂರಿನಂತೆ ರಾಜ್ಯದ ವಿವಿಧೆಡೆ ಇರುವ ಅಧಿಕಾರಿಗಳ ಮನೆ, ಕಚೇರಿ, ಸ್ನೇಹಿತರ ಮನೆಗಳಿಗೆ ಎಸಿಬಿ ಅಧಿಕಾರಿಗಳು ಏಕಕಾಲದಲ್ಲಿ ಬೆಳ್ಳಂಬೆಳಗ್ಗೆಯೇ ದಾಳಿ ನಡೆಸಿದ್ದಾರೆ.
ಸುಮಾರು 80 ಕಡೆ 300 ಅಧಿಕಾರಿಗಳು ದಾಳಿ ನಡೆಸಿ, ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿದರೆ, ಮನೆ ನೋಡಿ ಅಧಿಕಾರಿಗಳೂ ಬೆಚ್ಚಿಬಿದ್ದರು.. ಬೆಳಗ್ಗೆ ಆರು ಗಂಟೆಗೆ ದಾಳಿ ಆರಂಭಗೊಂಡಿತು. ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಸಂಬಂಧ ದೂರುಗಳು ಬಂದ ಹಿನ್ನೆಲೆ ದಾಳಿ ನಡೆದಿದೆ. ಬೆಂಗಳೂರು, ಉಡುಪಿ, ಕೊಪ್ಪಳ, ಬಾಗಲಕೋಟೆ ಸೇರಿದಂತೆ ವಿವಿಧೆಡೆ ದಾಳಿ ನಡೆಸಲಾಗಿದೆ.
ಬೆಳಗಾವಿಯ ಲೋಕೋಪಯೋಗಿ ಇಲಾಖೆಯಲ್ಲಿ ಅಧೀಕ್ಷಕ ಅಭಿಯಂತರನಾಗಿರುವ ಭೀಮರಾವ್ ಯಶವಂತ ಪವಾರ್ ಬಿವೈ ಪವಾರ್) ಮನೆಯ ಬಾತ್ ರೂಮ್‌ನಲ್ಲಿ ಲಕ್ಷ ಲಕ್ಷ ಹಣ ಸಿಕ್ಕಿದೆ. ಬೆಳಗಾವಿಯ ಐಜಿಆರ್ ಕಚೇರಿ ಜಿಲ್ಲಾ ರಿಜಿಸ್ಟ್ರಾರ್ ಮಧುಸೂದನ್, ಗದಗದ ಆರ್‌ಡಿಪಿಆರ್ ನ ಪಂಚಾಯತ್ ಗ್ರೇಡ್ 2ರ ಕಾರ್ಯದರ್ಶಿ ಪ್ರದೀಪ್ ಎಸ್ ಆಲೂರ್, ಬೀದರ್‌ನ ಕರ್ನಾಟಕ ಪಶುಸಂಗೋಪನೆ, ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಾಯಕ ಕಂಪ್ಟ್ರೋಲರ್ ಮೃತ್ಯುಂಜಯ ಚೆನ್ನಬಸವಯ್ಯ ತಿರಾನಿ, ರಾಣೆಬೆನ್ನೂರು ಯುಟಿಪಿ ಕಚೇರಿಯ ಚಂದ್ರಪ್ಪ ಸಿ ಹೋಲೆಕಾರ್ ಅವರ ಮನೆಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಪರಮೇಶ್ವರಪ್ಪ ಮನೆ, ಕಚೇರಿ ಮೇಲೂ ಎಸಿಬಿ ದಾಳಿ ನಡೆದಿದೆ. ಕೂಡ್ಲಿಗಿಯ ಸಣ್ಣ ನೀರಾವರಿ ಇಲಾಖೆಯ ಕಚೇರಿಯಲ್ಲಿ ಕರ್ತವ್ಯ ಮಾಡುತ್ತಿರುವ ಅಧಿಕಾರಿ ಪರಮೇಶ್ವರಪ್ಪಗೆ ಸೇರಿದ ಹಗರಿಬೊಮ್ಮನಹಳ್ಳಿ ಪಟ್ಟಣದ ವಾಸದ ಮನೆ, ಚಿತ್ರದುರ್ಗದ ವಿದ್ಯಾನಗರ ಬಡಾವಣೆಯ ಸ್ವಂತ ಮನೆ ಹಾಗೂ ಕಚೇರಿ ಮೇಲೆ ಪ್ರತ್ಯೇಕ ದಾಳಿ ಮಾಡಲಾಗಿದೆ.