POLITICAL ರಾಷ್ಟ್ರಪತಿ ಚುನಾವಣೆಗೆ ಒಮ್ಮತದ ಅಭ್ಯರ್ಥಿ: ಮಮತಾ ನೇತೃತ್ವದ ವಿಪಕ್ಷದ ಸಭೆಯಲ್ಲಿ ತೀರ್ಮಾನ
Wednesday, June 15, 2022
ನವದೆಹಲಿ:ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವಲ್ಲಿ ಸಭೆಯೊಂದು ದೆಹಲಿಯಲ್ಲಿ ಬುಧವಾರ ನಡೆದಿದ್ದು, ಮುಂಬರುವ ರಾಷ್ಟ್ರಪತಿ ಚುನಾವಣೆಗೆ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತೀರ್ಮಾನಿಸಿದೆ.
ಕಾರ್ಯತಂತ್ರ ರೂಪಿಸಲು ನಡೆದ ಸಭೆಯಲ್ಲಿ ಹಿರಿಯ ನಾಯಕ ಶರದ್ ಪವಾರ್ ಹೆಸರು ಮುಂಚೂಣಿಯಲ್ಲಿದ್ದರೂ ಅವರು ಅದನ್ನು ಒಪ್ಪದೆ ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ತಾನು ಜನರ ಜೊತೆಗೇ ಇರುವುದಾಗಿ ಹೇಳಿದ್ದಾರೆ.
ನಾವು ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸಲು ತೀರ್ಮಾನಿಸಿದ್ದೇವೆ. ಎಲ್ಲರೂ ನಮಗೆ ಬೆಂಬಲ ನೀಡಲಿದ್ದಾರೆ. ಇತರ ಪಕ್ಷಗಳನ್ನೂ ಸಂಪರ್ಕಿಸುತ್ತೇವೆ ಎಂದು ಬಳಿಕ ಸುದ್ದಿಗಾರರೊಂದಿಗೆ ತಿಳಿಸಿರುವ ಮಮತಾ ಬ್ಯಾನರ್ಜಿ, ಇದು ವಿಪಕ್ಷಗಳ ಒಕ್ಕೂಟದ ಶುಭಾರಂಭ ಎಂದಿದ್ದಾರೆ.ಮೂಲಗಳ ಪ್ರಕಾರ, ಮಮತಾ ಬ್ಯಾನರ್ಜಿ ಅವರು ಫಾರೂಕ್ ಅಬ್ದುಲ್ಲಾ, ಗೋಪಾಲಕೃಷ್ಣ ಗಾಂಧಿ ಹೆಸರನ್ನು ಸೂಚಿಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೂ ವಿಪಕ್ಷ ನಾಯಕರೊಂದಿಗೆ ಸಂಪರ್ಕದಲ್ಲಿದ್ದು, ಅಧ್ಯಕ್ಷೀಯ ಅಭ್ಯರ್ಥಿಗೆ ಹೆಸರು ಸೂಚಿಸಲು ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.