LIVE: ನರೇಂದ್ರ ಮೋದಿ ಮಂಗಳೂರಲ್ಲಿ, ಸಿಎಂ ಬೊಮ್ಮಾಯಿ ಏನಂದರು?
Friday, September 2, 2022
ಮಂಗಳೂರು, ಸೆಪ್ಟೆಂಬರ್ 02: ಕರಾವಳಿ ಅಭಿವೃದ್ಧಿಗೆ ಅತ್ಯಂತ ದೊಡ್ಡ ಶಕ್ತಿಯನ್ನು ಪ್ರಧಾನ ಮಂತ್ರಿಗಳು ತುಂಬಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಅವರು ಇಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ಪ್ರಧಾನಮಂತ್ರಿಗಳು ಬಹಳ ದಿನಗಳ ನಂತರ ಕರ್ನಾಟಕದ ಕರಾವಳಿ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದಾರೆ. ಬರುವಾಗ ಹಲವಾರು ಯೋಜನೆಗಳಿಗೆ ಮಂಜೂರಾತಿ ನೀಡಿದ್ದಾರೆ. 3800 ಕೋಟಿ ರೂ.ಗಳ ಯೋಜನೆಗಳ ಲೋಕಾರ್ಪಣೆ ಹಾಗೂ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಕರಾವಳಿಯ ಅಭಿವೃದ್ಧಿಗೆ ಪೂರಕವಾಗಿರುವ ಯೋಜನೆಗಳಾಗಿದ್ದು, ಆರ್ಥಿಕ ಚಟುವಟಿಕೆ ಮತ್ತು ಬಂದರುಗಳ ಸಾಮರ್ಥ್ಯ ಹಾಗೂ ವ್ಯವಹಾರಗಳನ್ನು ಹೆಚ್ಚಿಸುವ ಹಾಗೂ ಉದ್ಯೋಗವನ್ನು ವೃದ್ಧಿಸುವ ಯೋಜನೆಗಳಾಗಿವೆ. ಕರ್ನಾಟಕಕ್ಕೆ 100 ಆಳ ಸಮುದ್ರ ಮೀನುಗಾರಿಕೆ ದೋಣಿಗಳನ್ನು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮಂಜೂರು ಮಾಡಿದ್ದಾರೆ. ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿಸ್ತರಣೆ ಮಾಡಿದ್ದಾರೆ. ರಾಜ್ಯ ಸರ್ಕಾರವೂ ಹಲವಾರು ಯೋಜನೆಗಳನ್ನು ಈ ಭಾಗಕ್ಕೆ ಜಾರಿ ಮಾಡಿದ್ದು ಈ ಎಲ್ಲಾ ಯೋಜನೆಗಳಿಗೆ ಇಂದು ಚಾಲನೆ ದೊರೆಯಲಿದೆ ಎಂದರು.