-->
Tragedy in Himalaya ಸಾವೆಂಬ ಸಾವಿಗೆ ಹಿಮಾಲಯವನ್ನು ತೋರಿಸಲು ಹೋಗಿರುವೆಯಾ?

Tragedy in Himalaya ಸಾವೆಂಬ ಸಾವಿಗೆ ಹಿಮಾಲಯವನ್ನು ತೋರಿಸಲು ಹೋಗಿರುವೆಯಾ?

 

ಗಜಾನನ ಶರ್ಮಾ ಫೇಸ್ ಬುಕ್ ನಲ್ಲಿ ಬರೀತಾರೆ...

ರಕ್ಷಿತ್, ನಿನ್ನ ಸಾವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ...
ಸಾವೆಂಬ ಸಾವಿಗೆ ಹಿಮಾಲಯವನ್ನು ತೋರಿಸಲು ಹೋಗಿರುವೆಯಾ?
ಇಪ್ಪತ್ತೈದರ ಎಡಬಲದ, ಆರಡಿಗೂ ಮಿಕ್ಕ ಎತ್ತರದ, ಸದಾ ಮಗುವಿನಂತೆ ಮುಗುಳ್ನಗೆ ಚೆಲ್ಲುವ ಮುಗ್ಧ ಮುಖದ ರಕ್ಷಿತ್ ಮೊನ್ನೆ ಉತ್ತರಾಖಂಡದ ಉತ್ತರಕಾಶಿಯಲ್ಲಿ ನಡೆದ ಬೀಕರ ಹಿಮಪಾತಕ್ಕೆ ಸಿಲುಕಿ ಮಡಿದನೆಂಬ ಸಂಗತಿಯನ್ನು ಅರಗಿಸಿಕೊಳ್ಳಲು ನನ್ನಂತಹ ಅಪರ ವಯಸ್ಕನಿಗೂ ಸಾಧ್ಯವಾಗುತ್ತಿಲ್ಲ. ಹಿಮಾಲಯದ ಶಿಖರಗಳಲ್ಲಿ ಪ್ರತಿಫಲನಗೊಳ್ಳುವ ಶ್ವೇತ ಶುಭ್ರ ಪ್ರಭೆಗಳಂತೆ ಮಿನುಗುವ ಆ ಸುಂದರ ಕಣ್ಣುಗಳ ಬೆಳಕು ನಂದಿಹೋಯಿತೆಂಬುದನ್ನು ಹೇಗೆ ನಂಬುವುದೆಂದು ತಿಳಿಯದೆ ನಾವೆಲ್ಲ ಕಳೆದ ಮೂರು ದಿನಗಳಿಂದ ಅಕ್ಷರಶಃ ವಿಲಪಿಸುತ್ತಿದ್ದೇವೆ, ದೇವರೇ ಆ ಶವ ಅವನದಾಗದಿರಲಿ, ಅವನು ಮರಳಿ ಬರಲಿ ಎಂಬ ಹಾರೈಕೆಗಳೊಂದಿಗೆ....
 

 ಬೆಂಗಳೂರಿನ ಗಿರಿನಗರದ ಈ ಯುವಕ ಹಿಮಾಲಯದಲ್ಲಿ ನೋಡದ ಸ್ಥಳವಿರಲಿಲ್ಲ. ಏರದ ಪರ್ವತಗಳಿರಲಿಲ್ಲ. ಅವನಿಗೆ ಹಿಮಾಲಯವೊಂದು ಗೀಳು. ಅದೊಂದು ಹುಚ್ಚು. ಎಲ್ಲೋ ಒಂದೆರಡು ಶಿಖರ ನೋಡಿ ನಾವು ಅಷ್ಟು ನೋಡಿದೆವು, ಇಷ್ಟು ಹತ್ತಿದೆವು ಎಂದು ಕೊಚ್ಚಿಕೊಳ್ಳುತ್ತೇವೆ. ಆದರೆ ಇಷ್ಟು ಚಿಕ್ಕ ವಯಸ್ಸಿನಲ್ಲೇ ಅವನು ನೋಡಿದ, ಮಾಡಿದ ಸಾಧನೆಗಳ ಪಟ್ಟಿಯನ್ನು ನೋಡಿದರೆ ಯಾರೂ ಅಚ್ಚರಿಪಟ್ಟಾರು. ಪ್ರವಾಸದ ಹುಚ್ಚಿನಿಂದ ತಾನೋದುತ್ತಿದ್ದ ಮೆಡಿಕಲ್ ಶಿಕ್ಷಣವನ್ನು ಎರಡೇ ವರ್ಷಕ್ಕೆ ಕೈಬಿಟ್ಟ ರಕ್ಷಿತ್ ಮುಂದೆ ಹಿಮಗಿರಿಯನ್ನು ಕಾರ್ಯಕ್ಷೇತ್ರವಾಗಿಸಿಕೊಂಡು ತಲುಪದ ಶಿಖರವಿಲ್ಲ. ನೋಡದ ಸರೋವರವಿಲ್ಲ. ಮುಂದೆ ಪ್ರವಾಸೋದ್ಯಮವನ್ನೇ ವೃತ್ತಿಯನ್ನಾಗಿ ಆಯ್ದುಕೊಂಡು, ತನ್ನ ಸನ್ನಡತೆ ಮತ್ತು ಸೌಜನ್ಯದ ವರ್ತನೆಗಳಿಂದ ಜನಪ್ರಿಯನಾಗಿದ್ದ. ದುರದೃಷ್ಟವೆಂದರೆ ಆತನ ಕನಸುಗಳೇ ಆತನ ಕನಸುಗಳನ್ನು ಕೊಂದವು. ಆತನ ಚಟುವಟಿಕೆಗಳೇ ಅವನ ಚೈತನ್ಯಕ್ಕೆ ಮುಳುವಾದವು. ಹಿಮಾಲಯದ ತಣ್ಣನೆಯ ಕ್ರೌರ್ಯ ಆ ಮುಗ್ಧ ಜೀವವನ್ನು ನುಂಗಿ ನೊಣೆದು ಮತ್ತೆ ನಯವಾಗಿ ಹೆಪ್ಪುಗಟ್ಟಿತು, ತನ್ನ ಗರ್ಭದಲ್ಲಿ ಅವನ ಹೆಣವನ್ನು ಹುದುಗಿಸಿಕೊಂಡು...

 ನಾನು ಗ್ರೇಟ್ ಟ್ರಿಗ್ನಾಮೆಟ್ರಿಕ್ ಸರ್ವೆ ಆಫ್ ಇಂಡಿಯಾದ ಕುರಿತು ಕೃತಿಯೊಂದನ್ನು ರಚಿಸಲು ಮನಸ್ಸು ಮಾಡಿದಾಗ ನನಗೆ ಮಾಂಟೆಗ್ಮೊರಿ ಎಂಬ ಸೈನ್ಯಾಧಿಕಾರಿ ಸರ್ವೆ ನಡೆಸಿದ ಕಾಶ್ಮೀರದ ಹರ್ಮುಖ ಪರ್ವತದ ಸರ್ವೆಯಿಂದ ಕಥನವನ್ನು ಆರಂಭಿಸುವ ಬಯಕೆ ಹುಟ್ಟಿತ್ತು. 
 

ಅದಕ್ಕೂ ಮೊದಲು ಆ ಸ್ಥಳವನ್ನು ನೋಡಲು ಬಯಸಿದ್ದೆ. ಆದರೆ ಪ್ರಕ್ಷುಬ್ಧ ಕಾಶ್ಮೀರದ ಸೂಕ್ಷ್ಮ ಪ್ರದೇಶಗಳಿಗೆ ತೆರಳಲು ನನ್ನ ಪತ್ನಿಯೂ ಸೇರಿದಂತೆ ಬಂಧುಗಳು, ಸ್ನೇಹಿತರು ವಿರೋಧ ವ್ಯಕ್ತಪಡಿಸಿದರು. ಯಾರಾದರೂ ನಂಬಿಕಸ್ಥ ವ್ಯಕ್ತಿಯ ಜೊತೆಗೆ ಹೋಗುತ್ತೇನೆ, ಹೆದರಬೇಡಿ ಎಂದು ಭರವಸೆ ನೀಡಿದ ನನಗೆ ನನ್ನ ತಂಗಿಯ ಮಗಳು ಕೀರ್ತನಾಳಿಗೆ ಪರಿಚಿತನಾಗಿದ್ದ ರಕ್ಷಿತ್ ಬೆಂಬಲವಾಗಿ ದೊರಕಿದ್ದ. ಅವನೊಡನೆ, "ನಾನು ನೋಡಬೇಕಿರುವುದು ಸಾಮಾನ್ಯವಾಗಿ ಕಾಶ್ಮೀರಕ್ಕೆ ಹೋದವರೆಲ್ಲ ನೋಡುವ ಜನಪ್ರಿಯ ತಾಣಗಳಲ್ಲ. ಅವು ಬೇರೆ ಸ್ಥಳಗಳು..ಅದಕ್ಕೊಂದು ಉದ್ದೇಶವಿದೆ. ಅದನ್ನು ತೋರಿಸಲು ಸಾಧ್ಯವಾ?" ಎಂದಿದ್ದೆ. 
 

ಆತ "ಅಂಕಲ್, ನೀವು ಯಾವ್ಯಾವ ಸ್ಥಳ ನೋಡಬೇಕು ಪಟ್ಟಿಮಾಡಿಕೊಡಿ, ನಾನು ಇಟರ್ನರಿ ಸಿದ್ದಮಾಡಿ ತರುತ್ತೇನೆ, ನಿಮ್ಮನ್ನು ಕರೆದೊಯ್ಯುವ ಹೊಣೆ ನನ್ನದು' ಎಂದಿದ್ದ. ನಾನು, " ಶ್ರೀನಗರದಿಂದ ಮೂವತ್ತು ಮೈಲುಗಳಾಚೆಯ ಹರ್ಮುಖವನ್ನು ಹತ್ತಿ, ಹನ್ನೆರಡು ಸಾವಿರ ಅಡಿಯ ಎತ್ತರದ ಗಂಗಬಾಳ್, ನಂದಕೋಲ್ ಸರೋವರಗಳನ್ನು ನೋಡಬೇಕು. ಮಾಂಟೆಗ್ಮೊರಿ ಶಿಬಿರ ಹಾಕಿದ್ದ ನಂದಕೋಲ್ ತೀರದಲ್ಲೇ ಶಿಬಿರ ಹಾಕಿ ಒಂದು ರಾತ್ರಿ ಕಳೆಯಬೇಕು... ರಾತ್ರಿ ಹರ್ಮುಖ ಶಿಖರ ನೋಡಬೇಕು. ಜೊತೆಗೆ ನಾರಾನಾಗ್, ವಾಂಗಟ್, ಮಾನಸ್ ಬಾಳ್ ಮತ್ತು ವೂಲರ್ ಸರೋವರ, ಶಂಕರಾಚಾರ್ಯ ಗುಡ್ಡ, ಹರಿಪರ್ವತ, ಜೋಜಿಲಾಪಾಸ್....' ಎಂದು ಉದ್ದದ ಪಟ್ಟಿ ಕೊಟ್ಟಿದ್ದೆ. ಈ ನಡುವೆ ಕೊರೋನಾದಿಂದ ಬಳಲಿದ್ದ ಜೊತೆಗೆ ಕಾಲ್ಮುರಿದು ಇನ್ನೂ ಪೂರ್ಣ ಗುಣವಾಗದಿದ್ದ ನನ್ನ ಹೆಂಡತಿಯೂ ಬರುತ್ತೇನೆಂದು ಹಠ ಹಿಡಿದಿದ್ದಳು, ( ಹೋದರೆ ಇಬ್ಬರೂ ಹೋಗೋಣವೆಂದು). ನಾವಿಬ್ಬರೇ ಹೋಗುವುದು ಬೇಡವೆಂದು ನನ್ನಕ್ಕ, ಮಗಸೊಸೆಯೂ ಹೊರಟಿದ್ದರು. ಒಟ್ಟು ಒಂಬತ್ತು ಮಂದಿಯ ತಂಡವನ್ನು ಮೊದಲು ನಿಶ್ಚಯಿಸಿಕೊಂಡಿದ್ದ ಒಂದು ಸ್ಥಳವನ್ನೂ ಬಿಡದೆ ತೋರಿಸಿಕೊಂಡು ಬಂದಿದ್ದ. ಹರ್ಮುಖವನ್ನು ಹತ್ತುವಾಗ ನಮ್ಮನ್ನು ತಂದೆ ತಾಯಿಯರಂತೆ ಹೆತ್ತ ಮಗನೊಟ್ಟಿಗೆ ಮಗನಾಗಿ ಮುತುವರ್ಜಿಯಿಂದ ನೋಡಿಕೊಂಡಿದ್ದ. ಕಾಶ್ಮೀರದಲ್ಲಿ ಆತನ ಸ್ನೇಹಿತರ ಬಳಗವನ್ನು ನೋಡಿ ನಮಗೆ ಆಶ್ಚರ್ಯವಾಗಿತ್ತು. ಅವನ ಅಪ್ರತಿಮ ಸೌಜನ್ಯ ಮತ್ತು ಅತೀವ ಪ್ರೀತಿ ನಮ್ಮ ಮನಸ್ಸು ಹೃದಯಗಳನ್ನು ತುಂಬಿದ್ದವು. ನಮ್ಮನ್ನು ತನ್ನ ಕುಟುಂಬದ ಹಿರಿಯರಂತೆ ಪ್ರೀತಿ ಮತ್ತು ಮಮತೆಯಿಂದ ನೋಡಿಕೊಂಡಿದ್ದ...
ನನ್ನನ್ನು ಟಿಬೆಟ್ಟಿನ ರೂಟ್ ಸರ್ವೆ ಮಾಡಿದ್ದ ನೈನ್ಸಿಂಗನ ಹುಟ್ಟೂರು ಗೋರಿಗಂಗಾ ತೀರದ ಮಿಲಾಮ್ ಗ್ರಾಮಕ್ಕೆ ಕರೆದೊಯ್ಯುವುದಾಗಿ ಮಾತುಕೊಟ್ಟಿದ್ದ.
"ಅಂಕಲ್ ಪುಸ್ತಕ ಬಿಡುಗಡೆಗೆ ನನಗೆ ಹೇಳದಿರಬೇಡಿ. ಎಲ್ಲಿದ್ದರೂ ಬರುತ್ತೇನೆ" ಎಂದಿದ್ದ. ಆದರೆ ನನ್ನ ಕೃತಿ ಸಿದ್ದವಾಗುವ ಮುನ್ನ, ನನ್ನನ್ನು ಗೋರಿಗಂಗಾ ತೀರಕ್ಕೆ ಕರೆದೊಯ್ಯುವ ಮುನ್ನ ತಾನೇ ಕಾಣದ ಜಗತ್ತಿಗೆ ಹೊರಟುಬಿಟ್ಟ....
ಈ ವಯಸ್ಸಿಗೇ ನಿನಗೆ ಅದೆಷ್ಟು ತಿಳುವಳಿಕೆಯಿತ್ತು, ರಕ್ಷಿತ್. ನಿನ್ನ ಮಾತುಗಳನ್ನು ಮರೆಯುವುದೆಂತು? ನಿನ್ನ ಸದ್ವರ್ತನೆ ನಮ್ಮನ್ನೀಗ ಕಾಡುತ್ತಿವೆ. ನಿನಗೆ ಸಂಗೀತದಲ್ಲಿ ಅದೆಷ್ಟು ಆಸಕ್ತಿ? ನೀನು ಚೆನ್ನಾಗಿ ಹಾಡುತ್ತಿದ್ದೆ.. ನಂದಕೋಲ್ ತೀರದಲ್ಲಿ ನಾವೆಲ್ಲ ಹಾಡಿ ನಲಿದದ್ದನ್ನು ಮರೆಯುವುದು ಹೇಗೆ ರಕ್ಷಿತ್. ನಾವೆಲ್ಲ ಥರ್ಮಲ್ ಜರ್ಕಿನ್ ತೊಟ್ಟೂ ನಡುಗುತ್ತಿದ್ದರೆ ನೀನು ಆ ಚಳಿಯಲ್ಲಿ ಹೆಪ್ಪುಗಟ್ಟುವಂತಿದ್ದ ನೀರಿಗೆ ಧುಮಿಕಿ ಈಜಿದ್ದ ಸಾಹಸವನ್ನು ಮರೆಯುವುದೆಂತು? ಸಾಹಸವೆಂದರೆ ಸಾವಿನ ಸರಹದ್ದಿನಲ್ಲಿ ಸಾಗುವ ಸಂಚಾರ ಎಂಬುದನ್ನು ಋಜುವಾತು ಪಡಿಸಿಬಿಟ್ಟೆ..ಇನ್ನೊಮ್ಮೆ ಲಡಾಕಿಗೆ ಕರೆದೊಯ್ಯುತ್ತೇನೆ ಎಂದಿದ್ದೆ? ಎಲ್ಲ ಮರೆತು ಹೊರಟೇ ಬಿಟ್ಟೆಯಲ್ಲ ರಕ್ಷಿತ್...
ಯಾಕೋ ಮನಸ್ಸು ಹರ್ಮುಖದಿಂದ ಹಿಂದಿರುಗುತ್ತಿಲ್ಲ. ನಿನ್ನೊಂದಿಗೇ ಹಿಮಾಲಯದ ಶಿಖರ ಕಣಿವೆಗಳಲ್ಲಿ ಅಲೆಯುತ್ತಿದೆ..
ರಕ್ಷಿತ್ ನೀನು ಎಲ್ಲೂ ಹೋಗಿಲ್ಲ...
ಹಿಮಾಲಯದ ಗಿರಿಶ್ರೇಣಿಗಳಲ್ಲಿ ಕಣಿವೆ ಕೊಳಗಳಲ್ಲಿ ನಮ್ಮ ನೆನಪುಗಳಾಗಿ ಸುರಕ್ಷಿತನಾಗಿರುವೆ...
ನನ್ನ "ಮಹಾಮಾಪನ" ಕೃತಿಯ ಮುನ್ನುಡಿ ನೀನು...ಮೊದಲ ಅಕ್ಷರ ನೀನು... ಆ ಕೃತಿ ನಿನ್ನ ನೆನಪಿಗೆ ಮೀಸಲು...
ದೇವರು ನಿನ್ನ ಆತ್ಮಕ್ಕೆ ಸದ್ಗತಿ ಕೊಡಲೆಂದು ಪ್ರಾರ್ಥಿಸುವುದರ ಹೊರತಾಗಿ ನಾವೇನು ಕೊಡಬಲ್ಲೆವು-- ನಿನಗಾಗಿ ಒಂದೆರಡು ಕಂಬನಿಗಳ ಹೊರತಾಗಿ...

Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ