COSTAL KARNATAKA: ಮಂಗಳೂರಲ್ಲಿ ಗಾಂಜಾ ಘಾಟು: ಡಾಕ್ಟರ್ ಗಳು, ವೈದ್ಯವಿದ್ಯಾರ್ಥಿಗಳು ಸೇರಿ 10 ಮಂದಿ ಅರೆಸ್ಟ್
ಕರಾವಳಿಯ ಕಡಲತೀರ ನಗರ ಮಂಗಳೂರಲ್ಲಿ ವೈದ್ಯರು ಹಾಗೂ ವೈದ್ಯ ವಿದ್ಯಾರ್ಥಿಗಳೇ ಗಾಂಜಾ ಸೇವನೆ, ಮಾರಾಟ ಪ್ರಕರಣದಲ್ಲಿ ಆರೋಪಿಗಳಾಗಿ ಅರೆಸ್ಟ್ ಆಗಿದ್ದಾರೆ. ಗಾಂಜಾ ಸೇವನೆ, ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರು ಇಬ್ಬರು ವೈದ್ಯರು, ಮಹಿಳಾ ವೈದ್ಯಕೀಯ ವಿದ್ಯಾರ್ಥಿಗಳು ಸೇರಿ ಒಟ್ಟು 10 ಮಂದಿಯನ್ನು ಬಂಧಿಸಿದ್ದಾರೆ ಎಂದು ಮಂಗಳೂರು ಸಿಟಿ ಪೊಲೀಸ್ ಕಮೀಷನರ್ ಶಶಿಕುಮಾರ್ ಸುದ್ದಿಗಾರರಿಗೆ ತಿಳಿಸಿದರು.
ಬಂಧಿತ ಏಳು ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ನಾಲ್ವರು ಹುಡುಗಿಯರು. ಪ್ರಮುಖ ಡ್ರಗ್ ಪೆಡ್ಲರ್ ನೀಲ್ ಎಂಬಾತನಿಂದ ಗಾಂಜಾ ಪಡೆದು, ಸೇವಿಸುತ್ತಿದ್ದರು ಹಾಗೂ ಮಾರಾಟ ಮಾಡುತ್ತಿದ್ದರು. ಎಲ್ಲರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಎರಡು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಶಶಿಕುಮಾರ್ ತಿಳಿಸಿದ್ದಾರೆ.
ಮಂಗಳೂರಿನ ವಿವಿಧ ಅಪಾರ್ಟ್ ಮೆಂಟ್ ಗಳಲ್ಲಿ ಇವರು ವಾಸವಾಗಿದ್ದರು. ಅಪಾರ್ಟ್ ಮೆಂಟ್ ಗಳು ಹಾಗೂ ಪಿಜಿಗಳನ್ನು ಬಾಡಿಗೆ ನೀಡುವ ಮಾಲೀಕರು ತಾವು ಬಾಡಿಗೆಗೆ ನೀಡಿದ ಮನೆಯಲ್ಲಿ ನಡೆಯುವ ಚಟುವಟಿಕೆಗಳನ್ನು ಗಮನಿಸಬೇಕು ಎಂದು ಈ ಸಂದರ್ಭ ಶಶಿಕುಮಾರ್ ಕಿವಿಮಾತು ಹೇಳಿದರು.
ತಮಿಳುನಾಡು, ಆಂಧ್ರಪ್ರದೇಶ, ಪಂಜಾಬ್, ದೆಹಲಿಗಳ ಎಂಬಿಬಿಎಸ್, ಬಿಡಿಎಸ್, ಸ್ನಾತಕೋತ್ತರ ಪದವಿ ಕಲಿಯುವ ವೈದ್ಯ ವಿದ್ಯಾರ್ಥಿಗಳೊಂದಿಗೆ ಕೇರಳ ಮತ್ತು ತಮಿಳುನಾಡು ಮೂಲದ ವೈದ್ಯಾಧಿಕಾರಿ, ಸರ್ಜನ್ ಗಳಿಬ್ಬರು ಭಾಗಿಯಾಗಿರುವ ಆರೋಪದಲ್ಲಿ ಬಂಧಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿದ ನಗರ ಪೊಲೀಸ್ ಕಮೀಷನರ್ ಶಶಿಕುಮಾರ್, ಜನವರಿ 7ರಂದು ಬಿಡಿಎಸ್ ವಿದ್ಯಾರ್ಥಿ, ಯುಕೆಯ ವಿದ್ಯಾರ್ಥಿ ಇದ್ದ ಫ್ಲಾಟ್ ಗೆ ದಾಳಿ ಮಾಡಲಾಗಿತ್ತು. ಈ ಸಂದರ್ಭ ಆತನಿಂದ 2 ಕೆಜಿ ಗಾಂಜಾ, ನಕಲಿ ಪಿಸ್ತೂಲ್, ಎರಡು ಮೊಬೈಲ್, ಡಿಜಿಟಲ್ ತೂಕಮಾಪನ ವಶಕ್ಕೆ ತೆಗೆದುಕೊಳ್ಳಲಾಗಿತ್ತು. ವಿಚಾರಣೆ ಸಂದರ್ಭ ದೊರೆತ ಮಾಹಿತಿಯನ್ವಯ ಮತ್ತೆ ಬಂಧನಗಳು ನಡೆದವು ಎಂದರು.