KARNATAKA POLITICS: ಕೋಲಾರದಿಂದಲೇ ಸ್ಪರ್ಧೆಗಿಳಿಯಲಿದ್ದಾರಾ ಮಾಜಿ ಸಿಎಂ ಸಿದ್ಧರಾಮಯ್ಯ?
ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುವ ಕುರಿತು ವಿಶ್ವಾಸ ವ್ಯಕ್ತಪಡಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸಲು ಇಚ್ಛಿಸಿದ್ದಾರೆ. ಅಂತಿಮ ಆಯ್ಕೆ ಹೈಕಮಾಂಡ್ ಗೆ ಬಿಟ್ಟಿದ್ದಾರೆ.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾರಾಗ್ತಾರೆ ಎಂಬ ಚರ್ಚೆಗಳು ಇನ್ನೂ ಚಾಲ್ತಿಯಲ್ಲಿರುವಂತೆಯೇ ಮಾಜಿ ಮುಖ್ಯಮಂತ್ರಿ, 75ರ ಹರೆಯದ ಸಿದ್ಧರಾಮಯ್ಯ ಈಗ ಕೋಲಾರದತ್ತ ದೃಷ್ಟಿ ನೆಟ್ಟಿದ್ದಾರೆ. ಕೋಲಾರದಲ್ಲಿ ಇಂದು ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಜನರ ಆಶೀರ್ವಾದ ಇದ್ದರೆ ರಾಜಕೀಯದಲ್ಲಿ ಉಳಿಯಲು ಸಾಧ್ಯ. ಎಲ್ಲರೂ ಕೋಲಾರದಿಂದ ನಿಲ್ಲಬೇಕು ಎಂಬ ಒತ್ತಾಯ ಮಾಡಿದ್ದರು. ಹೈಕಮಾಂಡ್ ಒಪ್ಪಿದರೆ, ನಾನು ಇಲ್ಲಿ ಸ್ಪರ್ಧೆ ಮಾಡಲು ತಯಾರಿದ್ದೇನೆ ಎಂದರು.
ಚಾಮುಂಡೇಶ್ವರಿ ಕ್ಷೇತ್ರದಿಂದ ಐದು ಬಾರಿ ಶಾಸಕನಾಗಿದ್ದೆ, ವರುಣಾದಿಂದ ಎರಡು ಬಾರಿ, ಬಾದಾಮಿಯಿಂದ ಒಂದು ಬಾರಿ ಆಯ್ಕೆಯಾಗಿದ್ದೆ ಎಂದ ಸಿದ್ದರಾಮಯ್ಯ, ಪ್ರತಿ ವಾರ ಕ್ಷೇತ್ರಕ್ಕೆ ಭೇಟಿ ಕೊಡುತ್ತೇನೆ. ಸಾಮಾನ್ಯರೊಂದಿಗೆ ಬೆರೆಯುತ್ತೇನೆ. ಶಾಸಕನಾದರೆ, ಕೋಲಾರಕ್ಕೆ ವಿಶೇಷ ಅನುದಾನ ತರಿಸುತ್ತೇನೆ ಎಂದರು. ಎಷ್ಟೇ ಕೋಟಿಯಾದರೂ ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸುತ್ತೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.