NEWSHOUR: ಸಿದ್ಧರಾಮಯ್ಯ ವಿರುದ್ಧ ವಿಜಯೇಂದ್ರ ಸ್ಪರ್ಧಿಸ್ತಾರಾ? ರಾಜ್ಯದ ಗಮನ ಸೆಳೆದಿದೆ ‘ವರುಣಾ’
ಸುದ್ದಿ ವಿಶ್ಲೇಷಣೆ: HARISH MAMBADY
ಮಾಜಿ ಸಿಎಂ ಸಿದ್ಧರಾಮಯ್ಯ ಅವರನ್ನು ಕಾಂಗ್ರೆಸ್ ಹೈಕಮಾಂಡ್ ‘ಒತ್ತಾಯಪೂರ್ವಕವಾಗಿ’ ವರುಣಾ ಕ್ಷೇತ್ರದಿಂದಲೇ ನಿಲ್ಲಿಸುವ ವಿಚಾರದಲ್ಲಿ ಈಗಾಗಲೇ ಸಾಕಷ್ಟು ಚರ್ಚೆ, ಹೇಳಿಕೆಗಳು ಬಂದಿವೆ.
ಸಿದ್ಧರಾಮಯ್ಯರಿಗೆ ಸೇಫ್ ಆಗಿರುವ ಕ್ಷೇತ್ರವಾಗಿ ವರುಣಾ ಇದೆ ಎಂಬ ನಿಟ್ಟಿನಲ್ಲಿ ಅಲ್ಲೇ ಸ್ಪರ್ಧಿಸಲು ಹೈಕಮಾಂಡ್ ಸೂಚಿಸಿದೆ ಎಂಬ ವರದಿಗಳ ಮಧ್ಯೆ ಅವರು ಕೋಲಾರದಲ್ಲೂ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾಗಿ ಹೇಳಲಾಗುತ್ತಿದೆ.
ಈ ಮಧ್ಯೆ ಸಿದ್ಧರಾಮಯ್ಯ ವಿರುದ್ಧ ಬಿಜೆಪಿ ಪ್ರಬಲ ಅಭ್ಯರ್ಥಿಯನ್ನು ನಿಲ್ಲಿಸಲು ಪಣತೊಟ್ಟಿದ್ದು, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ ಹಾಗೂ ಬಿಜೆಪಿಯ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿರುವ ಬಿ.ವೈ.ವಿಜಯೇಂದ್ರ ಅವರು ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಖುದ್ದು ಯಡಿಯೂರಪ್ಪ ಅವರಿಗೆ ಪುತ್ರ ಶಿಕಾರಿಪುರದಿಂದಲೇ ಸ್ಪರ್ಧಿಸಲಿ ಎಂಬ ಆಸೆ ಇದೆ. ಆದರೆ ಇಂದು ವಿಜಯೇಂದ್ರ ಅವರು ಕಾರ್ಯಕರ್ತರೊಂದಿಗೆ ಸಮಾಲೋಚಿಸಿದ್ದಾರೆ.
ಈ ಕ್ಷೇತ್ರದ ಕುರಿತು ಇಂದಿನ ದಿನದ ಬೆಳವಣಿಗೆಗಳ ಕುರಿತು ಒಂದು ಝಲಕ್..
ಮೈಸೂರಿನಲ್ಲಿ ವರುಣ ಕ್ಷೇತ್ರದ ಕಾರ್ಯಕರ್ತರ ಜತೆ ವಿಜಯೇಂದ್ರ ಸಭೆ ನಡೆಸಿದ್ದಾರೆ. ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ವಿಜಯೇಂದ್ರ, ನಾನು ಚುನಾವಣೆಗೆ ನಿಲ್ಲಬೇಕೊ, ಬೇಡವೋ, ನಿಂತರೆ ಎಲ್ಲಿ ನಿಲ್ಲಬೇಕು ಎಂದು ಪಕ್ಷ ಹೈಕಮಾಂಡ್ ಇನ್ನೂ ನಿರ್ಧಾರ ಮಾಡಿಲ್ಲ, ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ. ನಮ್ಮ ಶಿಕಾರಿಪುರ ತಾಲ್ಲೂಕು, ತಂದೆಯವರು ಪ್ರತಿನಿಧಿಸಿಕೊಂಡು ಬಂದ ಕ್ಷೇತ್ರ. ತಂದೆಯವರಿಗೆ ಅಲ್ಲಿ ಪ್ರೀತಿ ಹೆಚ್ಚಾಗಿರುತ್ತದೆ. ತಂದೆಯವರಿಗೆ ರಾಜಕೀಯ ಜನ್ಮ ಕೊಟ್ಟ ಕ್ಷೇತ್ರ ಹಾಗಾಗಿ ನಮಗೆ ಹೆಮ್ಮೆಯಿದೆ. ಹಾಗೆಂದು ವರುಣಾ ಬೇರೆ ಎಂದು ನಾವಂದುಕೊಂಡಿಲ್ಲ. ನನ್ನನ್ನು ರಾಜಕೀಯವಾಗಿ ಪರಿಚಯಮಾಡಿಕೊಟ್ಟ ಕ್ಷೇತ್ರ ವರುಣಾ.ಹಾಗಾಗಿ ಪಕ್ಷ ಏನೇ ನಿರ್ಧಾರ ಮಾಡಿದರೂ ಕೂಡ ವರುಣಾ ಕ್ಷೇತ್ರದ ಬಗ್ಗೆ ನನ್ನ ಮನಸ್ಸಿನಲ್ಲಿ ವಿಶೇಷ ಸ್ಥಾನವಿದೆ ಎಂದು ಕಾರ್ಯಕರ್ತರೊಂದಿಗೆ ಮಾತನಾಡುವ ವೇಳೆ ವಿಜಯೇಂದ್ರ ಹೇಳಿದ್ದಾರೆ.
ವರುಣಾ ಕ್ಷೇತ್ರ ಭಾರತೀಯ ಜನತಾ ಪಾರ್ಟಿಯ ಭದ್ರಕೋಟೆ. ಯಾರೇ ನಿಂತರೂ ಕೂಡ ಎದುರಾಳಿಯಿಂದ 20-30 ಸಾವಿರ ಮತಗಳ ಅಂತರದಿಂದ ಗೆಲ್ಲುವುದಕ್ಕೆ ಏನೂ ತೊಂದರೆಯಿಲ್ಲ. ಇಲ್ಲಿ ಯಾರು ನಿಂತರೂ ಗೆಲ್ಲುವ ಸಾಮರ್ಥ್ಯವಿದೆ ಎಂದು ಹೇಳುವ ಮೂಲಕ ಒಂದು ವೇಳೆ ತಾನು ನಿಲ್ಲದಿದ್ದರೂ ಪ್ರಬಲ ಅಭ್ಯರ್ಥಿ ನಿಲ್ಲಿಸುವ ಕುರಿತು ಸುಳಿವು ನೀಡಿದ್ದಾರೆ.
ಕ್ಷೇತ್ರದಲ್ಲಿ ಕಾರ್ಯಕರ್ತರು ವಿಶ್ವಾಸ ಬರುವ ರೀತಿಯಲ್ಲಿ ನಡೆದುಕೊಳ್ಳಬೇಕು. ಎಲ್ಲರೂ ಒಟ್ಟಾಗಿ ಚುನಾವಣೆಯವರೆಗೆ ಕೆಲಸ ಮಾಡಿ ಹೋರಾಡೋಣ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದ್ದಾರೆ.
ಶಿಕಾರಿಪುರದಲ್ಲೇ ಶಿಕಾರಿ:
ಪುತ್ರ ವಿಜಯೇಂದ್ರ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ, ಅವನು ನಾನು ಪ್ರತಿನಿಧಿಸುತ್ತಾ ಬಂದಿರುವ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಕ್ಷೇತ್ರದಲ್ಲಿಯೇ ಈ ಬಾರಿ ಚುನಾವಣೆಗೆ ನಿಲ್ಲಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪುನರುಚ್ಛರಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ವರುಣಾದಿಂದ ವಿಜಯೇಂದ್ರ ಸ್ಪರ್ಧೆಗೆ ಹೈಕಮಾಂಡ್ ಒಪ್ಪಿತ್ತು. ಆದರೆ ನಾನೇ ವರುಣಾದಿಂದ ಸ್ಪರ್ಧೆ ಬೇಡವೆಂದು ಹೇಳಿದ್ದೇನೆ ಈ ವಿಚಾರದಲ್ಲಿ ನಾನು ಹೈಕಮಾಂಡ್ ಮನವೊಲಿಸುತ್ತೇನೆ. ಯಾವ ಕಾರಣಕ್ಕೂ ವಿಜಯೇಂದ್ರ ವರುಣಾದಿಂದ ಸ್ಪರ್ಧೆ ಮಾಡುವ ಪ್ರಶ್ನೆಯೇ ಇಲ್ಲ. ಕಾರ್ಯಕರ್ತರು ಸಾಕಷ್ಟು ಒತ್ತಡ ಹಾಕುತ್ತಿದ್ದಾರೆ. ಶಿಕಾರಿಪುರ ಬಿಟ್ಟು ಅವರು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಏನು ಹೇಳುತ್ತೆ:
ವಿಜಯೇಂದ್ರ ವರುಣಾದಿಂದ ಸ್ಪರ್ಧೆಗಿಳಿದರೆ ಕಾಂಗ್ರೆಸ್ ಗೂ ಉಸಿರುಗಟ್ಟಿಸುವ ಸ್ಪರ್ಧೆ ಎದುರಿಸಬೇಕಾಗುತ್ತದೆ ಎಂಬುದು ನಿಚ್ಚಳ. ಹೀಗಾಗಿ ರಾಜಕೀಯ ಹೇಳಿಕೆಯೊಂದನ್ನು ಕಾಂಗ್ರೆಸ್ ನೀಡಿದೆ. ನೇರವಾಗಿ ಹೈಕಮಾಂಡ್ ಮತ್ತು ಯಡಿಯೂರಪ್ಪ ಮಧ್ಯೆ ಸರಿಇಲ್ಲ ಎಂಬರ್ಥದ ಟ್ವೀಟ್ ಅನ್ನು ಕಾಂಗ್ರೆಸ್ ಮಾಡಿದೆ.
‘’ಯಡಿಯೂರಪ್ಪ & ಸನ್ಸ್ ಕಂಪೆನಿಯನ್ನು ಮುಗಿಸಲು ಹೀಗೆಲ್ಲ ತಂತ್ರ ಹೂಡುತ್ತಿದೆ @BJP4Karnataka. ಅದರ ಮುಂದುವರೆದ ಭಾಗವಾಗಿ ವರುಣಾ ಕ್ಷೇತ್ರಕ್ಕೆ @BYVijayendra ಅವರನ್ನು ತಳ್ಳಿ "ಹರಕೆಯ ಕುರಿ"ಯಾಗಿಸುವ ಪ್ರಯತ್ನ! ಸಂತೋಷ ಕೂಟದ ತಂತ್ರಗಾರಿಕೆಯನ್ನು @BSYBJP ಅವರು ಅರ್ಥ ಮಾಡಿಕೊಂಡು ಎಚ್ಚೆತ್ತರೆ ಪುತ್ರರ ಭವಿಷ್ಯ ಉಳಿಯಬಹುದು.’’ ಹೀಗೆಂದು ಕಾಂಗ್ರೆಸ್ ಟ್ವೀಟ್ ಮಾಡುವ ಮೂಲಕ ಭೇದೋಪಾಯ ತಂತ್ರಗಾರಿಕೆಯನ್ನು ಮಾಡಿದೆ.
ಯಡಿಯೂರಪ್ಪ & ಸನ್ಸ್ ಕಂಪೆನಿಯನ್ನು ಮುಗಿಸಲು ಹೀಗೆಲ್ಲ ತಂತ್ರ ಹೂಡುತ್ತಿದೆ @BJP4Karnataka.
— Karnataka Congress (@INCKarnataka) March 31, 2023
ಅದರ ಮುಂದುವರೆದ ಭಾಗವಾಗಿ ವರುಣಾ ಕ್ಷೇತ್ರಕ್ಕೆ @BYVijayendra ಅವರನ್ನು ತಳ್ಳಿ "ಹರಕೆಯ ಕುರಿ"ಯಾಗಿಸುವ ಪ್ರಯತ್ನ!
ಸಂತೋಷ ಕೂಟದ ತಂತ್ರಗಾರಿಕೆಯನ್ನು @BSYBJP ಅವರು ಅರ್ಥ ಮಾಡಿಕೊಂಡು ಎಚ್ಚೆತ್ತರೆ ಪುತ್ರರ ಭವಿಷ್ಯ ಉಳಿಯಬಹುದು.