NOTE BAN: 2000 ರೂ ನೋಟು ಹಿಂದಕ್ಕೆ: ಸಾರ್ವಜನಿಕರು ಗಾಬರಿಪಡಬೇಕಾಗಿಲ್ಲ ಯಾಕೆ?

NOTE BAN: 2000 ರೂ ನೋಟು ಹಿಂದಕ್ಕೆ: ಸಾರ್ವಜನಿಕರು ಗಾಬರಿಪಡಬೇಕಾಗಿಲ್ಲ ಯಾಕೆ?

 

Photo credit: Google

2 ಸಾವಿರ ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯಲು ನಿರ್ಧರಿಸಿರುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಪ್ರಕಟಿಸಿದೆ. ಈ ಕ್ಷಣದಿಂದಲೇ 2,000 ರೂ ಮುಖಬೆಲೆಯ ನೋಟುಗಳನ್ನು ವಿತರಿಸದಂತೆ ಬ್ಯಾಂಕುಗಳಿಗೆ ಸೂಚನೆ ನೀಡಿರುವ ಆರ್‌ಬಿಐ, ನೋಟುಗಳನ್ನು ಹಿಂಪಡೆಯುವ ಕಾರ್ಯಕ್ಕೆ ಸಾಕಷ್ಟು ಸಮಯ ನೀಡಿದೆ. ವ್ಯವಸ್ಥಿತವಾಗಿ ಇದು ನಡೆಯಲಿರುವ ಕಾರಣ ಜನಸಾಮಾನ್ಯರು ಗಾಬರಿಪಡುವ ಅಗತ್ಯವಿಲ್ಲ ಎಂದು ಸ್ಪಷ್ಟನೆ ನೀಡಿದೆ. 2023 ಸೆಪ್ಟೆಂಬರ್ 30 ರೊಳಗೆ ಅವುಗಳನ್ನು ವಿನಿಮಯ ಮಾಡಿಕೊಳ್ಳುವಂತೆ ಎಲ್ಲರಿಗೂ ತಿಳಿಸಿದೆ. " 2000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ನಿರ್ಧರಿಸಲಾಗಿದೆ. ಅಕ್ಟೋಬರ್‌ 1 ರಿಂದ ಈ ನೋಟುಗಳು ಚಲಾವಣೆಯಲ್ಲಿ ಇರುವುದಿಲ್ಲ. ಹೀಗಾಗಿ, ಸೆ.30ರ ಒಳಗೆ ಸಾರ್ವಜನಿಕರು ಬ್ಯಾಂಕ್‌ಗಳಿಗೆ ತೆರಳಿ ನೋಟು ಬದಲಾವಣೆ ಮಾಡಿಕೊಳ್ಳಬೇಕು " ಎಂದು ಸೂಚನೆ ನೀಡಿದೆ.

ಚಲಾವಣೆಯಲ್ಲಿರುವ ನೋಟು ಮಾನ್ಯ:

ನೆನಪಿಡಿ, ಪ್ರಸ್ತುತ ಚಲಾವಣೆಯಲ್ಲಿ ಇರುವ 2,000 ರೂ ನೋಟುಗಳು ಕಾನೂನು ಮಾನ್ಯವಾಗಿ ಮುಂದುವರಿಯುತ್ತವೆ. ಜನರು ಅವುಗಳನ್ನು ತಮ್ಮ ದೈನಂದಿನ ನಗದು ವಹಿವಾಟುಗಳಲ್ಲಿ ಹಿಂದಿನಂತೆಯೇ ಬಳಸಬಹುದು. ಅವುಗಳನ್ನು ಹಣ ಪಾವತಿಯಲ್ಲಿ ಸ್ವೀಕರಿಸಲೂ ಯಾವುದೇ ತೊಂದರೆ ಇಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ರಿಸರ್ವ್ ಬ್ಯಾಂಕ್ ತಿಳಿಸಿದೆ.

ದಿಢೀರ್ ಪರಿಣಾಮ ಆಗೋದಿಲ್ಲ

2 ಸಾವಿರ ರೂ ಬ್ಯಾಂಕ್‌ ನೋಟುಗಳನ್ನು ಹಿಂಪಡೆಯುವ ನಡೆಯು ನಾಗರಿಕರ ಮೇಲೆ ಯಾವುದೇ ದಿಢೀರ್ ಪರಿಣಾಮ ಉಂಟುಮಾಡುವುದಿಲ್ಲ. ಏಕೆಂದರೆ ಜನರಿಗೆ ಅವುಗಳ ವಿನಿಮಯಕ್ಕೆ ಸಾಕಷ್ಟು ಸಮಯಾವಕಾಶ ಲಭ್ಯವಾಗಲಿದೆ ಎಂದು ಹೇಳಿದೆ.

ನೋಟುಗಳ ವಿನಿಮಯ ಹೇಗೆ?

ಸದ್ಯ 2,000 ರೂಪಾಯಿ ನೋಟು ಹೊಂದಿದ್ದರೆ ಮೇ 23ರ ನಂತರ ಸಮೀಪದ ಬ್ಯಾಂಕ್‌ಗೆ ತೆರಳಿ ನೋಟು ಬದಲಾವಣೆ ಮಾಡಿಕೊಳ್ಳಬಹುದು. ಆದರೆ, ಒಮ್ಮೆಗೆ 10 ನೋಟುಗಳ ಅಂದರೆ 20 ಸಾವಿರ ರೂಪಾಯಿ ಮಾತ್ರ ಬದಲಾವಣೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.

ಸಾರ್ವಜನಿಕರು ಯಾವುದೇ ಬ್ಯಾಂಕ್ ಶಾಖೆಯಲ್ಲಿ 2 ಸಾವಿರ ರೂ ಮುಖಬೆಲೆಯ ಕರೆನ್ಸಿಗಳನ್ನು ತಮ್ಮ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿಕೊಳ್ಳಬಹುದು ಅಥವಾ ಬೇರೆ ನೋಟುಗಳಿಗೆ ವಿನಿಮಯ ಮಾಡಿಕೊಳ್ಳುವ ಆಯ್ಕೆ ಹೊಂದಿದ್ದಾರೆ

ಎಂದಿನ ಸ್ವರೂಪದಲ್ಲಿ ಬ್ಯಾಂಕ್ ಖಾತೆಗಳಲ್ಲಿ ಹಣ ಜಮೆ ಮಾಡಬಹುದು. ಇದಕ್ಕೆ ಯಾವುದೇ ನಿರ್ಬಂಧವಿಲ್ಲ. ಇದು ಹಾಲಿ ಇರುವ ಸೂಚನೆಗಳಿಗೆ ಹಾಗೂ ಅನ್ವಯವಾಗುವ ಇತರೆ ಶಾಸನಬದ್ಧ ನಿಯಮಗಳಿಗೆ ಒಳಪಟ್ಟಿರುತ್ತದೆ ಎಂದು ಆರ್‌ಬಿಐ ತಿಳಿಸಿದೆ.

ನೋಟು ವಿನಿಮಯ ಮಾಡಿಕೊಳ್ಳಲು 10 ನೋಟುಗಳಿಗೆ (20 ಸಾವಿರ ರೂಪಾಯಿ) ಮಾತ್ರ ಅವಕಾಶ ನೀಡಲಾಗಿದೆ. ಆದರೆ, ಬ್ಯಾಂಕ್‌ ಖಾತೆಗೆ ಎಷ್ಟಾದರೂ ನೋಟುಗಳನ್ನು ನೀಡಿ ಹಣ ಜಮೆ ಮಾಡಬಹುದು. ಈ ಅವಕಾಶವನ್ನು ಆರ್‌ಬಿಐ ನೀಡಿದೆ. ನೋಟುಗಳನ್ನು ಬದಲಾವಣೆ ಮಾಡಿಕೊಳ್ಳುವವರು ಆ ಬ್ಯಾಂಕ್‌ನಲ್ಲಿ ಖಾತೆ ಹೊಂದಿರಬೇಕು ಎಂಬ ನಿಯಮ ಇಲ್ಲ. ಎಲ್ಲಾ ಬ್ಯಾಂಕ್‌ಗಳು ಸೆಪ್ಟೆಂಬರ್ 30, 2023 ರವರೆಗೆ 2000 ರೂ. ಬ್ಯಾಂಕ್‌ ನೋಟುಗಳಿಗೆ ಠೇವಣಿ ಮತ್ತು/ಅಥವಾ ವಿನಿಮಯ ಸೌಲಭ್ಯವನ್ನು ಒದಗಿಸುತ್ತವೆ ಎಂದು ಆರ್‌ಬಿಐ ತಿಳಿಸಿದೆ.

 

Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ