RAIN: ರಸ್ತೆಯಲ್ಲಿ ಬಿರುಕು: ಆಗುಂಬೆ ಘಾಟ್ ನಲ್ಲಿ ಘನ ವಾಹನ ಸಂಚಾರಕ್ಕೆ ಬ್ರೇಕ್
ರಾಷ್ಟ್ರೀಯ ಹೆದ್ದಾರಿ 169ಎಯಲ್ಲಿರುವ ಆಗುಂಬೆ ಘಾಟಿಯಲ್ಲಿ ಭಾರಿ ವಾಹನ ಸಂಚಾರ ನಿರ್ಬಂಧಿಸಿ ಬದಲಿ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಆದೇಶವನ್ನು ಬುಧವಾರ ಹೊರಡಿಸಿದ್ದಾರೆ.ಶಿವಮೊಗ್ಗದ ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಅವರ ಮಾಹಿತಿ ಆಧಾರದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ತೀರ್ಥಹಳ್ಳಿ ಉಡುಪಿ ರಸ್ತೆಯ ಆಗುಂಬೆ ಘಾಟಿಯ 6, 7 ಮತ್ತು 11ನೇ ತಿರುವಿನಲ್ಲಿ ಭಾರಿ ಮಳೆಯಿಂದ ಮತ್ತು ಭಾರಿ ವಾಹನಗಳ ಓಡಾಟದಿಂದಾಗಿ ಸಣ್ಣ ಬಿರುಕುಗಳು ಹಾಗೂ ಅಲ್ಲಲ್ಲಿ ರಸ್ತೆ ಕುಸಿತವು ಕಾಣಿಸಿಕೊಂಡಿದೆ. ಹೆಚ್ಚಿನ ಮಳೆಯಿಂದಾಗಿ ತಡೆಗೋಡೆ ಕುಸಿದಿರುವುದು ಕಂಡುಬಂದಿದ್ದು, ಈ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರ ಸೂಕ್ತವಲ್ಲ. ಇದರಿಂದ ರಸ್ತೆ ಮತ್ತಷ್ಟು ಕುಸಿದು ಅಪಘಾತ ಆಗುವ ಸಂಭವವಿದೆ. ತಾತ್ಕಾಲಿಕವಾಗಿ ತಕ್ಷಣದಿಂದ ಅಂದರೆ, ಜುಲೈ 27ರಿಂದ ಸೆಪ್ಟೆಂಬರ್ 15ರವರೆಗೆ ಈ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.ಸಾರ್ವಜನಿಕರ ಹಿತದೃಷ್ಟಿಯಿಂದ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅನುವು ಮಾಡಿಕೊಡಲಾಗುತ್ತದೆ, ಭಾರಿ ವಾಹನ ಸಂಚಾರ ನಿರ್ಬಂಧ ಅಗತ್ಯವೆಂದು ಮನವರಿಕೆ ಆಗಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದವರು ವಿವರಿಸಿದ್ದಾರೆ. ಆಗುಂಬೆ ಘಾಟ್ ನಲ್ಲಿ ಘನ ವಾಹನಗಳಿಗೆ ನಿರ್ಬಂಧ ಹೇರಲಾದ ಕಾರಣ ತೀರ್ಥಹಳ್ಳಿಯಿಂದ ಉಡುಪಿಗೆ ತೆರಳುವವರು ಬದಲಿ ಮಾರ್ಗ ಅನುಸರಿಸಬಹುದು. ತೀರ್ಥಹಳ್ಳಿ ಮಾಸ್ತಿಕಟ್ಟೆ ಸಿದ್ದಾಪುರ ಕುಂದಾಪುರ ಮೂಲಕ ಉಡುಪಿಗೆ ಬರಬಹುದು ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.