PUTTUR MLA: ಜನರ ಹಿತ ಕಾಪಾಡುವುದು ನನ್ನ ಜವಾಬ್ದಾರಿ: ಶಾಸಕ ಅಶೋಕ್ ಕುಮಾರ್ ರೈ
ಪುತ್ತೂರು: ರಾಷ್ಟ್ರೀಯ ಪವರ್ ಗ್ರಿಡ್ ಯೋಜನೆ ಅನ್ವಯ ಪ್ರಸ್ತಾವಿತ ಉಡುಪಿ-ಕಾಸರಗೋಡು ನಡುವಣ ಹೈಟೆನ್ಷನ್ ವಿದ್ಯುತ್ ಮಾರ್ಗ ನಿರ್ಮಾಣದ ವಿಚಾರದಲ್ಲಿ ಯಾವುದೇ ರಾಜಕೀಯ ಇಲ್ಲ. ಆದರೆ ಕ್ಷೇತ್ರದ ಶಾಸಕನಾಗಿ ಜನರ ಹಿತ ಕಾಪಾಡುವುದು ನನ್ನ ಜವಾಬ್ದಾರಿಯಾಗಿದ್ದು, ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ಸಮಷ್ಟಿ ಹಿತರಕ್ಷಣೆಗೆ ಶ್ರಮಿಸುತ್ತೇನೆ. ಯೋಜನೆಯನ್ನು ಕೂಲಂಕಷವಾಗಿ ಚರ್ಚಿಸಿ, ಅಗತ್ಯವಿರುವಲ್ಲಿ ವಿದ್ಯುತ್ ಲೈನ್ ಮಾರ್ಗದಲ್ಲಿ ಸೂಕ್ತ ಮಾರ್ಪಾಡುಗಳನ್ನು ಮಾಡುವಂತೆ ಸೂಚಿಸಿದ್ದೇನೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಸರಿಯಾದ ಮಾಹಿತಿ ನೀಡಿ, ತೊಂದರೆಗೆ ಒಳಗಾಗುವವರಿಗೆ ಸೂಕ್ತ ಪರಿಹಾರ ಮತ್ತು ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಶಾಸಕರು ತಮ್ಮನ್ನು ಸಂಪರ್ಕಿಸಿದ ಮಾಧ್ಯಮ ಪ್ರತಿನಿಧಿಯೊಂದಿಗೆ ಸ್ಪಷ್ಟಪಡಿಸಿದರು.
ಕೆಲವೊಂದು ಖಾಸಗಿ ಕೃಷಿ ಭೂಮಿಯ ಮೂಲಕವೂ ವಿದ್ಯುತ್ ಮಾರ್ಗ ಹಾದುಹೋಗುತ್ತದೆ. ಅಂತಹ ಜಾಗಗಳಲ್ಲಿ ಭೂ ಮಾಲೀಕರಿಗೆ ಸರಿಯಾದ ಪರಿಹಾರ ಕೊಟ್ಟು, ಕೆಲವು ಕಡೆ ಮನೆಗಳು ಸ್ಥಳಾಂತರಗೊಳ್ಳಬೇಕಾದ ಸಂದರ್ಭ ಆ ಮನೆಗಳ ಮಾಲೀಕರಿಗೂ ಪರಿಹಾರ ಮತ್ತು ಪರ್ಯಾಯ ವಸತಿ ನಿರ್ಮಾಣದ ವ್ಯವಸ್ಥೆ ಮಾಡಿಕೊಡಬೇಕು. ಈ ವಿಚಾರಗಳ ಬಗ್ಗೆ ಯೋಜನೆ ಅನುಷ್ಠಾನಕ್ಕೆ ಮುಂದಾಗಿರುವ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಶಾಸಕರು ಹೇಳಿದರು.
ಇದೊಂದು ಕೇಂದ್ರ ಸರಕಾರದ ಯೋಜನೆಯಾಗಿರುವುದರಿಂದ ಯೋಜನೆಯ ಅನುಷ್ಠಾನ ವಿಚಾರದಲ್ಲಿ ಸ್ಥಳೀಯ ಮಟ್ಟದಲ್ಲಿ ಯಾವುದೇ ನಿರ್ಣಾಯಕ ಅಧಿಕಾರ ಇರುವುದಿಲ್ಲ. ಆದರೆ ನಮ್ಮ ಜನರಿಗೆ ತೊಂದರೆಯಾಗದಂತೆ ಯೋಜನೆ ಅನುಷ್ಠಾನ ಮಾಡಿ ಎಂದು ಸಂಬಂಧಿತರಿಗೆ ಸೂಚನೆ ನೀಡಿದ್ದೇನೆ ಎಂದು ಅವರು ತಿಳಿಸಿದರು.
ಉಡುಪಿಯಿಂದ ಕೇರಳಕ್ಕೆ ಅತ್ಯಧಿಕ ಶಕ್ತಿಯ ವಿದ್ಯುತ್ ರವಾನಿಸುವ (400 ಕೆವಿ) ಹೈಟೆನ್ಷನ್ ತಂತಿ ಮಾರ್ಗ ಇದಾಗಿದ್ದು, ಕಾಸರಗೋಡಿನಿಂದ ಕರ್ನಾಟಕದ ಗಡಿಯ ಅಡ್ಯನಡ್ಕದ ವರೆಗಿನ ಕಾಮಗಾರಿ ಈಗ ಪ್ರಗತಿಯಲ್ಲಿದೆ. ಆದರೆ ಕರ್ನಾಟಕ ಭಾಗದಲ್ಲಿ ಇದುವರೆಗೂ ಯೋಜನೆಯ ಅನುಷ್ಠಾನದಲ್ಲಿ ನಿರೀಕ್ಷಿತ ಪ್ರಗತಿ ಕಂಡಿಲ್ಲ.
ರಾಷ್ಟ್ರೀಯ ಎಕ್ಸ್‌ಪ್ರೆಸ್ ಹೆದ್ದಾರಿ ಕಾರಿಡಾರ್‌ಗಳಂತೆಯೇ ರಾಷ್ಟ್ರೀಯ ವಿದ್ಯುತ್ ಕಾರಿಡಾರ್‌ಗಳನ್ನು ನಿರ್ಮಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಕೇಂದ್ರ ಸರಕಾರ ಕೈಗೆತ್ತಿಕೊಂಡಿದೆ. ಸೌರಶಕ್ತಿಯಂತಹ ಅಸಾಂಪ್ರದಾಯಿಕ ಇಂಧನ ಸಂಪನ್ಮೂಲಗಳನ್ನು ಬಳಸಿಕೊಂಡು ಬೃಹತ್ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸುವ ಯೋಜನೆ ಹೊಂದಲಾಗಿದ್ದು, ಉತ್ಪಾದಿತ ಸ್ಥಳದಿಂದ ಅವಶ್ಯಕತೆಯಿರುವ ಸ್ಥಳಗಳಿಗೆ ವಿದ್ಯುತ್ ರವಾನೆಗೆ ಸಮರ್ಪಕವಾದ ಕಾರಿಡಾರ್‌ಗಳನ್ನು ನಿರ್ಮಿಸಲಾಗುತ್ತದೆ. ಅದರ ಭಾಗವಾಗಿಯೇ ಉಡುಪಿ-ಕಾಸರಗೋಡು ವಿದ್ಯುತ್ ಮಾರ್ಗದ ಯೋಜನೆ ಕೂಡ ಅನುಷ್ಠಾನದ ಹಂತದಲ್ಲಿದೆ.