UTKADAR: ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಇಲ್ಲ - ಸ್ಪೀಕರ್ ಖಾದರ್
Sunday, July 2, 2023
ಮಂಗಳೂರು: ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಇಲ್ಲ. ಸರಕಾರ ಬದಲಾದರೂ ಜನೋಪಕಾರಿ ಅಭಿವೃದ್ಧಿ ಯೋಜನಗೆಳು ಯಾವುದೇ ತಡೆಯಿಲ್ಲದೆ ಮುಂದುವರಿಯುತ್ತವೆ. ನಮ್ಮ ಸರಕಾರ ಅಭಿವೃದ್ಧಿಪರವಾಗಿದೆ ಎಂದು ಮಂಗಳೂರು ಶಾಸಕ ಹಾಗೂ ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ ಹೇಳಿದರು.
ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಯ ಜತೆ ಮಾತನಾಡಿದರು.
ಕಾಂಗ್ರೆಸ್ ಸರಕಾರ ಜನತೆಗೆ ನೀಡಿರುವ ಎಲ್ಲ ಗ್ಯಾರಂಟಿ ಭರವಸೆಗಳನ್ನೂ ಈಡೇರಿಸುತ್ತದೆ. 200 ಯುನಿಟ್ ಉಚಿತ ವಿದ್ಯುತ್ ಒದಗಿಸಲು ರಾಜ್ಯದಲ್ಲಿ ಯಾವುದೇ ಸಂಪನ್ಮೂಲದ ಕೊರತೆಯಿಲ್ಲ. ಅಲ್ಲದೆ ಹೆಚ್ಚುವರಿ ಉತ್ಪಾದನೆಯಾಗುವ ವಿದ್ಯುತ್ ಅನ್ನು ಅವಶ್ಯಕತೆ ಇರುವ ರಾಜ್ಯಗಳಿಗೆ ಮಾರಾಟ ಮಾಡುವ ಮೂಲಕ ಹೆಚ್ಚಿನ ಆದಾಯ ಸಂಗ್ರಹಿಸಲಾಗುತ್ತದೆ. ಆ ಮೂಲಕ ಉಚಿತ ವಿದ್ಯುತ್ ನೀಡಿಕೆಯಿಂದ ಆಗುವ ಹೊರೆಯನ್ನು ಸರಿದೂಗಿಸಲಾಗುವುದು ಎಂದು ಖಾದರ್ ಹೇಳಿದರು.
ಸರಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯವನ್ನು ಈಗಾಗಲೇ ಘೋಷಿಸಲಾಗಿದೆ. ಉಳಿದ ಗ್ಯಾರಂಟಿಗಳನ್ನೂ ಈಡೇರಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಕರಾವಳಿ ಭಾಗದಲ್ಲಿ ಅನುಮೋದನೆ ಪಡೆದು ಜಾರಿಯಾಗದೆ ಇರುವ ಅಭಿವೃದ್ಧಿ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೆಲವು ಯೋಜನೆಗಳು ನನೆಗುದಿಗೆ ಬಿದ್ದಿವೆ. ಅವುಗಳನ್ನು ಶೀಘ್ರ ಪೂರ್ಣಗೊಳಿಸಲು ಆದ್ಯತೆ ನೀಡಲಾಗುವುದು ಎಂದು ಖಾದರ್ ಹೇಳಿದರು.