INSPIRATION: ಸೆಲೂನ್ ಕೆಲಸದ ವಿಶ್ರಾಂತಿಯ ಮರೆತು ವಿಶೇಷಚೇತನರು, ವೃದ್ಧರಿಗೆ ಮಿಡಿಯುವ ಉಡುಪಿಯ ಸತೀಶ್

INSPIRATION: ಸೆಲೂನ್ ಕೆಲಸದ ವಿಶ್ರಾಂತಿಯ ಮರೆತು ವಿಶೇಷಚೇತನರು, ವೃದ್ಧರಿಗೆ ಮಿಡಿಯುವ ಉಡುಪಿಯ ಸತೀಶ್

 

ನಾವು ಬಿಡುವಿಲ್ಲದ ಕೆಲಸವನ್ನು ವಾರವಿಡೀ ಮಾಡಿ, ವೀಕೆಂಡ್ ನಲ್ಲಿ ಏನು ಮಾಡುತ್ತೇವೆ? ಎಲ್ಲಾದರೂ ಟೂರ್, ಶಾಪಿಂಗ್ ಅಥವಾ ಕಾಲುಚಾಚಿ ವಿಶ್ರಾಂತಿಯನ್ನು ಪಡೆದುಕೊಳ್ಳುವ ಎಂದುಕೊಳ್ಳುತ್ತೇವೆ. ಆದರೆ ಉಡುಪಿಯ ಸತೀಶ್ ಸುವರ್ಣ ಹಾಗೆ ಮಾಡೋದಿಲ್ಲ.

ಅವರಿಗೆ ವೀಕೆಂಡ್ ಎಂದರೆ ಮಂಗಳವಾರ. ಕಾರಣ, ಅವರ ವೃತ್ತಿ ಸೆಲೂನ್. ಬೆಳಗ್ಗಿನಿಂದ ಸಂಜೆವರೆಗೂ ಬುಧವಾರದಿಂದ ಸೋಮವಾರದವರೆಗೆ ಬಿಡುವಿಲ್ಲದ ಕೆಲಸ. ಅವರ ಕ್ಷೌರದಂಗಡಿಯಲ್ಲಿ ಅವರೇ ಮಾಲೀಕ, ಅವರೇ ನೌಕರ. ಬಂದ ಗ್ರಾಹಕರಿಗೆ ತೃಪ್ತಿಯಾಗುವಂತೆ ಕೇಶವಿನ್ಯಾಸಗಳನ್ನು ಮಾಡಿ ಮನೆಗೆ ತೆರಳುವಾಗ ರಾತ್ರಿಯಾಗುತ್ತದೆ. ಮತ್ತೆ ಮರುದಿನ ಬೆಳಗ್ಗೆ 7 ಗಂಟೆಗೆ ಆದಿಉಡುಪಿಯ ಆದಾಯ ತೆರಿಗೆ ಇಲಾಖೆ ಕಚೇರಿ ಎದುರು ಇರುವ ತನ್ನ ಗೌರವ್ ಹೇರ್ ಡ್ರೆಸಿಂಗ್ ಸೆಲೂನ್ ಬೀಗ ತೆರೆಯುತ್ತಾರೆ. ಸೆಲೂನ್ ಗೆ ಗೌರವ್ ಎಂಬ ಹೆಸರಿರುವಂತೆ ತನ್ನ ವೃತ್ತಿಗೂ ಗೌರವ ನೀಡುವ ಕೆಲಸವನ್ನು ಸದ್ದಿಲ್ಲದೆ ಮಾಡುತ್ತಾ ಬಂದಿರುವ ಸತೀಶ್ ಬಿಡುವಿನ ದಿನ ಎಂಬ ಮಂಗಳವಾರ ಮಾಡುವ ಕೆಲಸವೇ ಕುತೂಹಲದಾಯಕ.

 ಸತೀಶ್ ಮಂಗಳವಾರ ಎಲ್ಲಿಗೆ ಹೋಗುತ್ತಾರೆ?

ಮಂಗಳವಾರ ಸೆಲೂನ್ ಶಾಪ್ ಗಳಿಗೆ ರಜಾದಿನ. ಆದರೆ ಸತೀಶ್ ಸುವರ್ಣ ಅವರು ಮಂಗಳವಾರ ಸಮೀಪದ ಕಾರ್ಕಳ ಅಥವಾ ಉಡುಪಿ ಸುತ್ತಮುತ್ತ ಪ್ರದೇಶಗಳಿಗೆ ಬೆಳಗ್ಗೆಯೇ ಮನೆಯಿಂದ ಹೊರಡುತ್ತಾರೆ.

ಉಪ್ಪೂರಿನ ಸಾಲ್ಮರದಲ್ಲಿರುವ ಸ್ಪಂದನ ವಿಶೇಷ ಚೇತನ ಶಾಲೆ, ನೇಜಾರು ಪ್ರಗತಿನಗರದಲ್ಲಿರುವ ಸ್ಪಂದನ ವಿಶೇಷ ಚೇತನ ಶಾಲೆ, ಕಟಪಾಡಿಯಲ್ಲಿರುವ ಕಾರುಣ್ಯ ವೃದ್ದಾಶ್ರಮ, ಕಾರ್ಕಳದ ಅಯ್ಯಪ್ಪನಗರದಲ್ಲಿರುವ ವಿಜೇತ ವಿಶೇಷ ಶಾಲೆ, ಕಾರ್ಕಳದ ರಂಗನಪಲ್ಕೆಯಲ್ಲಿರುವ ಹೊಸಬೆಳಕು ವೃದ್ಧಾಶ್ರಮ, ಕಾರ್ಕಳದ ಸುರಕ್ಷಾ ಸೇವಾಶ್ರಮ. ಈ ಆರು ಕಡೆಗಳಲ್ಲಿ ಒಂದು ಕಡೆಯಂತೂ ಪ್ರತಿ ಮಂಗಳವಾರ ಸತೀಶ್ ಸುವರ್ಣ ಸಿಕ್ಕೇ ಸಿಗುತ್ತಾರೆ. ಅವರಿಗೆ ಶಂಕರ್ ಸಾಲಿಯಾನ್ ಸಾಥ್ ನೀಡುತ್ತಾರೆ.

ಎಂಡೋಸಲ್ಫಾನ್ ಪೀಡಿತರ ಕಥೆ ನೋಡಿ ಈ ತೀರ್ಮಾನ ಮಾಡಿದೆ:

ಹೀಗನ್ನುತ್ತಾರೆ ಸತೀಶ್. ವಿಶೇಷಚೇತನರು, ವೃದ್ಧರನ್ನು ಭೇಟಿಯಾಗಿ, ಅವರ ಕೇಶವನ್ನು ಅಂದಗೊಳಿಸುವ ಸೇವೆಯನ್ನು ಸತೀಶ್ ಮಾಡಲು ಆರಂಭಿಸಿದ್ದರ ಹಿಂದೊಂದು ಕಥೆ ಇದೆ. ಅದನ್ನು ಅವರೇ ಹೇಳುವುದು ಹೀಗೆ.

‘’ನನ್ನ ಸೆಲೂನ್ ನಲ್ಲಿ ಟಿ.ವಿ. ಇದೆ. ಹೀಗೊಮ್ಮೆ ಟಿ.ವಿ. ನೋಡುತ್ತಿದ್ದಾಗ ಎಂಡೋಸಲ್ಫಾನ್ ಸಂತ್ರಸ್ತರ ಕುರಿತ ಮಾಹಿತಿ ಬಂತು. ಅವರ ಕುರಿತು ನಾನು ಹಿಂದೆಯೂ ಓದಿದ್ದೆ. ಯಾಕೆ ಅವರಿಗೆ ಸೇವೆ ಕೊಡಬಾರದು ಎಂದು ಮನಸ್ಸಿನಲ್ಲಿ ನಿರ್ಧರಿಸಿದೆ. ಆದರೆ ಉಡುಪಿಯಿಂದ ದೂರದ ಕೊಕ್ಕಡ, ನೆಲ್ಯಾಡಿ ಕಡೆಗೆ ತೆರಳಿ, ಬರುವುದು ಕಷ್ಟವಾದ ವಿಚಾರ. ಹೀಗೆ ಹೋಗುವ ವಿಚಾರವನ್ನು ಕೈಬಿಟ್ಟೆ. ಆದರೆ ಅಂಥವರಿಗೆ ಏನಾದರೂ ನನ್ನಿಂದಾದ ಸೇವೆ ಮಾಡಬೇಕು ಎಂಬ ತುಡಿತವಿತ್ತು. ಆಗ ಸ್ನೇಹಿತರ ಕಾಂಟ್ಯಾಕ್ಟ್ ಮೂಲಕ ವಿಶೇಷಚೇತನರ ಆಶ್ರಮದ ಮಾಹಿತಿ ದೊರೆಯಿತು. ಅಲ್ಲಿ ನನ್ನ ಮನದ ವಿಚಾರ ಹೇಳಿದಾಗ ಅವರೂ ಸಂತೋಷದಿಂದ ಒಪ್ಪಿಕೊಂಡರು. ಈಗ ಇದು ನನ್ನ ದಿನಚರಿಯ ಭಾಗವಾಗಿದೆ. ಅದರಲ್ಲಿ ಸಂತೋಷ, ತೃಪ್ತಿ ಇದೆ’’

ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ:

ಹೀಗೊಂದು ಮಾತು ಪ್ರಚಲಿತದಲ್ಲಿದೆ. ಸತೀಶ್ ಸುವರ್ಣ ಇದನ್ನು ಅಕ್ಷರಶಃ ಪಾಲಿಸುತ್ತಾರೆ. ತನ್ನ ದುಡಿಮೆಯ ಉಳಿತಾಯದ ಹಣವನ್ನು ಪದ್ಮಶ್ರೀ ಪುರಸ್ಕೃತ ಹಾಜಬ್ಬರ ಮನೆಗೆ ತೆರಳಿ ಅವರ ಶಾಲೆಗೆ ಕೊಟ್ಟಿದ್ದಾರೆ. ಯಾರಾದರೂ ಕಷ್ಟದಲ್ಲಿದ್ದರೆ ಮಿಡಿಯುವ ಹೃದಯ ಸತೀಶ್ ಗಿದೆ. ಇದು ಪ್ರೇರಣಾದಾಯಿ ವಿಚಾರವೂ ಹೌದು. ಸತೀಶ್ ದೂರವಾಣಿ ಸಂಖ್ಯೆ ಹೀಗಿದೆ. 9916241561. 


Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ